ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹೆದ್ದಾರಿಯಲ್ಲಿ ಬೆಂಗಳೂರು–ಮೈಸೂರು ಪ್ರಯಾಣಕ್ಕೆ 90 ನಿಮಿಷ ಸಾಕು

ಸಮರೋಪಾದಿಯಲ್ಲಿ ನಡೆಯುತ್ತಿದೆ ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಕಾಮಗಾರಿ
Last Updated 20 ಸೆಪ್ಟೆಂಬರ್ 2020, 6:15 IST
ಅಕ್ಷರ ಗಾತ್ರ
ADVERTISEMENT
""

ಮೈಸೂರು: ಒಟ್ಟು ಹತ್ತು ಪಥಗಳು. ಮಧ್ಯದಲ್ಲಿ ಆರು ಪಥಗಳ ‘ಆಕ್ಸೆಸ್‌ ಕಂಟ್ರೋಲ್ಡ್‌ ಎಕ್ಸ್‌ಪ್ರೆಸ್‌ ವೇ’. ಎರಡೂ ಬದಿಗಳಲ್ಲಿ ತಲಾ ಎರಡು ಪಥಗಳ ಸರ್ವೀಸ್‌ ರಸ್ತೆಗಳು. ತಿರುವುಗಳಲ್ಲೂ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ವಾಹನ ಸಂಚಾರ ಸಾಧ್ಯವಾಗುವ ರೀತಿಯಲ್ಲಿ ರಸ್ತೆಯ ವಿನ್ಯಾಸ. ಎಲ್ಲೂ ಅಡೆತಡೆಯಿಲ್ಲದೆ ಸಂಚರಿಸಲು ಅವಕಾಶ...

ಬೆಂಗಳೂರು ಮತ್ತು ಮೈಸೂರು ನಡುವೆ ನಿರ್ಮಾಣಗೊಳ್ಳುತ್ತಿರುವ 118 ಕಿ.ಮೀ ಉದ್ದದ ದಶಪಥ ಹೆದ್ದಾರಿಯು ಈ ಎರಡು ನಗರಗಳ ನಡುವಿನ ಪ್ರಯಾಣವನ್ನು ಸುಗಮವಾಗಿಸಲಿದೆ. ಈಗ ಇರುವ ನಾಲ್ಕು ಪಥಗಳ ಹೆದ್ದಾರಿಯಲ್ಲಿ ಸಂಚಾರ ದುಸ್ತರವಾಗಿದೆ. ದಿನದ ಯಾವುದೇ ಸಮಯದಲ್ಲಿ ಪ್ರಯಾಣಿಸಿದರೂ ಟ್ರಾಫಿಕ್‌ ಕಿರಿಕಿರಿ ತಪ್ಪಿದ್ದಲ್ಲ.

ಬೆಂಗಳೂರು– ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಈಗಿನ ಮೂರು ತಾಸುಗಳಿಂದ ಒಂದೂವರೆ ತಾಸಿಗೆ ತಗ್ಗಿಸಲು ಸಾಧ್ಯವಾಗುವಂತೆ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತಿದೆ. ಎಕ್ಸ್‌ಪ್ರೆಸ್‌ ವೇ ನಿರ್ಮಾಣಗೊಂಡರೆ ಕೆಂಗೇರಿಯಿಂದ ಸಾಂಸ್ಕೃತಿಕ ನಗರಿಗೆ ಯಾವುದೇ ಅಡೆತಡೆಗಳಿಲ್ಲದೆ ಸಂಚರಿಸಬಹುದು. ಎಸ್‌ಯುವಿ, ದೊಡ್ಡ ಕಾರುಗಳು ಮತ್ತು ಐಷಾರಾಮಿ ಕಾರುಗಳಲ್ಲಿ ಇನ್ನೂ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದು.

ತಡೆರಹಿತವಾಗಿ ಸಂಚರಿಸಲು ಆರು ಪಥಗಳ ಆಕ್ಸೆಸ್‌ ಕಂಟ್ರೋಲ್ಡ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಇರಲಿದೆ. ಎಕ್ಸ್‌ಪ್ರೆಸ್‌ ವೇನ ಎರಡೂ ಬದಿಗಳಲ್ಲಿ ತಡೆಬೇಲಿ ನಿರ್ಮಿಸಲಾಗುತ್ತದೆ. ಬೆಂಗಳೂರಿನಿಂದ ಬರುವ ಅಥವಾ ಮೈಸೂರಿನಿಂದ ಹೊರಡುವ ವಾಹನಗಳು ಈ ಎಕ್ಸ್‌ಪ್ರೆಸ್‌ ವೇಗೆ ಪ್ರವೇಶ ಪಡೆದುಕೊಂಡರೆ, ಎಲ್ಲೂ ನಿಲ್ಲಿಸದೆ ನೇರವಾಗಿ ಗಮ್ಯಸ್ಥಾನ ತಲುಪಬಹುದು.

ಎಕ್ಸ್‌ಪ್ರೆಸ್‌ ವೇನಿಂದ ಸರ್ವೀಸ್ ರಸ್ತೆಗೆ ಬರಲು ಕೆಲವೆಡೆ ಜಂಕ್ಷನ್‌ಗಳು ಇರಲಿವೆ. ವಾಹನಗಳು ಸರ್ವೀಸ್ ರಸ್ತೆಗೆ ಪಥ ಬದಲಿಸುವಾಗ, ಅಥವಾ ಸರ್ವೀಸ್ ರಸ್ತೆಯಿಂದ ಎಕ್ಸ್‌ಪ್ರೆಸ್‌ ವೇಗೆ ಪಥ ಬದಲಿಸುವಾಗ ಇತರ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಹೆದ್ದಾರಿ ನಿರ್ಮಾಣವಾಗಲಿದೆ.

ಮೈಸೂರು– ಬೆಂಗಳೂರು ನಡುವಿನ ರಸ್ತೆಗೆ ಹೊಂದಿಕೊಂಡಂತೆ ಪಟ್ಟಣಗಳು ಮತ್ತು ಜನವಸತಿ ಪ್ರದೇಶಗಳು ಹೆಚ್ಚಿವೆ. ಈ ಪಟ್ಟಣಗಳ ನಡುವೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆ ವಾಹನಗಳಿಗೆ ಅನುಕೂಲವಾಗಲು ಎರಡೂ ಬದಿಗಳಲ್ಲಿ ತಲಾ ಎರಡು ಪಥಗಳ ಪಥಗಳ ಸರ್ವೀಸ್‌ ರಸ್ತೆ ಇರಲಿದೆ.

ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಕಂಪನಿಯು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಕೆಲಸ ತ್ವರಿಗತಿಯಲ್ಲಿ ಪೂರ್ಣಗೊಳಿಸಲು ಕಂಪನಿಯವರು ಐದು ಕಡೆಗಳಲ್ಲಿ ಬೇಸ್‌ಕ್ಯಾಂಪ್‌ ನಿರ್ಮಾಣ ಮಾಡಿದ್ದಾರೆ.

ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದೆ. ಬೆಂಗಳೂರು–ನಿಡಘಟ್ಟ ನಡುವಿನ ಮೊದಲ ಹಂತದ ಕಾಮಗಾರಿ ಶೇ 51 ರಷ್ಟು ಹಾಗೂ ನಿಡಘಟ್ಟ– ಮೈಸೂರು ನಡುವಿನ ಎರಡನೇ ಹಂತದ ಕಾಮಗಾರಿ ಶೇ 30 ರಷ್ಟು ಪೂರ್ಣಗೊಂಡಿದೆ. ಮೊದಲ ಹಂತದ ಕಾಮಗಾರಿ 2022ರ ಫೆಬ್ರುವರಿಗೆ ಹಾಗೂ ಎರಡನೇ ಹಂತದ ಕಾಮಗಾರಿ 2022ರ ಸೆಪ್ಟೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ನಿರ್ಮಾಣ ಪೂರ್ಣಗೊಂಡು ವಾಹನ ಸಂಚಾರ ಆರಂಭವಾದರೆ ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ವೇ ಎನಿಸಿಕೊಳ್ಳಲಿದೆ.

₹ 7,400 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು, ಭೂಸ್ವಾಧೀನದ ಸಂಪೂರ್ಣ ವೆಚ್ಚ ಮತ್ತು ನಿರ್ಮಾಣ ಕಾಮಗಾರಿಯ ಶೇ 40 ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

51 ಕಿ.ಮೀ ನಷ್ಟು ಬೈಪಾಸ್‌ ರಸ್ತೆ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ 8 ಕಿ.ಮೀ. ಉದ್ದದ ಒಂದು ಎಲಿವೇಟೆಡ್‌ ಕಾರಿಡಾರ್‌ ಹಾಗೂ ಆರು ಬೈಪಾಸ್‌ಗಳನ್ನು ಒಳಗೊಂಡಿರಲಿದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬೈಪಾಸ್‌ ನಿರ್ಮಾಣವಾಗಲಿವೆ. ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡೆಂಟ್ ಎಂಜಿನಿಯರ್ ಶ್ರೀಧರ್‌ ತಿಳಿಸಿದರು.

ಬಿಡದಿ ಬಳಿ 7 ಕಿ.ಮೀ., ರಾಮನಗರ ಮತ್ತು ಚನ್ನಪಟ್ಟಣದಲ್ಲಿ 22 ಕಿ.ಮೀ, ಮದ್ದೂರು ಬಳಿ 3.5 ಕಿ.ಮೀ. ಎಲಿವೇಟೆಡ್‌ ಹೆದ್ದಾರಿ ಮತ್ತು 3.5 ಕಿ.ಮೀ. ಬೈಪಾಸ್‌, ಮಂಡ್ಯ ಬಳಿ 10 ಕಿ.ಮೀ. ಹಾಗೂ ಶ್ರೀರಂಗಪಟ್ಟಣ ಬಳಿ 7 ಕಿಮೀ ಬೈಪಾಸ್ ಇರಲಿದೆ. ಇದರಲ್ಲದೆ 69 ಅಂಡರ್‌ಪಾಸ್‌ ಮತ್ತು ಓವರ್‌ಪಾಸ್‌ಗಳು, ಏಳು ಸೇತುವೆಗಳು ಕೂಡಾ ನಿರ್ಮಾಣವಾಗಲಿವೆ.

ಎಕ್ಸ್‌ಪ್ರೆಸ್‌ ವೇ ಬಗ್ಗೆ ಒಂದಿಷ್ಟು

ದೇಶದಲ್ಲಿ ಪ್ರಸ್ತುತ ಇರುವ ರಸ್ತೆಗಳಲ್ಲಿ ಅತ್ಯುನ್ನತ ದರ್ಜೆಯ ರಸ್ತೆಗಳು ‘ಎಕ್ಸ್‌ಪ್ರೆಸ್ ವೇ’ ಆಗಿವೆ. ಮುಂಬೈ–ಪುಣೆ ಹೆದ್ದಾರಿ ದೇಶದ ಮೊದಲ ಆರು ಪಥಗಳ ಎಕ್ಸ್‌ಪ್ರೆಸ್‌ ವೇ ಆಗಿದೆ. ಇಲ್ಲಿ 94 ಕಿ.ಮೀ ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸಬಹುದು.

ಆಗ್ರಾ– ಲಖನೌ ಹೆದ್ದಾರಿ ಭಾರತದಲ್ಲಿ ಇದುವರೆಗಿನ ಅತ್ಯಂತ ಉದ್ದದ ಎಕ್ಸ್‌ಪ್ರೆಸ್‌ ವೇ ಎನಿಸಿಕೊಂಡಿದೆ. 302 ಕಿ.ಮೀ. ದೂರವನ್ನು ಸುಮಾರು 190 ನಿಮಿಷಗಳಲ್ಲಿ ಕ್ರಮಿಸಬಹುದು.

2020ರ ಜುಲೈವರೆಗಿನ ಅಂಕಿ–ಅಂಶದ ಪ್ರಕಾರ ದೇಶದಲ್ಲಿ ಇದುವರೆಗೆ 1,642 ಕಿ.ಮೀ.ನಷ್ಟು ಉದ್ದದ ಎಕ್ಸ್‌ಪ್ರೆಸ್‌ ವೇಗಳು ಇವೆ. ಸುಮಾರು 7,800 ಕಿ.ಮೀ. ನಷ್ಟು ಉದ್ದದ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT