ಮಂಗಳವಾರ, ಸೆಪ್ಟೆಂಬರ್ 28, 2021
22 °C
ಮೌನಕ್ಕೆ ಶರಣಾದ ಯಡಿಯೂರಪ್ಪ * ಮುಖ್ಯಮಂತ್ರಿ ಭೇಟಿಯಾದ ಶಾಮನೂರು

ನಾಯಕತ್ವ ಬದಲಾವಣೆ ಕುರಿತ ನಳಿನ್‌ ಕುಮಾರ್‌ ಕಟೀಲ್ ಆಡಿಯೊದಿಂದ ಬಿಜೆಪಿಗೆ ಸಂಕ್ಷೋಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಮತ್ತು ಹಿರಿಯ ಸಚಿವರ ಬದಲಾವಣೆ ಆಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ಹೇಳಿದ್ದಾರೆ ಎನ್ನಲಾದ ಆಡಿಯೊ ಈಗ ಕಮಲ ಪಾಳೆಯದಲ್ಲಿ ಸಂಕ್ಷೋಭೆಗೆ ಕಾರಣವಾಗಿದೆ.

‘ಆಡಿಯೊ ನನ್ನದಲ್ಲ, ನಕಲಿ' ಎಂದು ನಳಿನ್‌ ಕುಮಾರ್‌ ಕಟೀಲ್ ಅವರು ಸೋಮವಾರ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದರು. ಈ ಸೋರಿಕೆ ಹಿಂದೆ ಯಡಿಯೂರಪ್ಪ ಮಗಬಿ.ವೈ.ವಿಜಯೇಂದ್ರ ಇದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ಆದರೆ, ಈ ಎಲ್ಲ ವಿದ್ಯಮಾನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಅವರ ಆಪ್ತ ಶಾಸಕರೂ ಬಹುತೇಕ ಮೌನವಾಗಿದ್ದಾರೆ.

ಆಡಿಯೊ ಬಗ್ಗೆ ಹೇಳಿಕೆಗಳನ್ನು ನೀಡಿದ ಹಲವು ಸಚಿವರು, ಯಡಿಯೂರಪ್ಪ ನಾಯಕತ್ವದ ಮೇಲೆ ‘ವಿಶ್ವಾಸ’ ವ್ಯಕ್ತಪಡಿಸಿದ್ದರೆ, ಹಿರಿಯ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ‘ಸಚಿವ ಸ್ಥಾನ ಬಿಡಿ ಎಂದರೆ ಅದಕ್ಕೆ ಸಿದ್ಧನಿದ್ದು, ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ನಳಿನ್ ಕುಮಾರ್ ಅವರ ದೂರವಾಣಿ ಕದ್ದಾಲಿಕೆ ಆಗಿರಲೂ ಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.

ಈ ಬೆಳವಣಿಗೆ ಬೆನ್ನಲ್ಲೇ, ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಲು ಸೋಮವಾರ ದೆಹಲಿಗೆ ಹೋಗಬೇಕಿದ್ದ ನಳಿನ್ ಕುಮಾರ್ ಕಟೀಲ್ ತಮ್ಮ ಪ್ರಯಾಣ ರದ್ದುಪಡಿಸಿ ಮಂಗಳೂರಿನಲ್ಲೇ ಉಳಿದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಅವರು ಈ ಬಗ್ಗೆ ನಳಿನ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ.

ಹಿಂದೆಲ್ಲ ಈ ರೀತಿಯ ರಾಜಕೀಯ ಚರ್ಚೆಗಳು ಮುನ್ನೆಲೆಗೆ ಬಂದಾಗ, ಯಡಿಯೂರಪ್ಪ ಆಪ್ತ ಬಣದ ಶಾಸಕರು ಅವರನ್ನು ಸಮರ್ಥಿಸಿಕೊಳ್ಳುವುದಿತ್ತು. ಆದರೆ, ಈ ಬಾರಿ ಆಪ್ತ ಬಣ ಕೂಡ ಮೌನಕ್ಕೆ ಶರಣಾಗಿದೆ.

ಶಾಮನೂರು–ಬಿಎಸ್‌ವೈ ಭೇಟಿ: ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ‘ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆ ನಿರ್ಧಾರ ಕೈಗೊಂಡಿರುವುದಕ್ಕೆ ಅಭಿನಂದಿಸಲು ಹೋಗಿದ್ದೆ’ ಎಂದೂ ಶಾಮನೂರು ಹೇಳಿದರು.

ಮಿಮಿಕ್ರಿ ಇರಬಹುದು

‘ಇದರಲ್ಲಿ ರಾಜಕೀಯ ಪಿತೂರಿ ಅಡಗಿದೆ. ನಮ್ಮ ರಾಜ್ಯಾಧ್ಯಕ್ಷರು ಆ ರೀತಿ ಮಾತನಾಡುವವರಲ್ಲ. ತಮ್ಮ ಧ್ವನಿ ಅಲ್ಲ ಎಂದು ಕಟೀಲ್‌ ಹೇಳಿದ್ದಾರೆ. ಮುಖ್ಯಮಂತ್ರಿಯವರೂ ಸ್ಪಷ್ಟನೆ ನೀಡಿದ್ದಾರೆ. ಕಿಡಿಗೇಡಿಗಳು ಮಿಮಿಕ್ರಿ ಮಾಡಿರಬಹುದು. ಈ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸಿಎಂ ರೇಸ್‌ನಲ್ಲಿದ್ದೇನೆ–ಕತ್ತಿ

‘ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವೆ’ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಬೆಳಗಾವಿಯಲ್ಲಿ ಹೇಳಿದ್ದಾರೆ.

‘ಹಿರಿತನವಿದೆ. ಕಳಂಕರಹಿತನಾಗಿರುವೆ. ನಸೀಬು ಗಟ್ಟಿ ಇದ್ದರೆ ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಜವಾಬ್ದಾರಿ ನಿರ್ವಹಿಸುವೆ. ನಾನೂ ಆಸೆ ಇಟ್ಟುಕೊಂಡಿರುವೆ’ಎಂದು ಸುದ್ದಿಗಾರರಿಗೆ ಹೇಳಿದರು.

ವಿಜಯೇಂದ್ರ ಕಡೆಯಿಂದ ಸೋರಿಕೆ:ಯತ್ನಾಳ

‘ಕಟೀಲ್ ಅವರು ಮಾತನಾಡಿರುವ ಆಡಿಯೊ ಸೋರಿಕೆ ಪ್ರಕರಣದ ತನಿಖೆ ಆಗಬೇಕು. ಮುಖ್ಯಮಂತ್ರಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಆಪ್ತರಾಗಿರುವವರು ಸಿಸಿಬಿಯಲ್ಲಿದ್ದಾರೆ. ಹೀಗಾಗಿ ಎಲ್ಲವೂ ಸೋರಿಕೆಯಾಗುತ್ತಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರದಲ್ಲಿ ಆರೋಪಿಸಿದ್ದಾರೆ.

’ಖಾಸಗಿಯಾಗಿ ಮಾತನಾಡಿದ್ದನ್ನ ರೆಕಾರ್ಡ್ ಮಾಡಿಕೊಳ್ಳುವುದು ಅಪರಾಧವಾಗುತ್ತದೆ. ವ್ಯಕ್ತಿಗತ ಗೋಪ್ಯತೆಗೆ ರಾಜ್ಯದಲ್ಲಿ ಅವಕಾಶವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಏನು ಬೇಕಾದದ್ದು ನಡೆಯುತ್ತಿದೆ. ಸಿಸಿಬಿಯವರು ಏನ್ ಮಾಡ್ತಿದ್ದಾರೆ? ರಾಜ್ಯ ಸರ್ಕಾರ ಡ್ರಗ್ಸ್ ಕೇಸ್, ಯುವರಾಜ್ ಸ್ವಾಮಿ ಪ್ರಕರಣದ ತನಿಖೆಯನ್ನು ಅರ್ಧಕ್ಕೆ ಬಿಟ್ಟದೆ. ಸಿಸಿಬಿಯಲ್ಲಿರೋ ಹಿರಿಯ ಅಧಿಕಾರಿಗಳು ಈ ಬಗ್ಗೆ ಕಣ್ಣು ತೆರೆದು ನೋಡಬೇಕು‘ ಎಂದರು.

ಆಪ್ತರೊಂದಿಗೆ ಬಿಎಸ್‌ವೈ ಭೋಜನ ಕೂಟ

ಆಡಿಯೊ ಗಲಾಟೆಯ ಮಧ್ಯೆಯೂ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕೆಲವು ಆಪ್ತ ಸಚಿವರಿಗಾಗಿ ತಾಜ್‌ವೆಸ್ಟ್‌ ಎಂಡ್‌ ಹೊಟೇಲ್‌ನಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ಭೋಜನಕೂಟದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ, ವಿ. ಸೋಮಣ್ಣ, ಡಾ.ಸುಧಾಕರ್‌, ಎಸ್‌.ಟಿ.ಸೋಮಶೇಖರ್, ಬಿ.ಸಿ.ಪಾಟೀಲ ಭಾಗವಹಿಸಿದ್ದರು.

ಈ ವೇಳೆ ಯಡಿಯೂರಪ್ಪ ಲೋಕಾಭಿರಾಮವಾಗಿ ಚರ್ಚೆ ನಡೆಸಿದ್ದು ಬಿಟ್ಟರೆ, ರಾಜ್ಯ ರಾಜಕೀಯದ ಬಗ್ಗೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಕೋಲಾಹಲಕ್ಕೆ ಕಾರಣವಾಗಿರುವ ಕಟೀಲ್ ಅವರದ್ದು ಎನ್ನಲಾದ ಆಡಿಯೊ ಬಗ್ಗೆಯೂ ಚಕಾರ ಎತ್ತಲಿಲ್ಲ ಎಂದು ಗೊತ್ತಾಗಿದೆ.

ಪಂಜಾಬ್‌ನಲ್ಲಿ ನವಜೋತ್‌ ಸಿಂಗ್ ಸಿಧು ಅಲ್ಲಿನ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು, ಉತ್ತರ ಪ್ರದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಿತು. ಮಹಾರಾಷ್ಟ್ರದಲ್ಲಿ ಸದ್ಯವೇ ಮಹತ್ತರ ರಾಜಕೀಯ ಬೆಳವಣಿಗೆಯಾಗಲಿದ್ದು, ಅಲ್ಲಿ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ಹೋಗಲಿದ್ದು, ಶಿವಸೇನಾ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಚರ್ಚೆಯೂ ನಡೆಯಿತು ಎಂದು ಮೂಲಗಳು ಹೇಳಿವೆ.

‘ಪಕ್ಷಕ್ಕೆ ಬಿಎಸ್‌ವೈ ಆತ್ಮ ಇದ್ದಂತೆ’

'ನಾಯಕತ್ವ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆ ಗಳಿಲ್ಲ. ನಮ್ಮ ಪಕ್ಷಕ್ಕೆ ಯಡಿಯೂರಪ್ಪ ಆತ್ಮವಿದ್ದಂತೆ. ಯಡಿಯೂರಪ್ಪ ನಮ್ಮ ಸರ್ವಸಮ್ಮತದ ನಾಯಕ. ಈಶ್ವರಪ್ಪ, ಜಗದೀಶ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ' ಎಂದು ನಳಿನ್ ಕುಮಾರ್‌ ಮಂಗಳೂರಿನಲ್ಲಿ ಹೇಳಿದ್ದಾರೆ. 'ವೈರಲ್ ಆಗಿರುವ ಆಡಿಯೊಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ತನಿಖೆಯಾಗದೇ ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸುವುದಿಲ್ಲ. ತನಿಖೆ ಮೂಲಕ ಸತ್ಯ ಹೊರಬರಲಿ. ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ' ಎಂದರು.

ಗೂಟದ ಕಾರು ಹೋಗುತ್ತೆ ಅಷ್ಟೇ: ಈಶ್ವರಪ್ಪ

‘ಮಂತ್ರಿ ಸ್ಥಾನ ಹೋದರೆ ಗೂಟದ ಕಾರು ಹೋಗುತ್ತದೆ ಅಷ್ಟೆ. ರಾಜಕಾರಣದಲ್ಲಿ ಯಾರೂ ನಿರಂತರವಾಗಿ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.‘ನಾನೊಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತ. ಹಿಂದೂ ಸಮಾಜ, ದೇಶದ ಅಭಿವೃದ್ಧಿಯ ಚಿಂತಕ. ಮೊದಲ
ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನ ಸಿಕ್ಕಿತ್ತು. ರಾಜೀನಾಮೆ ಕೇಳಿದ್ದರು. ಮರು ಮಾತನಾಡದೇ ರಾಜೀನಾಮೆ ಕೊಟ್ಟು ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೆ. ಕನಕಪುರದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ ಸ್ಥಾನ ಯಾವುದೇ ಇರಲಿ ಗೂಟ ಹೊಡೆದುಕೊಂಡಿರಲು ಆಗದು’ ಎಂದರು.

***

ಯಡಿಯೂರಪ್ಪ ಅವರನ್ನು ಮುಟ್ಟಿದರೆ ಬಿಜೆಪಿಯ ಇತಿಹಾಸವೇ ಬದಲಾಗುತ್ತದೆ. ಅವರನ್ನು ತೆಗೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು. ವೀರಶೈವ ಮಹಾಸಭಾ ಸಂಪೂರ್ಣವಾಗಿ ಯಡಿಯೂರಪ‍್ಪ ಅವರ ಬೆಂಬಲಕ್ಕೆ ನಿಲ್ಲಲಿದೆ

– ಶಾಮನೂರು ಶಿವಶಂಕರಪ್ಪ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು