ಮಂಗಳವಾರ, ಏಪ್ರಿಲ್ 20, 2021
32 °C
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಸಕ ತನ್ವೀರ್‌ ಸೇಠ್‌

ಮೈಸೂರು ಪಾಲಿಕೆ ಚುನಾವಣೆ: ಕಾಂಗ್ರೆಸ್‌ನೊಳಗೆ ಆರದ ‘ಬೆಂಕಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಹಾಗೂ ಜೆಡಿಎಸ್‌ ಜೊತೆಗಿನ ಮೈತ್ರಿ ವಿಚಾರವಾಗಿ ಕಾಂಗ್ರೆಸ್‌ ಪಕ್ಷದೊಳಗೆ ಹೊತ್ತಿಕೊಂಡಿರುವ ಬೆಂಕಿ ಮತ್ತಷ್ಟು ಜೋರಾಗುವ ಲಕ್ಷಣ ಕಂಡುಬರುತ್ತಿದೆ.

‘ನಾನು ಮಾರಾಟಕ್ಕಿಲ್ಲ; ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ವ್ಯಕ್ತಿಪೂಜೆ ಮಾಡಬಾರದು. ಗಂಡು ಮಗು ಬೇಕೆಂದು ಬಯಸಿದವರಿಗೆ ಹೆಣ್ಣು ಮಗುವಾದರೆ ಏನು ಮಾಡಲು ಸಾಧ್ಯ?’ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್‌, ಸಿದ್ದರಾಮಯ್ಯ ವಿರುದ್ಧ ಗುಡುಗಿದರೆ;  ಸಿದ್ದರಾಮಯ್ಯ ಆಪ್ತ ಡಾ.ಎಚ್‌.ಸಿ.ಮಹದೇವಪ್ಪ ಅವರು ‘ಈ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರಿಗೆ ಎಲ್ಲ ವಿಚಾರವೂ ಗೊತ್ತಿದೆ’ ಎಂದಿರುವುದು ಪಕ್ಷದೊಳಗೆ ಒಡಕು ಹೆಚ್ಚಿದೆ.

ಇನ್ನೊಂದೆಡೆ ಸ್ಥಳೀಯ ಜೆಡಿಎಸ್‌ ಮುಖಂಡರು, ‘ನೀವೇ ಡೀಲ್‌ ಮಾಸ್ಟರ್‌ಗಳು’ ಎಂದು ಕಾಂಗ್ರೆಸ್‌ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮುಗಿ ಬಿದ್ದಿದ್ದಾರೆ. ಭಾನುವಾರ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌, ಪಾಲಿಕೆಯ ತಮ್ಮ ಪಕ್ಷದ ಸದಸ್ಯರೊಂದಿಗೆ ಪತ್ರಿಕಾಗೋಷ್ಠಿ  ಕರೆದಿರುವುದು  ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಿವಾದದ ಕೇಂದ್ರ ಬಿಂದು ತನ್ವೀರ್‌ ಸೇಠ್‌, ‘ಪಕ್ಷವು ಯಾವುದೇ ರೀತಿಯ ಶಿಕ್ಷೆ ನೀಡಿದರೂ ಧೈರ್ಯದಿಂದ ಎದುರಿಸುತ್ತೇನೆ. ಅಮಾನತು ಮಾಡಲಿ, ಇಲ್ಲವೇ ವಜಾ ಮಾಡಲಿ ತಲೆ ತಗ್ಗಿಸಿ ಸ್ವೀಕರಿಸುತ್ತೇನೆ. ಬೇರೆ ನಾಯಕರ ಹೆಸರು ಹೇಳಿ ಜಾರಿಕೊಳ್ಳುವುದಿಲ್ಲ’ ಎಂದು ನೋಟಿಸ್‌ ನೀಡಿರುವ ವಿಚಾರಕ್ಕೆ ಶನಿವಾರ ಇಲ್ಲಿ ತಿರುಗೇಟು ನೀಡಿದ್ದಾರೆ.

‘ಜೆಡಿಎಸ್‌ ಜೊತೆಗಿನ ಮೈತ್ರಿ ಸಂಬಂಧ ನಾನು ಮಾಡಿರುವ ಕೆಲಸಕ್ಕೆ ಸಿಗುತ್ತಿರುವ ಬಹುಮಾನ ಎಂದು ಭಾವಿಸಿದ್ದೇನೆ. ವಿವಾದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಕೂಡ ಮಾತನಾಡಿದ್ದು, ಸೋಮವಾರ ಭೇಟಿಯಾಗುತ್ತೇನೆ. ಅಂದೇ ವರದಿ ಕೊಡುತ್ತೇನೆ’ ಎಂದರು.

‘ನನ್ನ ವಿರುದ್ಧ ನೂರೆಂಟು ಆರೋಪ ಮಾಡಲಾಗಿದೆ. ಡೀಲ್ ಮಾಡಿದ್ದಾಗಿಯೂ ಅಪವಾದ ಇದೆ. ಹಿಂದಿನಿಂದಲೂ ನನಗೆ ಟಿಕೆಟ್‌ ತಪ್ಪಿಸುವ, ಸೋಲಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರತಿ ಚುನಾವಣೆಯಲ್ಲಿ ಹೋರಾಟ ಮಾಡಿಯೇ ಟಿಕೆಟ್‌ ಪಡೆದಿದ್ದೇನೆ’ ಎಂದು ತಾವು ಎದುರಿಸಿದ ಸಮಸ್ಯೆಗಳನ್ನು ಬಿಚ್ಚಿಟ್ಟರು. ‌ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ಡಾ.ಮಹದೇವಪ್ಪ, ‘ಪಕ್ಷದ ಒಳಗೆ ಹಾಗೂ ಹೊರಗೆ, ದನಿ ಎತ್ತುವವರ ಬಾಯಿಯನ್ನು ಮುಚ್ಚಿಸುವ ಕೆಲಸ ನಡೆಯುತ್ತಿದೆ. ಸಿದ್ದರಾಮಯ್ಯ ಜನಪರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅದನ್ನು ಕೆಲವರು ಅರ್ಥ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಅವರು ತಾವೇನೆಂದು ಜೆಡಿಎಸ್‌ ಮುಖಂಡರಿಗಾಗಲೀ, ಬೇರೆ ಯಾರಿಗೇ ಆಗಲಿ ಮತ್ತೆ ಹೇಳಬೇಕಾಗಿಲ್ಲ’ ಎಂದು ತಿವಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮಹಾನ್‌ ನಾಯಕರ ವಿರುದ್ಧ ಮಾತನಾಡಲಾಯಿತು. ಇದರಿಂದ ಅವರ ಹೆಸರಿಗೇನು ಧಕ್ಕೆಯಾಯಿತೇ? ವ್ಯಕ್ತಿಗತ ವರ್ಚಸ್ಸು, ನಾಯಕತ್ವ ಯಾವುದೇ ಪಕ್ಷದಿಂದ, ಮಾಧ್ಯಮದಿಂದ, ಜನರನ್ನು ಸೇರಿಸಿ ಸಭೆ ಮಾಡುವುದರಿಂದ ಬರಲ್ಲ ಎಂದರು.

ಇತ್ತ ಚಾಮರಾಜನಗದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ‘ಸಿದ್ದರಾಮಯ್ಯ ಯಾವತ್ತಿದ್ದರೂ ಹುಲಿ. ಬಿಜೆಪಿ ಇಲಿಗಳು ಹತಾಶೆಯಿಂದ ಏನೇನೋ ಮಾತನಾಡುತ್ತಿವೆ. ಜೆಡಿಎಸ್‌ನವರು ವಚನಭ್ರಷ್ಟತೆಗೆ ಹೆಸರಾದವರು’ ಎಂದು ಹರಿಹಾಯ್ದಿದ್ದಾರೆ.

ಯಾರನ್ನೂ ಟಾರ್ಗೆಟ್‌ ಮಾಡಲ್ಲ: ಡಿಕೆಶಿ

ಕುಂದಾಪುರ: ‘ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ನಮಗೆ ಬೇಕು ಎನ್ನುವುದು ಪಕ್ಷದ ನಿಲುವಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಬದಲಾವಣೆಯಾಗಿದೆ. ಈ ಕುರಿತು ಸೋಮವಾರ ಬೆಂಗಳೂರಿಗೆ ಬಂದು ವರದಿ ನೀಡುವಂತೆ ತಿಳಿಸಿದ್ದೇನೆ. ಇದರಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ವಿಚಾರ ಇಲ್ಲ. ಯಾರನ್ನೂ ಕಟ್ಟಿ ಹಾಕೋದಕ್ಕೆ ಅಥವಾ ನಾಯಕರ ಹೆಸರಿಗೆ ಅಗೌರವ ತರಲು ಅವಕಾಶ ನೀಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಬೈಂದೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೆ ಮೇಯರ್ ಸ್ಥಾನ ನೀಡುವ ಬಗ್ಗೆ ಜೆಡಿಎಸ್‌ನವರು ತಿಳಿಸಿದ್ದರು. ಜೆಡಿಎಸ್ ಹಾಗೂ ಬಿಜೆಪಿಯಿಂದಲೂ ನಾಮಪತ್ರ ಸಲ್ಲಿಕೆಯಾಗಿತ್ತು. ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಒಳಗಡೆ ಸದಸ್ಯರು ತೀರ್ಮಾನ ಮಾಡಿದ್ದರಿಂದಾಗಿ ಈ ರೀತಿಯಾಗಿದೆ’ ಎಂದರು. 

‘ಪಕ್ಷದ ನಿರ್ಧಾರವಲ್ಲ’

ಚಾಮರಾಜನಗರ: ‘ಮೈಸೂರು ಮಹಾನಗರ ಪಾಲಿಕೆಯ ಮೇಯರ್‌–ಉಪಮೇಯರ್‌ ಚುನಾವಣೆಯಲ್ಲಿ ನಡೆದ ಆಯ್ಕೆಯು ಪಕ್ಷದ ನಿರ್ಧಾರ ಅಲ್ಲ; ಶಾಸಕ ತನ್ವೀರ್‌ ಸೇಠ್, ಪಾಲಿಕೆಯ ಸದಸ್ಯರು ತೆಗೆದುಕೊಂಡ ತೀರ್ಮಾನ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಶನಿವಾರ ಇಲ್ಲಿ ಹೇಳಿದರು. 

ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಪ್ಪಂದದ ಪ್ರಕಾರ, ಈ ಬಾರಿ ಮೇಯರ್‌ ಹುದ್ದೆ ನಮಗೆ ಸಿಗಬೇಕಿತ್ತು. ಅದಕ್ಕಾಗಿ ಅಭ್ಯರ್ಥಿ ಕಣಕ್ಕಿಳಿಸಿದ್ದೆವು. ಯಾವುದೇ ಕಾರಣಕ್ಕೂ ಮೇಯರ್‌ ಸ್ಥಾನವನ್ನು ಬಿಟ್ಟು ಕೊಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕರೆ ಮಾಡಿ, ಮೇಯರ್ ಸ್ಥಾನ ಬಿಟ್ಟುಕೊಡಲು ಜೆಡಿಎಸ್‌ನವರು ಒಪ್ಪಿಕೊಂಡಿದ್ದಾಗಿ ಹೇಳಿದ್ದರು. ಚುನಾವಣೆ ದಿನ ನಾವು ಜೆಡಿಎಸ್‌ ಮುಖಂಡರೊಂದಿಗೆ ಸಭೆಯನ್ನೂ ನಡೆಸಿದ್ದವು. ಆದರೆ, ಮತದಾನದ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ತಮ್ಮ ನಿಲುವು ಬದಲಿಸಿದರು’ ಎಂದರು. 

‘ನಾನು ಚುನಾವಣಾ ವೀಕ್ಷಕನಾಗಿದ್ದೆ. ಚುನಾವಣೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ವರದಿ ನೀಡುತ್ತೇನೆ. ಪಾಲಿಕೆ ಸದಸ್ಯರ ಜೊತೆ ಮಾತನಾಡಿ ಭಿನ್ನಾಭಿಪ್ರಾಯ ಬಗೆಹರಿಸುತ್ತೇನೆ’ ಎಂದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು