ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಐವರಿಗೆ ತಲಾ 7 ವರ್ಷ ಕಠಿಣ ಜೈಲು ಶಿಕ್ಷೆ

ಮುಡಾ ಅಕ್ರಮ: ಕಾಂಗ್ರೆಸ್ ಮುಖಂಡ ಸೇರಿ ಐವರು ಅಪರಾಧಿಗಳಿಗೆ ತಲಾ ₹ 1 ಕೋಟಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ₹ 5 ಕೋಟಿ ಮೊತ್ತದ ದುರುಪಯೋಗ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐವರನ್ನು ಅಪರಾಧಿಗಳು ಎಂದು ಪರಿಗಣಿಸಿ ತಲಾ ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹ 1 ಕೋಟಿ ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಇದೇ 8ರಂದು (ಗುರುವಾರ) ತೀರ್ಪು ಪ್ರಕಟಿಸಿದ್ದಾರೆ.

ಮೆಸರ್ಸ್‌ ಎ.ಆರ್.ಲಾಜಿಸ್ಟಿಕ್ಸ್‌ ಹೆಸರಿನಲ್ಲಿ ಅದಿರು ಗಣಿಗಾರಿಕೆ ವ್ಯವಹಾರ ನಡೆಸುತ್ತಿದ್ದ ಕೆಬ್ಬಳ್ಳಿ ಆನಂದ್‌, ಮೆಸರ್ಸ್‌ ಫ್ಯೂಚರ್‌ ಫಾರ್ಮ್‌ ಅಂಡ್‌ ಎಸ್ಟೇಟ್ಸ್‌ ಲಿಮಿಟೆಡ್‌ನ ಸಿಇಒ ನಾಗಲಿಂಗಸ್ವಾಮಿ, ರಿಯಲ್‌ ಎಸ್ಟೇಟ್‌ ಏಜೆಂಟ್‌ ಹಾಗೂ ಮೆಸರ್ಸ್‌ ಆಕಾಶ್‌ ಎಂಟರ್‌ಪ್ರೈಸಸ್‌ ಮಾಲೀಕ ಚಂದ್ರಶೇಖರ್‌, ಮುಡಾದ ಪ್ರಥಮ ದರ್ಜೆ ಸಹಾಯಕ ಎಚ್‌.ಕೆ.ನಾಗರಾಜ ಹಾಗೂ ಕೆಬ್ಬಳ್ಳಿ ಆನಂದ್‌ ಅವರ ಸಹಾಯಕ ಕೆ.ಬಿ. ಹರ್ಷನ್‌ ಶಿಕ್ಷೆಗೊಳಗಾದ
ಅಪರಾಧಿಗಳಾಗಿದ್ದಾರೆ.

ಅಪರಾಧಿಗಳು ವೋಚರ್‌ ಮತ್ತು ಚೆಕ್‌ಗಳನ್ನು ಮೋಸದಿಂದ ಭರ್ತಿ ಮಾಡಿ ತಲಾ ₹ 1 ಕೋಟಿ ಮೊತ್ತದ ಐದು ಚೆಕ್‌ಗಳನ್ನು ಮುಡಾದಿಂದ ಇಂಡಿಯನ್‌ ಬ್ಯಾಂಕ್‌ನ ಮಂಡ್ಯದ ಶಾಖೆಯಲ್ಲಿ ಠೇವಣಿ ಇರಿಸಿದ್ದರು. ನಂತರ ಈ ಮೊತ್ತವನ್ನು ಮೆಸರ್ಸ್‌ ಆಕಾಶ್‌ ಎಂಟರ್‌ಪ್ರೈಸಸ್‌ನ ಖಾತೆಗೆ ವರ್ಗಾಯಿಸಿಕೊಂಡು ಮುಡಾಕ್ಕೆ ₹ 5 ಕೋಟಿ ನಷ್ಟ ಉಂಟು ಮಾಡಿದ ಆರೋಪ ಎದುರಿಸುತ್ತಿದ್ದರು. 

ಎಲ್ಲ ಅಪರಾಧಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120 ಬಿ, 409, 420, 467, 468 ಮತ್ತು 471 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1), (ಸಿ) ಮತ್ತು ಡಿ ಅಡಿಯಲ್ಲಿ ಸಿಬಿಐ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು 2015ರ ಜೂನ್‌ 27ರಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಕೆ.ಎಸ್‌.ಹೇಮಾ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು