ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್‌ ಕ್ಲಬ್‌ ಜಾಗದ ಗುತ್ತಿಗೆ ನವೀಕರಣ: ಹೈಕೋರ್ಟ್ ನೋಟಿಸ್

Last Updated 27 ನವೆಂಬರ್ 2020, 7:25 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರೇಸ್ ಕ್ಲಬ್‌ಗೆ ನೀಡಿದ್ದ 140 ಎಕರೆ ಜಾಗದ ಗುತ್ತಿಗೆ ಅವಧಿಯನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ವಕೀಲ ಎಸ್. ಉಮಾಪತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಮೈಸೂರು ನಗರದ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 4 ಮತ್ತು 74ರಲ್ಲಿ 139 ಎಕರೆ 39 ಗುಂಟೆ ಭೂಮಿಯನ್ನು 1970ರಲ್ಲಿ ಮೈಸೂರು ರೇಸ್‌ ಕ್ಲಬ್‌ಗೆ ಗುತ್ತಿಗೆಗೆ ನೀಡಲಾಗಿತ್ತು. ಕಾಲಕಾಲಕ್ಕೆ ಗುತ್ತಿಗೆ ನವೀಕರಣಗೊಂಡು 2016ರಲ್ಲಿ ಮುಕ್ತಾಯಗೊಂಡಿದೆ. ಅಂದಿನಿಂದ ಗುತ್ತಿಗೆ ನವೀಕರಿಸದೆ ಜಾಗವನ್ನು ರೇಸ್‌ ಕ್ಲಬ್‌ ಅಕ್ರಮವಾಗಿ ಆಕ್ರಮಿಸಿಕೊಂಡಿತ್ತು’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

‘ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಬಾಡಿಗೆ ನಿಗದಿ ಮಾಡಿಲ್ಲ. ಕ್ಲಬ್‌ನ ವಾರ್ಷಿಕ ವರಮಾನದ ಶೇ 2ರಷ್ಟು ಬಾಡಿಗೆ ನಿಗದಿ ಮಾಡಲಾಗಿದೆ. 30 ವರ್ಷಗಳ ಅವಧಿಗೆ ಅಂದರೆ 2046 ರವರೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

‘2020ರ ಜನವರಿ 17ರಂದು ಗುತ್ತಿಗೆ ನವೀಕರಿಸಲಾಗಿದೆ. ಮಧ್ಯದ ನಾಲ್ಕು ವರ್ಷಗಳ ಅವಧಿಯ ಬಾಡಿಗೆ ವಸೂಲಿಗೆ ಅಧಿಕಾರಿಗಳು ಪ್ರಯತ್ನಿಸಿಲ್ಲ. ಕರ್ನಾಟಕ ಭೂ ಮಂಜೂರು ನಿಯಮಾವಳಿಗಳ ಪ್ರಕಾರ ಗುತ್ತಿಗೆ ಅವಧಿಯನ್ನು ಜಿಲ್ಲಾಧಿಕಾರಿ ಐದು ವರ್ಷಗಳ ಅವಧಿಗೆ ಮಾತ್ರ ನವೀಕರಿಸಬಹುದು. 30 ವರ್ಷಗಳ ಅವಧಿಗೆ ವಿಸ್ತರಿಸಲು ಅವಕಾಶ ಇಲ್ಲ’ ಎಂದು ಆರೋಪಿಸಿದ್ದಾರೆ.

‘ವರಮಾನದ ಶೇ 2ರಷ್ಟು ಬಾಡಿಗೆ ನಿಗದಿ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ. ರೇಸ್ ಕ್ಲಬ್‌ಗೆ ಜಾಗ ನೀಡುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಶ್ರೀಮಂತರು ಮತ್ತು ಪ್ರಭಾವಿಗಳಿಗಷ್ಟೇ ಇದರಿಂದ ಲಾಭವಾಗಿದೆ’ ಎಂದು ದೂರಿದ್ದಾರೆ.

139 ಎಕರೆ 39 ಗುಂಟೆ ಜಾಗದಲ್ಲಿ ಸ್ವಲ್ಪ ಭಾಗವನ್ನು ಜಯಚಾಮರಾಜೇಂದ್ರ ಗಾಲ್ಫ್‌ ಕ್ಲಬ್‌ಗೂ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಗಾಲ್ಫ್ ಕ್ಲಬ್‌ಗೂ ಲಾಭವಾಗುತ್ತಿದ್ದು, ಅವರನ್ನೂ ಪ್ರತಿವಾದಿಯಾಗಿ ಮಾಡಿಕೊಳ್ಳುವಂತೆ ಅರ್ಜಿದಾರರಿಗೆ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT