ಗುರುವಾರ , ಜುಲೈ 29, 2021
27 °C

ಮುಖ್ಯಮಂತ್ರಿ ಆಗುವುದಲ್ಲ, ಪಕ್ಷ ಅಧಿಕಾರಕ್ಕೆ ತರುವುದೇ ಗುರಿ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದ ಮುಖ್ಯಮಂತ್ರಿ ಯಾಗಲು ನನಗೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಹೀಗೆ ಇನ್ನೂ ಯಾರ‍್ಯಾರಿಗೊ ಆಸೆ ಇರಬಹುದು. ಆದರೆ, ನಮ್ಮ ಗುರಿ ಮುಖ್ಯಮಂತ್ರಿ ಆಗುವುದಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ  ಚುನಾವಣೆ ಎದುರಿಸಲಿದೆ. ಪಕ್ಷ ಮುಖ್ಯ. ವ್ಯಕ್ತಿ ಪೂಜೆ ಅಲ್ಲ’ ಎಂದರು.

‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಚಾಮರಾಜ
ಪೇಟೆ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಪದೇ ಪದೇ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಎಲ್ಲರೂ ಹದ್ದು-ಬಸ್ತಿನಲ್ಲಿರಬೇಕು ಎಂದು ನಾನೂ ಹೇಳಿದ್ದೇನೆ, ದೆಹಲಿ ನಾಯಕರೂ ಹೇಳಿದ್ದಾರೆ. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ಈ ವಿಚಾರವಾಗಿ ಕರೆದು ವಿವರಣೆ ಕೇಳಿದ್ದೇನೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಇಲ್ಲಿದ್ದೇನೆ’ ಎಂದರು.

ವ್ಯಾಕ್ಸಿನೇಟ್ ಕರ್ನಾಟಕ: ‘ರಾಹುಲ್ ಗಾಂಧಿ ಜನ್ಮದಿನ (ಜೂನ್‌ 19) ಪ್ರಯುಕ್ತ ಪಕ್ಷದ ವತಿಯಿಂದ ‘ವ್ಯಾಕ್ಸಿನೇಟ್ ಕರ್ನಾಟಕ’ ಎಂಬ ಅಭಿಯಾನ ಆರಂಭಿಸಿದ್ದು, ಇದರಲ್ಲಿ 17 ವರ್ಷದೊಳಗಿನ ವಿದ್ಯಾರ್ಥಿಗಳು ಸೇರಿ ಎಲ್ಲರೂ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ತಮ್ಮದೇ ಆದ ರೀತಿಯಲ್ಲಿ ಎರಡು ನಿಮಿಷದ ವಿಡಿಯೊ ಮಾಡಿ, ಜುಲೈ 1ರ ಒಳಗೆ ಅದನ್ನು www.vaccinatekarnataka.com ಗೆ ಅಪ್‌ಲೋಡ್ ಮಾಡಬಹುದು. ವಿಡಿಯೊಗಳನ್ನು ಹಾಡು, ನೃತ್ಯ, ಸಂಗೀತ, ಕಲೆ ಸೇರಿದಂತೆ ಸೃಜನಾತ್ಮಕವಾಗಿ ಮಾಡಬಹುದು. ಅತ್ಯುತ್ತಮ ವಿಡಿಯೊ ಮಾಡಿದ 100 ಮಂದಿಗೆ ಆಂಡ್ರಾಯ್ಡ್ ಟ್ಯಾಬ್ ಬಹುಮಾನವಾಗಿ ನೀಡಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು