ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3,800 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ: ಅಭಿವೃದ್ಧಿಗೆ ಹಸಿರು ಸ್ಪರ್ಶ ಎಂದ ಮೋದಿ

ಎನ್‌ಎಂಪಿಎ: ನೀಡಿದ ಪ್ರಧಾನಿ
Last Updated 2 ಸೆಪ್ಟೆಂಬರ್ 2022, 19:46 IST
ಅಕ್ಷರ ಗಾತ್ರ

ಮಂಗಳೂರು: ‘ಪರಿಸರಕ್ಕೆ ಹೆಚ್ಚಿನ ಗಮನವನ್ನು ಕೊಟ್ಟು, ಅಭಿವೃದ್ಧಿಗೆ ‘ಹಸಿರು ಸ್ಪರ್ಶ’ ನೀಡುವಲ್ಲಿ ಕೇಂದ್ರ ಸರ್ಕಾರವು ಕಾರ್ಯಪ್ರವೃತ್ತವಾಗಿದೆ. ಎಂಆರ್‌ಪಿಎದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳು ಸರ್ಕಾರದ ‘ಹಸಿರು ಅಭಿವೃದ್ಧಿ’ಯ ಸಂಕಲ್ಪವನ್ನು ಪ್ರತಿಫಲಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದ ಅಡಿ ಕೈಗೆತ್ತಿಕೊಂಡಿರುವ ₹3,800 ಮೌಲ್ಯದ ಎಂಟು ಯೋಜನೆಗಳಿಗೆ ಶುಕ್ರವಾರ ಇಲ್ಲಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಚಾಲನೆ/ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಎಂಆರ್‌ಪಿಎಲ್‌ ಘಟಕದ ಬಿಎಸ್‌–6ಗೆ ಉನ್ನತೀಕರಣ ಹಾಗೂ ಸಮುದ್ರದ ನೀರನ್ನು ಶುದ್ಧೀಕರಣ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ‘ಎಂಆರ್‌ಪಿಎಲ್‌ ತನ್ನ ಅಗತ್ಯಕ್ಕಾಗಿ ನದಿಯ ನೀರನ್ನು ಅವಲಂಬಿಸಿತ್ತು. ನಿರ್ಲವಣೀಕರಣ ಮಾಡಿ ಸಮುದ್ರದ ನೀರಿನ ಬಳಕೆಯಿಂದ ನದಿಯ ಮೇಲಿನ ಅವಲಂಬನೆ ಕಡಿಮೆಯಾಗಲಿದೆ’ ಎಂದರು.

ಕಳೆದ ಎಂಟು ವರ್ಷಗಳಲ್ಲಿ ದೇಶದ ಬಂದರುಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಆಧುನಿಕ ಭಾರತದ ನಿರ್ಮಾಣಕ್ಕೆ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಇಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳು ಕಾರ್ಯಗತವಾದಾಗ ಈ ಭಾಗದ ಆರ್ಥಿಕತೆ ಹಾಗೂ ಮೀನುಗಾರರ ಅಭಿವೃದ್ಧಿಗೆ ಇನ್ನಷ್ಟು ವೇಗ ಲಭಿಸಲಿದೆ ಎಂದರು.

ದೇಶವನ್ನು ಅಭಿವೃದ್ಧಿಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬೇಕಾದರೆ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಗತಿ ನೀಡುವುದು ಅನಿವಾರ್ಯ. ಜೊತೆಗೆ ರಫ್ತು ಪ್ರಮಾಣವನ್ನು ಹೆಚ್ಚಿಸಿ, ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವುದು ಅಗತ್ಯ. ಮೂಲಸೌಲಭ್ಯ ವೃದ್ಧಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅಭೂತಪೂರ್ವ ಕೆಲಸಗಳಾಗಿವೆ. ಭಾರತಮಾಲಾ, ಸಾಗರ ಮಾಲಾ ಯೋಜನೆಗಳು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಸ್ಥಳೀಯ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಇವು ಸಹಕಾರಿಯಾಗಿವೆ. ಈ ಎರಡೂ ಯೋಜನೆಗಳ ಗರಿಷ್ಠ ಲಾಭ ಪಡೆದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ ಎಂದರು.

‘ಸ್ವಾತಂತ್ರ್ಯಾ ನಂತರ ಏಳು ದಶಕಗಳವರೆಗೆ ಅಭಿವೃದ್ಧಿ ಯೋಜನೆಗಳ‌ ಲಾಭವು ಉಳ್ಳವರಿಗಷ್ಟೇ ಸಿಗುತ್ತಿತ್ತು. ಈಗ ಎಲ್ಲಾ ವರ್ಗದ ಜನರಿಗೂ ಸಿಗುತ್ತಿದೆ. ಗೌರವಯುತ ಬದುಕಿಗೆ ಪಕ್ಕಾ ಮನೆ, ಕುಡಿಯಲು ಶುದ್ಧ ನೀರು, ಶೌಚಾಲಯ ಹಾಗೂ ಹೊಗೆರಹಿತ ಅಡುಗೆ ಕೋಣೆ ಅಗತ್ಯ. ದೇಶದ ಕೋಟ್ಯಂತರ ಜನರಿಗೆ ಇವುಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ. ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಡಬಲ್‌ ಎಂಜಿನ್‌ ಸರ್ಕಾರ’ ಕಾರ್ಯಪ್ರವೃತ್ತವಾಗಿದೆ ಎಂದರು.

ಕೇಂದ್ರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಮೋದಿ, ‘ಕರ್ನಾಟಕದಲ್ಲಿ ಹೆದ್ದಾರಿಗಳ ಅಭಿವೃದ್ಧಿಗಾಗಿ ಒಟ್ಟಾರೆ ₹ 70,000 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೂ ಒಂದು ಲಕ್ಷ ಕೋಟಿ ವೆಚ್ಚದ ಪ್ರಸ್ತಾವನೆಗಳು ಅನುಮೋದನೆಯ ಹಂತದಲ್ಲಿವೆ. 2014ಕ್ಕೆ ಹೋಲಿಸಿದರೆ, ಕರ್ನಾಟಕದ ರೈಲ್ವೆ ಬಜೆಟ್‌ನಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಆಯುಷ್ಮಾನ್‌ ಯೋಜನೆಯಲ್ಲಿ ರಾಜ್ಯದಲ್ಲಿ 30 ಲಕ್ಷ ಬಡವರು ಉಚಿತವಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರಿಗೆ ಒಟ್ಟಾರೆ ಸುಮಾರು ₹4000 ಕೋಟಿ ಉಳಿತಾಯವಾಗಿದೆ. ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. 8 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ’ ಎಂದರು.

‘ಸೈನ್ಯ ಮತ್ತು ಸಾಗರ ಶಕ್ತಿ’
‘ದೇಶದ ಸೈನ್ಯ ಮತ್ತು ಸಾಗರ ಶಕ್ತಿಗೆ ಶುಕ್ರವಾರ ಅತ್ಯಂತ ಮಹತ್ವದ ದಿನ’ ಎಂದು ಮೋದಿ ಬಣ್ಣಿಸಿದರು.

ದೇಶದಲ್ಲೇ ತಯಾರಿಸಿದ ಮೊತ್ತಮೊದಲ ಯುದ್ಧ ವಿಮಾನ ವಾಹಕ ಹಡಗು ಐಎನ್‌ಎಸ್‌ ವಿಕ್ರಾಂತ್‌ ಅನ್ನು ಕೊಚ್ಚಿಯಲ್ಲಿ ಲೋಕಾರ್ಪಣೆ ಮಾಡಿ ಬಂದಿದ್ದ ಮೋದಿ, ‘ದೇಶದ ಪ್ರತಿಯೊಬ್ಬನೂ ಹೆಮ್ಮೆಪಡಬಹುದಾದ ಸಾಧನೆ ಇದು. ಮಂಗಳೂರಿನಲ್ಲಿ ಸಾಗರದ ಶಕ್ತಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ₹3800 ಕೋಟಿ ಮೊತ್ತರ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಲೋಕಾರ್ಪಣೆ ಆಗಿರುವುದು ಸಹ ಅಷ್ಟೇ ಮಹತ್ವದ ಬೆಳವಣಿಗೆ. ಇಡೀ ಕರಾವಳಿಯ ಅಭಿವೃದ್ಧಿ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT