ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕೆರೆಗಳಿಗೆ ಮರುಜೀವ; ಒತ್ತುವರಿ ತಡೆದ ‘ನಮ್ಮೂರು ನಮ್ಮ ಕೆರೆ’!

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜಲ ಜಾಗೃತಿ
Last Updated 27 ನವೆಂಬರ್ 2021, 1:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮೂರ ಕೆರೆ ಇಷ್ಟು ದೊಡ್ಡದಾಗಿತ್ತು ಎಂಬುದು ನಮಗೇ ಗೊತ್ತಿರಲಿಲ್ಲ...’, ‘1000 ಅಡಿ ಕೊರೆದರೂ ಕೊಳವೆಬಾವಿಯಲ್ಲಿ ನೀರು ಬರುತ್ತಿರಲಿಲ್ಲ, ಈಗ 350 ಅಡಿಗೇ ನೀರು ಸಿಗುತ್ತಿದೆ...’ ‘ನಮ್ಮೂರ ಕೆರೆ ಕ್ರಿಕೆಟ್‌ ಮೈದಾನವಾಗಿಬಿಟ್ಟಿತ್ತು, ಈಗ ಮತ್ತೆ ನೀರಿನಿಂದ ತುಂಬಿ ಕೋಡಿ ಬಿದ್ದಿದೆ....’

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಕೆರೆಗಳ ಪುನಶ್ಚೇತನಕ್ಕಾಗಿ ಹಮ್ಮಿಕೊಂಡಿರುವ ‘ನಮ್ಮೂರು ನಮ್ಮ ಕೆರೆ’ ಯೋಜನೆಯ ಫಲಾನುಭವಿಗಳು ಹೇಳುವ ಮಾತುಗಳಿವು.

ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಆದರೆ, ಅವುಗಳಲ್ಲಿ ಬಹುತೇಕ ಕೆರೆಗಳು ಹೂಳು ಮತ್ತು ಒತ್ತುವರಿಯ ಕಾರಣ ಹಾಳಾಗಿವೆ. ಧರ್ಮಸ್ಥಳ ಸಂಸ್ಥೆಯು ರಾಜ್ಯದಲ್ಲಿ ಒಟ್ಟು 367 ಕೆರೆಗಳನ್ನು ಪುನಶ್ಚೇತನಗೊಳಿಸಿದ ನಂತರ, ಅಂತರ್ಜಲ ಮಟ್ಟ ಹೆಚ್ಚಾಗಿದೆಯಲ್ಲದೆ, ಕೆರೆ ಒತ್ತುವರಿ ಪ್ರಕರಣಗಳು ಬಹಳಷ್ಟು ತಗ್ಗಿವೆ.

‘ನೀರಾವರಿ ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬರುತ್ತದೆ. ಆದರೆ, ಊರಿನ ಕೆರೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಪಂಚಾಯಿತಿಯಲ್ಲಿ ಸಾಕಷ್ಟು ಅನುದಾನವಿರದಿದ್ದರೆ ಇಂತಹ ಕೆರೆಗಳ ಅಭಿವೃದ್ಧಿ ಆಗುವುದೇ ಇಲ್ಲ. ಈ ಕಾರಣ, ಗ್ರಾಮ ಪಂಚಾಯಿತಿಗಳ ಜೊತೆಗೆ ಕೈಜೋಡಿಸಿರುವ ನಾವು ಊರ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದೇವೆ’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದರು.

‘ಕೆರೆಗಳ ಹೂಳು ಎತ್ತುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡಿದರೆ, ಅದನ್ನು ಸಾಗಿಸುವ ಕೆಲಸವನ್ನು ಆಯಾ ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ. ಧರ್ಮಸ್ಥಳ ಸಂಸ್ಥೆ, ಸ್ಥಳೀಯರ ನೆರವಿನಿಂದ ಸಣ್ಣ ಕೆರೆಗಳನ್ನು, ಸರ್ಕಾರದ ಸಹಭಾಗಿತ್ವದೊಂದಿಗೆ ಕೆರೆ ಸಂಜೀವಿನಿ ಯೋಜನೆಯಡಿ ದೊಡ್ಡ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದೆ’ ಎಂದರು.

‘ನಮ್ಮೂರಿನ ಕೆರೆ ಚಿಕ್ಕ ಕಟ್ಟೆ ರೀತಿ ಇತ್ತು. ಇಷ್ಟು ವಿಶಾಲವಾಗಿದೆ ಎಂಬುದೇ ಗೊತ್ತಿರಲಿಲ್ಲ. 12 ಎಕರೆ ವಿಸ್ತಾರದ ಕೆರೆಯಲ್ಲಿ ನಾಲ್ಕು ಎಕರೆಯಷ್ಟು ಮಾತ್ರ ನೀರು ಇತ್ತು. ಹೂಳು ಎತ್ತಿ ಪುನಶ್ಚೇತನಗೊಳಿಸಿದ ನಂತರ ಉಳಿದ ಎಂಟು ಎಕರೆಯ ಜಾಗದಲ್ಲಿಯೂ ನೀರು ತುಂಬಿದೆ’ ಎಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪಟ್ರಾವುತನಹಳ್ಳಿ ಗ್ರಾಮದ ಪುಟ್ಟರಾಜು ಹೇಳಿದರು.

‘ನಮ್ಮೂರಿನ ಕೆರೆ ಅಭಿವೃದ್ಧಿಗೊಂಡ ನಂತರ, ಭದ್ರಾ ಮೇಲ್ದಂಡೆ ನೀರು ಹರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಕೆರೆ ಅಭಿವೃದ್ಧಿಯಾಗದೇ ಇದ್ದರೆ ಇಲ್ಲೊಂದು ಕೆರೆ ಇತ್ತು ಎನ್ನುವುದೇ ತಿಳಿಯುತ್ತಿರಲಿಲ್ಲ’ ಎಂದು ಶಿರಾ ತಾಲ್ಲೂಕಿನ ಬೆಂಚೆ ಗ್ರಾಮದ ಪುಟ್ಟರಾಜು ಅಭಿಪ್ರಾಯಪಟ್ಟರು.

‘ಸಾಮಾಜಿಕ ಹೊಣೆಗಾರಿಕೆ ಮೂಡಬೇಕು’

‘ಮೊದಲು, ಗ್ರಾಮಸ್ಥರೆಲ್ಲ ಹೋಗಿ ಕೆರೆಗಳ ಹೂಳು ತೆಗೆಯುತ್ತಿದ್ದರು. ಅವುಗಳ ಸಂರಕ್ಷಣೆಯನ್ನೂ ಮಾಡುತ್ತಿದ್ದರು. ಸ್ವಾತಂತ್ರ್ಯಾನಂತರ ಕೆರೆಗಳ ಸಂರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂಬಂತಾಗಿಬಿಟ್ಟಿತು. ಜನರು ಕೆರೆಗಳನ್ನು ನಿರ್ಲಕ್ಷಿಸತೊಡಗಿದರು’ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

‘ನಮ್ಮೂರು ನಮ್ಮ ಕೆರೆ ಯೋಜನೆಯಿಂದ 2.5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ. ಈಗ ಪುನಶ್ಚೇತನಗೊಳಿಸಿರುವ ಕೆರೆಗಳಿಗೆ ಮತ್ತೆ ಹೂಳು ತುಂಬದಂತೆ ಗ್ರಾಮಸ್ಥರೇ ಎಚ್ಚರ ವಹಿಸಬೇಕು. ಯೋಜನೆ ಯಶಸ್ವಿಯಾಗಬೇಕೆಂದರೆ ಸಾಮಾಜಿಕ ಹೊಣೆಗಾರಿಕೆ ಮೂಡಬೇಕು’ ಎಂದು ಅವರು ಸಲಹೆ ನೀಡಿದರು.

****

ಅಂಕಿ–ಅಂಶ

ಪುನಶ್ಚೇತನಗೊಂಡಿರುವ ಕೆರೆಗಳು: 367
ಹೂಳಿನ ಪ್ರಮಾಣ: 96,33,750 ಕ್ಯು.ಮೀ.
ಧರ್ಮಸ್ಥಳ ಸಂಸ್ಥೆ ಅನುದಾನ: ₹24.84 ಕೋಟಿ
ಕೆರೆ ಸಂಜೀವಿನಿ ಅನುದಾನ: ₹5.73 ಕೋಟಿ
ಸ್ಥಳೀಯರ ಪಾಲು: ₹20.58 ಕೋಟಿ
ಒಟ್ಟು ವೆಚ್ಚ: ₹46.39 ಕೋಟಿ

****

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 24 ಕೆರೆಗಳನ್ನು ₹3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆರೆಯ ಸುತ್ತ ಹೂವು–ಹಣ್ಣುಗಳ ಸಸಿ ನೆಡಲಾಗಿದೆ.

- ವಿ. ರಾಮಸ್ವಾಮಿ ಜನಜಾಗೃತಿ ವೇದಿಕೆ, ಅಧ್ಯಕ್ಷ

*****

ಈ ಯೋಜನೆಯಡಿ ಒಟ್ಟು 42 ಲಕ್ಷ ಲೋಡ್‌ ಹೂಳು ತೆಗೆಯಲಾಗಿದೆ. ಈ ವರ್ಷ 120 ಕೆರೆಗಳನ್ನು ಪುನಶ್ಚೇತನಗೊಳಿಸಲಿದ್ದೇವೆ

- ಡಾ.ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕ

****

ನಮ್ಮೂರಿನ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಈಗ ನಾಲ್ಕು ಎಕರೆಯಲ್ಲಿ ಎರಡು ಬೆಳೆ ಬೆಳೆದರೂ ಕೊಳವೆಬಾವಿಗಳಲ್ಲಿ ಒಂದಿಂಚು ನೀರೂ ಕಡಿಮೆಯಾಗಿಲ್ಲ

- ರಮೇಶ್, ಬಸವನಹಳ್ಳಿ,

****

ಕುಡಿಯುವ ನೀರಿಗೆ ತುಂಬಾ ಅಭಾವ ಇತ್ತು. ಈಗ ಅಂತರ್ಜಲ ಮಟ್ಟ ವೃದ್ಧಿಸಿದೆ. ನಮ್ಮ ಊರಿನ ಸಾವಿರ ಕುಟುಂಬಗಳಿಗೆ ಶಾಶ್ವತ ಕುಡಿಯುವ ನೀರು ಸಿಗುತ್ತಿದೆ.

- ಪುಟ್ಟರಾಜು, ಬೆಂಚೆ, ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT