ಶುಕ್ರವಾರ, ಡಿಸೆಂಬರ್ 3, 2021
20 °C

ದಸರಾ: ‘ಅರಮನೆಯೊಳಗಿನ ಜಂಬೂಸವಾರಿ’ ಸಂಪನ್ನ- ಕೋವಿಡ್‌ ಮಾರ್ಗಸೂಚಿ ಪಾಲನೆ ಅತಿವಿರಳ

ಕೆ. ನರಸಿಂಹ ಮೂರ್ತಿ ಮೈಸೂರು Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಉತ್ಸವದ‌ ವೈಭವಯುತ‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಅರಮನೆಗಷ್ಟೇ ಸೀಮಿತವಾಗಿ ವಿಶ್ವವಿಖ್ಯಾತ ಜಂಬೂ ಸವಾರಿ ಶುಕ್ರವಾರ ಇಳಿಸಂಜೆಯ ಹೊನ್ನ ಕಿರಣಗಳ ಅಭಿಷೇಕದಲ್ಲಿ ಸಂಪನ್ನಗೊಂಡಿತು.

ಜಂಬೂಸವಾರಿ ವೀಕ್ಷಿಸಲು 500 ಮಂದಿಗಷ್ಟೇ ಅವಕಾಶವಿದೆ ಎಂಬ ಸರ್ಕಾರದ ಆದೇಶ ಮೀರಿ ಐದು ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದರು. ಹಿಂದಿನ ವರ್ಷ ಇದ್ದ ಕೋವಿಡ್ ಆತಂಕ ಈಗ ಮರೆತಿದ್ದರಿಂದ ಕೋವಿಡ್‌ ಮಾರ್ಗ ಸೂಚಿ ಪಾಲನೆ ಅತಿವಿರಳವಾಗಿತ್ತು.

ಸಂಜೆ 4.32ಕ್ಕೆ ಅರಮನೆ ಹೊರ ಆವರಣದ ಕೋಟೆ ಆಂಜನೇಯ ಗುಡಿಯ ಮುಂದೆ ನಂದಿ ಧ್ವಜಕ್ಕೆ ಪೂಜೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರೆದ ವಾಹನದಲ್ಲಿ ಅರಮನೆ ಆವರಣಕ್ಕೆ ಬಂದರು. 4.50ಕ್ಕೆ ಆನೆಗಳ ಮೆರವಣಿಗೆ ಶುರುವಾಯಿತು.

ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರ ಅಭಿಮನ್ಯವಿಗೆ ಸಾಥ್‌ ನೀಡಿದವು. ಸಾಲಾನೆಗಳಾಗಿ ಧನಂಜಯ, ಗೋಪಾಲಸ್ವಾಮಿ ಮತ್ತು ಅಶ್ವತ್ಥಾಮ ಹೆಜ್ಜೆ ಹಾಕಿದವು. ಆಕರ್ಷಕವಾದ ಆರು ಸ್ತಬ್ದ ಚಿತ್ರಗಳು, ಪೊಲೀಸ್‌ ಪಡೆ, ಅಶ್ವಾರೋಹಿ ಪಡೆಗಳೊಂದಿಗೆ, ಮಂಗಳವಾದ್ಯ, ವೀರಗಾಸೆ, ಕತ್ತಿ ವರಸೆ, ನಗಾರಿ, ಡೊಳ್ಳು, ಕಂಸಾಳೆ, ತಾಳಮದ್ದಲೆ, ಪಟ ಕುಣಿತ, ಗೊಂಬೆ ಕುಣಿತದ ಕಲಾವಿದರು ಮೆರವಣಿಗೆಗೆ ಮೆರುಗು ತಂದರು.

5.24ಕ್ಕೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಮುಖ್ಯಮಂತ್ರಿ ಪುಷ್ಪನಮನ ಸಲ್ಲಿಸಿದರು. ನಂತರ ರಾಷ್ಟ್ರಗೀತೆ ಶುರುವಾಗಿ ಮುಗಿಯುವುದರೊಳಗೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆನೆಗಳು ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿಯು ಮುಂದಕ್ಕೆ ಸಾಗಿ ಬಲರಾಮ ಗೇಟ್‌ನಲ್ಲಿ ಮುಕ್ತಾಯವಾಯಿತು.

ಜಂಬೂಸವಾರಿಯನ್ನು ಅರಮನೆಯ ಹೊರಗಿನಿಂದ ವೀಕ್ಷಿಸಲು ಚಾಮರಾಜೇಂದ್ರ ವೃತ್ತದಲ್ಲೂ ಸಾವಿರಾರು ಮಂದಿ ಅಂತರ ಮರೆತು ಗುಂಪುಗೂಡಿದ್ದರು. ದೀಪಾಲಂಕಾರಕ್ಕೆಂದು ಅಳವಡಿಸಿದ್ದ ಕಂಬಗಳು, ಕಟೌಟ್‌ಗಳ ಮೇಲೂ ಅಪಾಯ ಲೆಕ್ಕಿಸದೆ ಕುಳಿತಿದ್ದರು.

ಮೆರವಣಿಗೆ: ಮೊಟ್ಟಮೊದಲ ಬಾರಿಗೆ ಬೆಳಿಗ್ಗೆಯೇ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯ ಮೆರವಣಿಗೆಯು ಬೆಟ್ಟದಿಂದ ಅರಮನೆವರೆಗೂ ನಡೆದು ಸಾವಿರಾರು ಮಂದಿ ಕಣ್ತುಂಬಿಕೊಂಡು ಕೈ ಮುಗಿದಿದ್ದರು. ಮುಂಚಿನ ವರ್ಷಗಳಲ್ಲಿ ಉತ್ಸವಮೂರ್ತಿಯನ್ನು ವಾಹನದಲ್ಲಿಟ್ಟು ಅರಮನೆಗೆ ತರಲಾಗುತ್ತಿತ್ತು.

‘ದೀಪಾಲಂಕಾರ 9 ದಿನ ವಿಸ್ತರಣೆ’

ಮೈಸೂರು: ‘ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‌ಜಂಬೂಸವಾರಿ ಉದ್ಘಾಟನೆಗೂ ಮುನ್ನ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೆಚ್ಚು ಪ್ರವಾಸಿಗರು ಬರುತ್ತಿರುವುದರಿಂದ, ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಮನವಿ ಮಾಡಿರುವುದರಿಂದ ವಿಸ್ತರಿಸಲಾಗಿದೆ’ ಎಂದರು. ದೀಪಾಲಂಕಾರ ಶುಕ್ರವಾರಕ್ಕೆ (ಅ.15) ಕೊನೆಗೊಳ್ಳಬೇಕಿತ್ತು.

ಉತ್ಸವಮೂರ್ತಿ ಮೆರವಣಿಗೆ: ಟೀಕೆ

ಮೈಸೂರು: ಅಂಬಾರಿಯಲ್ಲಿಡುವ ಮುನ್ನವೇ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಚಾಮುಂಡಿಬೆಟ್ಟದಿಂದ ಅರಮನೆಯವರೆಗೆ ತೆರೆದ ವಾಹನದ ಮೆರವಣಿಗೆಯಲ್ಲಿ ಕರೆತಂದ ಸರ್ಕಾರದ ತೀರ್ಮಾನ ಟೀಕೆಗೆ ಗುರಿಯಾಗಿದೆ.

‘ಕೋವಿಡ್‌ ಕಾರಣಕ್ಕೆ ಜಂಬೂಸವಾರಿಯನ್ನು ಮೊಟಕುಗೊಳಿಸಿದ ಸರ್ಕಾರವೇ 10. ಕಿಮೀ ವರೆಗಿನ ಮೆರವಣಿಗೆಗೆ ಅನುಮತಿ ನೀಡಿದ್ದು ದಂದ್ವ ನಿಲುವಿಗೆ ಸಾಕ್ಷಿ’ ಎಂದು ವಿದ್ವಾಂಸ ಶೆಲ್ವಪಿಳ್ಳೈ ಅಯ್ಯಂಗಾರ್ ಹೇಳಿದರು.

‘ಬನ್ನಿಮಂಟಪದವರೆಗಿನ ಜಂಬೂಸವಾರಿಯಲ್ಲಿ ಮಾತ್ರವೇ ಕೋವಿಡ್ ಬರುತ್ತದೆಯೇ’ ಎಂದು ಸಂಶೋಧಕ ನಂಜರಾಜೇ ಅರಸ್ ಪ್ರಶ್ನಿಸಿದರು.

ಉತ್ಸವಮೂರ್ತಿಯ ಮೆರವಣಿಗೆ ನಡೆಸಲು, ದಸರಾ ಉತ್ಸವ ಸಮಿತಿಯಲ್ಲಿ ಶಾಸಕ ಎಸ್.ಎ.ರಾಮದಾಸ್ ಒತ್ತಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.

***

ಕನ್ನಡ ನಾಡು ಸುಭಿಕ್ಷವಾಗಲಿ ಎಂದು ಚಾಮುಂಡಿ ತಾಯಿಯಲ್ಲಿ ಬೇಡಿಕೊಂಡಿದ್ದೇನೆ. ಮಳೆ, ಬೆಳೆ ಚೆನ್ನಾಗಿ ಬಂದು ರೈತರ ಬಾಳು ಹಸನಾಗಲಿ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು