ಗುರುವಾರ , ಫೆಬ್ರವರಿ 25, 2021
28 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌

ರೈತರಲ್ಲ, ರಾಷ್ಟ್ರಘಾತುಕ ಶಕ್ತಿಗಳ ಕೃತ್ಯ: ನಳಿನ್‌ ಕುಮಾರ್ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದೆಹಲಿಯ ಕೆಂಪುಕೋಟೆಗೆ ನುಗ್ಗಿ ದಾಂದಲೆ ನಡೆಸಿದ್ದು ರೈತರಲ್ಲ, ರಾಷ್ಟ್ರಘಾತುಕ ಶಕ್ತಿಗಳು. ರೈತರ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಗಲಭೆ ಮಾಡುತ್ತಿವೆ. ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಆರೋ‍ಪಿಸಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಧಿಕಾರ ಇಲ್ಲದಾಗ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಪೌರತ್ವದ ವಿಚಾರದಲ್ಲಿ ದಾಂದಲೆ ಎಬ್ಬಿಸಿತ್ತು. ರೈತರ ಹೆಸರಿನಲ್ಲಿ ಖಲಿಸ್ತಾನಿಗಳಿಗೆ ಕುಮ್ಮಕ್ಕು ನೀಡುತ್ತಿದೆ’ ಎಂದು ದೂರಿದರು.

‘ರೈತರಿಗೆ ಸಂವಿಧಾನ ಹಾಗೂ ಕಾನೂನು ಗೌರವಿಸುವುದು ಗೊತ್ತಿದೆ. ಹಕ್ಕುಗಳಿಗೆ ರೈತರು ಹೋರಾಟ ಮಾಡುವುದು ತಪ್ಪಲ್ಲ. ಆದರೆ, ಪುಂಡಾಟಿಕೆ, ದಾಂದಲೆ ನಡೆಸುವುದು ತಪ್ಪು. ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ತಪ್ಪು. ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಗಾಂಧೀಜಿ ಜಾತ್ಯತೀತ ಪದ ಬಳಸಿಲ್ಲ’

ಮಹಾತ್ಮ ಗಾಂಧೀಜಿ ಅವರು ಜಾತ್ಯತೀತ ಪದವನ್ನು ಯಾವತ್ತೂ ಉಲ್ಲೇಖ ಮಾಡಿಲ್ಲ. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತುಷ್ಠೀಕರಣಕ್ಕಾಗಿ ಇದನ್ನು ಮುನ್ನೆಗೆ ತಂದಿತು ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

‘ಸ್ವಾತಂತ್ರ್ಯಾನಂತರ ದೇಶ ರಾಮರಾಜ್ಯವಾಗಬೇಕು ಎಂಬ ಕನಸು ಕಂಡವರು ಗಾಂಧೀಜಿ. ಶ್ರೀರಾಮ ಅತ್ಯಂತ ಶ್ರೇಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿದ್ದ ಎಂಬುದು ಗಾಂಧೀಜಿಗೆ ಗೊತ್ತಿತ್ತು’ ಎಂದು ಹೇಳಿದರು.

 ***

ವಿಧಾನಸಭೆ, ಲೋಕಸಭಾ ಚುನಾವಣೆಗೆ ಪಕ್ಷದ ಹಿರಿಯರಿಗೆ ಅವಕಾಶ ಸಿಗುತ್ತಿದೆ. ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಿ.

–ಡಾ.ಸಂದೀಪ್‌

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು