ಶನಿವಾರ, ಅಕ್ಟೋಬರ್ 1, 2022
20 °C
ಬಿಜೆಪಿ ಚುನಾವಣಾ ವಾರ್‌ ರೂಂಗೆ ಕಟೀಲ್‌ರಿಂದ ಚಾಲನೆ

ಬಿಎಸ್‌ವೈ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ: ನಳಿನ್‌ ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಿ.ಎಸ್‌.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗಾಗಿ ಮಲ್ಲೇಶ್ವರದ ಕೆನರಾ ಯೂನಿಯನ್‌ ಬಳಿ ಬಿಜೆಪಿ ವಾರ್‌ರೂಂಗೆ ಚಾಲನೆ ನೀಡಿ, ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಹಂತದಲ್ಲೂ ಚರ್ಚೆ ಆಗಿಲ್ಲ. ಅವಧಿಪೂರ್ಣಗೊಳ್ಳುವವರೆಗೆ ಅವರೇ ಮುಖ್ಯಮಂತ್ರಿ
ಯಾಗಿ ಮುಂದುವರೆಯಲಿದ್ದಾರೆ ಎಂದು ನಳಿನ್‌ ಕುಮಾರ್ ಕಟೀಲ್‌ ಅವರು ಹೇಳಿದರು.

‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಹತ್ತಾರು ಜನರ ಸಾವು ಮತ್ತು ಹತ್ತಾರು ಜಿಲ್ಲೆಗಳು ಪ್ರವಾಹದಲ್ಲಿರುವ ಸಂದರ್ಭದಲ್ಲಿ ₹100 ಕೋಟಿ ಖರ್ಚು ಮಾಡಿ ಸಿದ್ದರಾಮೋತ್ಸವ ಮಾಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಪಕ್ಷ ಮುಖ್ಯಮಂತ್ರಿ ಬದಲಾವಣೆ ಕುರಿತು ಟ್ವೀಟ್‌ ಮಾಡಿ ಗೊಂದಲ ಮೂಡಿಸುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಬಿಜೆಪಿ ಮುಂದಿನ ಚುವಾವಣೆ ದೃಷ್ಟಿಯಿಂದ ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್‌ ಸಶಕ್ತೀಕರಣ ಕಾರ್ಯವನ್ನು ಪೂರ್ಣಗೊಳಿ
ಸಿದ್ದೇವೆ. ಚುನಾವಣೆಗೆ ಕಾರ್ಯಕರ್ತರನ್ನು ಸೈನಿಕರ ರೀತಿಯಲ್ಲಿ ಸಿದ್ಧತೆ ನಡೆಸಿದ್ದೇವೆ. ಮತಗಟ್ಟೆಯಲ್ಲೂ ವಾರ್‌ ರೂಂಗಳು ಆರಂಭಗೊಂಡಿವೆ. ಇಲ್ಲಿನ ವಾರ್‌ ರೂಂ ಮೂಲಕ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್. ನವೀನ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಅವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು