ಶನಿವಾರ, ಜುಲೈ 24, 2021
20 °C

ಸಿಎಂ ಆಗುವ ಆತುರ ನನಗಿಲ್ಲ, ಪಕ್ಷ ಅಧಿಕಾರಕ್ಕೆ ತರುವುದಷ್ಟೇ ಗುರಿ: ಡಿಕೆಶಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ‘ಸಿಎಂ ಆಗುವ ಆತುರದಲ್ಲಿ ನಾನಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ’ ಎಂದು ಪುನರುಚ್ಚಿರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ವಿಧಾನಸೌಧದಲ್ಲಿ ಅಧಿಕಾರ ಹಿಡಿಯಲು ನನ್ನನ್ನು ಚಪ್ಪಡಿ ಕಲ್ಲಿನ ಮೆಟ್ಟಿಲು ಮಾಡಿಕೊಳ್ಳಿ ಎಂದು ನಾನೇ ಹೇಳಿದ್ದೇನೆ’ ಎಂದರು.

‘ಡಿ.ಕೆ. ಶಿವಕುಮಾರ್ ಅವರಿಗೆ ವಯಸ್ಸಿದೆ. ಸಿದ್ದರಾಮಯ್ಯನವರು 2023ಕ್ಕೆ ಮುಖ್ಯಮಂತ್ರಿ ಆಗಲಿ. ನಂತರ ಡಿ.ಕೆ. ಶಿವಕುಮಾರ್ ಆಗಲಿ’ ಎಂದು ಶಾಸಕ ರಾಮಪ್ಪ ಅವರ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದ ಅವರು, ‘ಸಿಎಂ ಆಗಬೇಕೆಂಬ ಆತುರವಿದೆ ಎಂದು ನಾನು ಯಾವತ್ತಾದರೂ ಹೇಳಿದ್ದೀನಾ? ಯಾರ‍್ಯಾರು ಏನೇನು ಸಲಹೆ ಕೊಡುತ್ತಾರೊ, ಕೊಡಲಿ ಅದನ್ನು ಸ್ವೀಕರಿಸೋಣ’ ಎಂದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿ ಸಮಸ್ಯೆಗೂ, ಕಾಂಗ್ರೆಸ್ ವಿಚಾರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ನಮ್ಮ ರೇಸ್ ಏನಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಅದಕ್ಕೆ ನಾವು ಸಮಯ ನೀಡಬೇಕು. ಅದನ್ನು ಬಿಟ್ಟು ಬೇರೆ ವಿಚಾರಕ್ಕೆ ಸಮಯ ನೀಡುವುದು ವ್ಯರ್ಥ’ ಎಂದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಗೆಲುವು ಸಾಧ್ಯ ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೌದಾ..? ಬಹಳ ಸಂತೋಷ’ ಎಂದಷ್ಟೆ ಪ್ರತಿಕ್ರಿಯಿಸಿದರು.

ಶಾಸಕರ ಇಂಥ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ಪಕ್ಷದ ಹೈಕಮಾಂಡ್‌ಗೆ ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ಶಾಸಕರ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದಿದ್ದರೆ, ಆ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು