ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಾಧಿಕಾರಿ ಏಕೆ ಬೇಡ: ಮುರುಘಾ ಮಠ ‍ಪ್ರಕರಣದಲ್ಲಿ ಕಾನೂನು ತಜ್ಞರ ಅಭಿಮತ

Last Updated 17 ಡಿಸೆಂಬರ್ 2022, 18:54 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ರಿಟ್‌ ಅರ್ಜಿ ವಿಚಾರಣೆ ವೇಳೆ ವ್ಯಕ್ತವಾದ ಅಂಶಗಳಲ್ಲಿ,‘ಮಠಗಳು ಸರ್ಕಾರದ ನಿಯಂತ್ರಣದ ವ್ಯಾಪ್ತಿಗೆ ಒಳಪಡುವುದಿಲ್ಲವೇ’ ಎಂಬ ಬಗೆಗಿನ ಜಿಜ್ಞಾಸೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌ನ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಮಠಗಳ ಆಡಳಿತದಲ್ಲಿ ಸರ್ಕಾರ ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಆದಾಗ್ಯೂ, ಸಾರ್ವಜನಿಕ ಹಿತಾಸಕ್ತಿ ಅಡಗಿದ್ದಾಗ ಅಥವಾ
ಮಠದ ಆಧೀನದಲ್ಲಿರುವಶಿಕ್ಷಣ ಸಂಸ್ಥೆಗಳು, ಅವುಗಳ ಆಡಳಿತ ಕುಸಿದಿದೆ ಎಂದು ಕಂಡು ಬಂದಾಗ ಸ್ಥಿರ–ಚರಾಸ್ತಿ ರಕ್ಷಣೆಗೆ ಆಡಳಿತಾಧಿಕಾರಿ ನೇಮಕ ಮಾಡಬಹುದು’ ಎನ್ನುತ್ತಾರೆ.

‘ಈ ಹಿಂದೆ ಸೋಸಲೆ ವ್ಯಾಸರಾಜ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದು. ಬೇಕಾದರೆ ಆಡಳಿತಾಧಿಕಾರಿಯ ಜೊತೆ ಸಮುದಾಯಕ್ಕೆ ಸಂಬಂಧಿಸಿದ ತಜ್ಞರು, ಹಿರಿಯರ ಒಪ್ಪಿಗೆ ಪಡೆದು ಅವರನ್ನೂ ಸೇರ್ಪಡೆ ಮಾಡಬಹುದು. ಸ್ವಾಭಾವಿಕವಾಗಿ ಸಿವಿಲ್‌ ಪ್ರೊಸೀಜರ್ ಕೋಡ್‌ನ ಕಲಂ 92ರ ಅನುಸಾರ ಯಾವುದೇ ಭಕ್ತರು ಅಡ್ವೊಕೇಟ್‌ ಜನರಲ್‌ ಅಥವಾ ಕೋರ್ಟ್‌ ಸಮ್ಮತಿ ಪಡೆದು ಸ್ಕೀಂ ದಾವೆ ಸಲ್ಲಿಸುವುದು ಈವರೆಗಿನ ವಾಡಿಕೆಯಾಗಿದೆ’ ಎನ್ನುತ್ತಾರೆ.

ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ವಕೀಲ ಗಂಗಾಧರ ಆರ್.ಗುರುಮಠ ಅವರು,ಮುರುಘಾಶರಣರ ಪ್ರಕರಣದಲ್ಲಿ ಪ್ರಮುಖವಾದ ಮೂರು ಪ್ರಶ್ನೆಗಳಿವೆ ಎನ್ನುತ್ತಾರೆ.

l ಮುರುಘಾಮಠವು ಸರ್ಕಾರದಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿಗಳ ಅನುದಾನ ಪಡೆಯುತ್ತಿದೆ. ಚಿತ್ರದುರ್ಗದಲ್ಲಿ ಎತ್ತರದ ಬಸವ ಪ್ರತಿಮೆಗೆ ಮತ್ತು ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ಸರ್ಕಾರ ದಶಕಗಳಿಂದ ಕೋಟ್ಯಂತರ ಅನುದಾನ ನೀಡುತ್ತಿದೆ. ಈ ಕುರಿತ ಆಡಿಟ್ ವರದಿಗಳು ಸಮರ್ಪಕ ಅಂಕಿ ಅಂಶಗಳನ್ನು ಒದಗಿಸುತ್ತವೆಯಲ್ಲವೇ?

l ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿರುವ ಆದೇಶ ಪ್ರಶ್ನಿಸಿರುವ ಅರ್ಜಿದಾರರು ಸಾಮಾನ್ಯ ಭಕ್ತರು. ಸಾಮಾನ್ಯ ಭಕ್ತರು ಈ ರೀತಿ ನೇರವಾಗಿ ಹೈಕೋರ್ಟ್‌ ಮೆಟ್ಟಿಲೇರಲು ಕಾನೂನಿನಲ್ಲಿ ಇರುವ ಅವಕಾಶಗಳೇನು? ಅರ್ಜಿಯಲ್ಲಿ ಅರಿಲಿಜಿಯಸ್‌ ಡಿನಾಮಿನಶನ್‌ಗೆ ಸೂಕ್ತ ದಾಖಲೆ ಒದಗಿಸಿದರಷ್ಟೇ ಕೋರ್ಟ್‌ ಅದನ್ನು ಮಾನ್ಯ ಮಾಡಲು ಸಾಧ್ಯವಲ್ಲವೇ?

l ‘ಮುರುಘಾ ಶರಣರು ಮಠದ ಆಡಳಿತ ಅಥವಾ ಚಟುವಟಿಕೆಗಳಲ್ಲಿ ಮೂಗು ತೂರಿಸದಂತೆಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 8 (2) ಅನ್ವಯ ಕ್ರಿಮಿನಲ್‌ ಪ್ರಕರಣದ ಆರೋಪಿಯಾಗಿರುವ ಶರಣರು ಎಸ್‌ಜೆಎಂ ಮಠ ಮತ್ತು ಅದರಡಿಯಲ್ಲಿ ನಡೆಯುತ್ತಿರುವ ಇತರೆ ಸಂಸ್ಥೆಗಳ ಚಟುವಟಿಕೆಗಳಲ್ಲಿ ತಮ್ಮ ಅಧಿಕಾರ ಚಲಾಯಿಸದಂತೆ ಈಗಾಗಲೇ ನಿರ್ಬಂಧಿಸಿ ಆದೇಶಿಸಿದ್ದಾರೆ.ವಸ್ತುಸ್ಥಿತಿ ಹೀಗಿರುವಾಗ ಮಠದ ಆಡಳಿತದಲ್ಲಿ ಸರ್ಕಾರ ಸಂವಿಧಾನದ 162ನೇ ವಿಧಿಯ ಅನುಸಾರ ತನ್ನ ಅಧಿಕಾರ ಚಲಾಯಿಸಬಹುದು’ ಎಂಬ ಅಭಿಪ್ರಾಯವನ್ನು ಗುರುಮಠ ಅವರು ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT