ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಬಂದಾಗಲೆಲ್ಲಾ ಅತ್ಯಾಚಾರ, ದರೋಡೆ ನಡೆಸುತ್ತಿದ್ದ ಆರೋಪಿಗಳು!

Last Updated 30 ಆಗಸ್ಟ್ 2021, 2:37 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ‍ಪುರದಲ್ಲಿ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದ ಆರೋಪಿಗಳು ಎರಡು ವರ್ಷದಿಂದಲೂ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದಾರೆ. ಅವರ ಬಳಿ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ. ವಯಸ್ಸಿನ ವ್ಯತ್ಯಾಸವನ್ನೇ ನೋಡದೆ ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ಇಂಥ ಪ್ರಕರಣಗಳಲ್ಲಿ ಎಂಥದ್ದೇ ನಷ್ಟವಾದರೂ ಮರ್ಯಾದೆಗೆ ಅಂಜಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡದೇ ಇರುವುದನ್ನೇ ಆರೋಪಿಗಳು ಅವಕಾಶವನ್ನಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆಗಿಂದ್ದಾಗ್ಗೆ ನಗರಕ್ಕೆ ಬಂದು ದೌರ್ಜನ್ಯ–ದರೋಡೆ ನಡೆಸುತ್ತಿದ್ದರು. ಪ್ರತಿ ಬಾರಿ ಅಂಥ ಕೃತ್ಯ ನಡೆಸಿದ ನಂತರ ಕೆಲವು ವಾರಗಳವರೆಗೆ ಅವರು ಮೈಸೂರಿಗೆ ಬರುತ್ತಿರಲಿಲ್ಲ.

’ತಮಿಳುನಾಡಿನ ಸತ್ಯಮಂಗಲ ಜಿಲ್ಲೆಯ ತಿರುಪ್ಪುರ್ ಹಾಗೂ ಸುತ್ತಮುತ್ತಲ ಪಟ್ಟಣಗಳ ನಿವಾಸಿಗಳಾದ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆದ ದಿನ ಬಾಳೆಕಾಯಿಯನ್ನು ಸರಕುಸಾಗಣೆ ವಾಹನದಲ್ಲಿ ತುಂಬಿಕೊಂಡು ಎಪಿಎಂಸಿಗೆ ಬಂದಿದ್ದರು. ಬಾಳೆಕಾಯಿ ಮಾರಾಟ ಮಾಡಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸುತ್ತಾಟ ನಡೆಸಿ ಮದ್ಯ ಸೇವಿಸಿ ಕುಳಿತಿದ್ದರು. ಆ ಸಂಧರ್ಭದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಬರುತ್ತಿರುವುದನ್ನು ಕಂಡು ದೌರ್ಜನ್ಯ ಎಸಗಿದ್ದರು. ಹಣ ಸಿಗದೇ ಇದ್ದಾಗ ಯುವತಿಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದರು’ ಎಂಬುದು ಪ್ರಾಥಮಿಕ ಹಂತದ ವಿಚಾರಣೆಯಿಂದ ತಿಳಿದು ಬಂದಿದೆ.

ಕಾರ್ಯಾಚರಣೆ ಹೀಗಿತ್ತು...

ಆರೋಪಿಗಳು ತಮಿಳಿನಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ಸ್ನೇಹಿತ ನೀಡಿದ ಸುಳಿವನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡವು, ತಮಿಳುನಾಡಿನ ಸಿಮ್‌ ಹೊಂದಿರುವ ಮೊಬೈಲ್‌ ಲೊಕೇಶನ್‌ ಅನ್ನು ಪತ್ತೆ ಹಚ್ಚಿತ್ತು.

ಘಟನೆ ಸ್ಥಳದಲ್ಲಿ ಪತ್ತೆಯಾದ ಮೊಬೈಲ್‌ ಲೊಕೇಶನ್ ನಂತರ ಚಾಮರಾಜನಗರಲ್ಲಿ, ಮತ್ತೆ ತಮಿಳುನಾಡಿನಲ್ಲಿಯೂ ಸಿಕ್ಕಿತ್ತು. ಅದನ್ನು ಆಧರಿಸಿಯೇ ಶುಕ್ರವಾರ ಮಧ್ಯಾಹ್ನ ಹೊರಟ ತನಿಖಾ ತಂಡವು ಮಧ್ಯರಾತ್ರಿ 12.30ರ ವೇಳೆಗೆ ತಮಿಳುನಾಡು ತಲುಪಿತ್ತು. ಶನಿವಾರ ಬೆಳಗಿನ ಜಾವ ಆರು ಗಂಟೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳು ತಮ್ಮ ಮನೆಗಳಲ್ಲಿಯೇ ಸಿಕ್ಕಿಬಿದ್ದರು. ಇಬ್ಬರು ಮಾತ್ರ ಸ್ನೇಹಿತರ ಜತೆಗಿದ್ದರು’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ತಾಳವಾಡಿಯಲ್ಲಿ ಕೊನೆ ಹಂತದ ಕಾರ್ಯಾಚರಣೆ ನಡೆಸುವಾಗ ಆರೋಪಿಯೊಬ್ಬ ಪರಾರಿಯಾದ. ಕೃತ್ಯ ಎಸಗಿರುವುದಾಗಿ ಆರೋಪಿಗಳೆಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT