ಶನಿವಾರ, ಮೇ 28, 2022
30 °C
ಬೆಂಗಳೂರಿನಲ್ಲೂ ಆರಂಭವಾದ ಎನ್‌ಐಎ ಶಾಖೆ l 22 ಜನರಿಗೆ ಶಿಕ್ಷೆ

ರಾಜ್ಯದಲ್ಲಿ 12ಕ್ಕೂ ಹೆಚ್ಚು ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ 2012ರಿಂದ ಈತನಕ ದಾಖಲಾಗಿರುವ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದ 12ಕ್ಕೂ ಹೆಚ್ಚು ಪ್ರಕರಣಗಳು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತೆಕ್ಕೆಯಲ್ಲಿವೆ. ಇವುಗಳಲ್ಲಿ 329 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ವಿಶೇಷವೆಂದರೆ 2016ರಿಂದ ಈತನಕ 22 ಜನರಷ್ಟೇ  ಶಿಕ್ಷೆಗೆ ಗುರಿಯಾಗಿದ್ದಾರೆ.

ರಾಜ್ಯ ವ್ಯಾಪ್ತಿಯಲ್ಲಿ ಎನ್‌ಐಎ ಅಡಿ ದಾಖಲಾಗಿರುವ ಆರ್‌ಎಸ್‌ಎಸ್‌ ಸ್ವಯಂ ಸೇವಕ ರುದ್ರೇಶ್ ಕೊಲೆ, ಭಯೋತ್ಪಾದನೆ ಹರಡುವ ಆರೋಪದಡಿಯಲ್ಲಿ ನಿಷೇಧಿತ ಐಎಸ್‌ ಸಂಘಟನೆ ಜೊತೆಗೂಡಿ ರಾಜ್ಯದ ವಿವಿಧೆಡೆ ಚಟುವಟಿಕೆ ನಡೆಸಿದ ಆರೋಪ ಹೊತ್ತವರು ಹಾಗೂ ಅಲ್‌–ಹಿಂದ್ ಜಿಹಾದಿ ಸಭೆಗಳಲ್ಲಿ ಪಾಲ್ಗೊಂಡ ಆರೋಪಿಗಳು, ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಕೋಕೊನಟ್‌ ಗ್ರೋವ್‌ ರೆಸ್ಟೋರೆಂಟ್‌ ಮುಂಭಾಗದಲ್ಲಿ ನಡೆದ ಬಾಂಬ್‌ ಸ್ಫೋಟ, ಜಮಾತ್‌ ಉಲ್‌ ಮುಜಾಹಿದ್ದೀನ್‌ನ ಬಾಂಗ್ಲಾದೇಶಿ ಸದಸ್ಯರು ಕೃಷ್ಣಗಿರಿ ಕಾಡಿನಲ್ಲಿ ರಾಕೆಟ್‌ ಹಾರಿಸುವ ತರಬೇತಿ ಪಡೆದದ್ದು ಮತ್ತು ಉಗ್ರಗಾಮಿ ಕೃತ್ಯಗಳ ಬಳಕೆಗಾಗಿ ವಿವಿಧೆಡೆ ಡಕಾಯಿತಿಗಳನ್ನು ನಡೆಸಿದ್ದು, ಶ್ರೀಲಂಕಾ ಮತ್ತು ಬಾಂಗ್ಲಾ ದೇಶಗಳಿಂದ ಮಾನವ ಕಳ್ಳಸಾಗಣೆ, ಸಂಸದ ಪ್ರತಾಪ್‌ ಸಿಂಹ ಅವರನ್ನು 2012ರಲ್ಲಿ ಕೊಲೆ ಮಾಡುವ ಸಂಚು ರೂಪಿಸಿದ್ದು, ಲಷ್ಕರ್‌ ಎ ತೈಯಬಾ (ಎಲ್‌ಇಟಿ) ಚಟುವಟಿಕೆ, ಫೇಕ್‌ ಇಂಡಿಯನ್‌ ಕರೆನ್ಸಿ ನೋಟ್‌ (ಎಫ್‌ಐಸಿಎನ್) ಚಲಾವಣೆ, ಕೆ.ಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣ ಸೇರಿದಂತೆ ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯೂ ಎನ್‌ಐಎ ತನಿಖೆ ವ್ಯಾಪ್ತಿಗೆ ಸೇರ್ಡಪೆಯಾಗಿದೆ. 

ಇವುಗಳಲ್ಲಿ ಒಟ್ಟು ಐದು ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು ಇದರಲ್ಲಿನ ಒಟ್ಟು 109 ಆರೋಪಿಗಳು ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ, ಕೊಲ್ಕತ್ತಾ, ಚೆನ್ನೈ, ಸೇಲಂ ಜೈಲುಗಳಲ್ಲಿಯೂ ಆರೋಪಿಗಳಿದ್ದಾರೆ. ಬಹುತೇಕರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಕಲಂಗಳ ಅಡಿಯಲ್ಲಿನ ಅಪರಾಧಗಳಿಗಿಂತಲೂ ಮಿಗಿಲಾಗಿ, ‘ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ–1967’ರ (ಯುಎಪಿಎ) ವಿವಿಧ ಕಲಂಗಳ ಅಡಿಯಲ್ಲಿ ಬಂಧನ
ದಲ್ಲಿದ್ದಾರೆ.

ಎಫ್‌ಐಸಿಎನ್‌, ಎಲ್ಇಟಿ, ಮೈಸೂರು ಕೋರ್ಟ್‌ನಲ್ಲಿ ಬಾಂಬ್‌ ಸ್ಫೋಟಿಸಿದ ಮತ್ತು ಪಾಸ್‌ಪೋರ್ಟ್‌ ಪ್ರಕರಣಗಳಲ್ಲಿ 22 ಜನರಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ವಿವಿಧ ಪ್ರಕರಣಗಳಲ್ಲಿ ಒಟ್ಟು 219 ಜನ ಆರೋಪಿಗಳಿಗೆ ಜಾಮೀನು, ಡಿಫಾಲ್ಟ್‌ ಜಾಮೀನು (ನಿಗದಿತ ಅವಧಿಯಲ್ಲಿ ಕೋರ್ಟ್‌ಗೆ ಅಂತಿಮ ವರದಿಯನ್ನು ಸಲ್ಲಿಸದೇ ಹೋದಲ್ಲಿ ತಂತಾನೇ ಲಭ್ಯವಾಗುವ ಜಾಮೀನು ಹಕ್ಕು) ದೊರೆತಿದ್ದರೆ, ಎಲ್ಲಾ ಪ್ರಕರಣಗಳಲ್ಲಿ ಬೇಕಾದ 14 ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈತನಕ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ 118ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 

ರಾಜ್ಯದಲ್ಲಿ 2016ರಿಂದ ವಿಶೇಷ ಪ್ರಾಸಿಕ್ಯೂಟರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಿ.ಪ್ರಸನ್ನಕುಮಾರ್, ‘ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಎನ್‌ಐಎ ತನ್ನ ಶಾಖೆಯನ್ನು ಆರಂಭಿಸಿದೆ. ಆತಂಕವಾದಿ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಇವುಗಳ ಜೊತೆ ಸಂಪರ್ಕ ಇರಿಸಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ‘ ಎಂದು ವಿವರಿಸುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.