ಬುಧವಾರ, ನವೆಂಬರ್ 25, 2020
18 °C

ಕೊರೊನಾ: ಮಕ್ಕಳಲ್ಲಿ ಬಹು ಅಂಗಗಳ ಉರಿಯೂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಹತ್ತು ವರ್ಷದೊಳಗಿನ ಮಕ್ಕಳೆಡೆಗೆ ಕೊಂಚ ಮೃದು ಧೋರಣೆ ತಾಳಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಲಕ್ಷಣರಹಿತರಾಗಿರುತ್ತಾರೆ ಮತ್ತು ಇತರರಿಗೆ ಸೋಂಕು ರವಾನಿಸುವ ವಾಹಕರಾಗಿರುತ್ತಾರೆ. ಮಕ್ಕಳಲ್ಲಿ ಸಾಮಾನ್ಯವಾಗಿ ಮೂಗು ಸೋರುವಿಕೆ, ಕೆಮ್ಮು, ಕಣ್ಣು ಕೆಂಪಾಗುವುದು, ಜ್ವರ, ಭೇದಿ ಮುಂತಾದ ರೋಗಲಕ್ಷಣಗಳಿರುತ್ತವೆ. ನೆಗಡಿಗೆ ಸಂಬಂಧಿಸಿದ ಲಕ್ಷಣಗಳು ಮತ್ತು ಕೊರೊನಾ ಸೋಂಕಿನ ಲಕ್ಷಣಗಳು ಒಂದೇ ರೀತಿಯಲ್ಲಿರುವುದರಿಂದ ಲಕ್ಷಣಗಳನ್ನಾಧರಿಸಿ ಮಕ್ಕಳಲ್ಲಿ ಕೊರೊನಾವನ್ನು ಗುರುತಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಬಿ.ರಂಗಸ್ವಾಮಿ.

‘ಸಾಮಾನ್ಯವಾಗಿ ಮಕ್ಕಳಲ್ಲಿ ಕೊರೊನಾದ ಸೋಂಕು ಸೌಮ್ಯ ಸ್ವರೂಪದ್ದಾಗಿದ್ದರೂ ಯಾವುದೋ ನತದೃಷ್ಟ ಮಗು ಗಂಭೀರ ಸಮಸ್ಯೆಗಳಿಗೆ ತುತ್ತಾಗಬಹುದು. ಅದರಲ್ಲೂ ಈಗಾಗಲೇ ಕ್ಯಾನ್ಸರ್, ಎಚ್ಐವಿ, ಮೂತ್ರಪಿಂಡ ವೈಫಲ್ಯ ಮುಂತಾದ ಗಂಭೀರ ಸ್ವರೂಪದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಅದರ ತೀವ್ರತೆ ಹೆಚ್ಚು. ಅದು ನ್ಯುಮೋನಿಯಾದಿಂದ ಮಿದುಳುಪೊರೆಯ ಉರಿಯೂತದಂಥ ನರಮಂಡಲದ ‌ಸಮಸ್ಯೆಯವರೆಗೆ ಯಾವ ಸ್ವರೂಪದಲ್ಲಾದರೂ ಇರಬಹುದು’ ಎನ್ನುತ್ತಾರೆ ಅವರು.

‘ಹಾಗೆಯೇ ಕೆಲವು ‌ಮಕ್ಕಳಲ್ಲಿ ಕವಾಸಾಕಿ ಕಾಯಿಲೆಯನ್ನು ಹೋಲುವಂಥ ಬಹುಅಂಗಗಳ ಉರಿಯೂತದ ಸಿಂಡ್ರೋಮ್(Multi System Inflammatory Syndrome)ನಂತಹ ಮಾರಣಾಂತಿಕ ಸಮಸ್ಯೆ ಉಂಟಾಗಬಹುದು. ಇದರಿಂದ ಮೂತ್ರಪಿಂಡ, ನರಮಂಡಲ, ಹೃದಯ, ಕಣ್ಣು ‌ಮುಂತಾದ ಪ್ರಮುಖ ಅಂಗಗಳು ಹಾನಿಗೊಳಗಾಗಿ ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಅಂಧತ್ವ‌ ಮುಂತಾದ ಸಮಸ್ಯೆಗಳಿಂದ ಮಗು ಸಾವನ್ನಪ್ಪಬಹುದು ಇಲ್ಲವೆ ದೀರ್ಘಕಾಲದ ಅನಾರೋಗ್ಯದಿಂದ ನರಳಬಹುದು. ಈ ಸಮಸ್ಯೆಯ ಲಕ್ಷಣಗಳು ಕಂಡುಬಂದರೆ ಇಮ್ಯುನೊಗ್ಲಾಬ್ಯುಲಿನ್‌, ಸ್ಟಿರಾಯ್ಡ್, ಆ್ಯಸ್ಪಿರಿನ್ ಮುಂತಾದ ಔಷಧಗಳಿಂದ ಚಿಕಿತ್ಸೆ ನೀಡಲಾಗುತ್ತದೆ’ ಎನ್ನುತ್ತಾರೆ ಡಾ. ರಂಗಸ್ವಾಮಿ.

ಪೋಷಕರಿಗೆ ಸಲಹೆಗಳು

l ಜನಸಂದಣಿಯಿರುವ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬಾರದು.

l ಫ್ಲೂ ಲಸಿಕೆಯನ್ನೂ ಒಳಗೊಂಡು ಕಾಲಕಾಲಕ್ಕೆ ನೀಡಬೇಕಾದ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು.

l ಸತು ಮತ್ತು ಜೀವಸತ್ವಗಳನ್ನೊಳಗೊಂಡಿರುವ ಪೌಷ್ಟಿಕಾಂಶಭರಿತ ತಾಜಾ ನೈಸರ್ಗಿಕ ಆಹಾರಗಳನ್ನು ಮಗುವಿಗೆ ನೀಡಬೇಕು. ಸಾಕಷ್ಟು ನೀರು ಕುಡಿಯುವಂತೆ ಪ್ರೋತ್ಸಾಹಿಸಬೇಕು.

l ಅತಿತೂಕ ಮತ್ತು ಬೊಜ್ಜು ಮೈಯುಳ್ಳ ಮಕ್ಕಳು ತೂಕ ಇಳಿಸಿಕೊಳ್ಳುವಂತೆ ಉತ್ತೇಜಿಸಬೇಕು.‌

l ಸ್ವಲ್ಪ ಹೊತ್ತು ಸೂರ್ಯನ ಕಿರಣಗಳಿಗೆ ದೇಹವನ್ನೊಡ್ಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.

l ಆಸ್ತಮಾದಿಂದ ಬಳಲುತ್ತಿರುವ ಮಗುವಿಗೆ ಶಿಫಾರಸ್ಸು ಮಾಡಲಾದ ಔಷಧವನ್ನು ತಪ್ಪದೇ ನೀಡಬೇಕು.

l ಕ್ಯಾನ್ಸರ್, ಎಚ್‌ಐವಿ, ಮೂತ್ರಪಿಂಡ ಮತ್ತು ಹೃದಯ ಸಮಸ್ಯೆಗಳಿರುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು.

l ಒಮ್ಮೆ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖವಾದ ನಂತರವೂ ಪುನಃ ಜ್ವರ, ತೀವ್ರತರದ ಹೊಟ್ಟೆನೋವು, ತುಟಿಗಳು ನೀಲಿಗಟ್ಟುವುದು ಮುಂತಾದ ಲಕ್ಷಣಗಳು ಕಾಣಿಸಿಕೊಂಡರೆ, ಅವು ಬಹುಅಂಗಗಳ ಉರಿಯೂತದ ಸಿಂಡ್ರೋಮ್ ಲಕ್ಷಣಗಳಾಗಿರುವುದರಿಂದ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು