ಗುರುವಾರ , ಅಕ್ಟೋಬರ್ 6, 2022
23 °C

ಅರಣ್ಯ ಹುತಾತ್ಮರ ಪರಿಹಾರ ₹ 50 ಲಕ್ಷಕ್ಕೆ ಏರಿಕೆ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅರಣ್ಯ ಹುತಾತ್ಮರ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ನೀಡುವ ದೃಷ್ಟಿಯಿಂದ ನೀಡಲಾಗುವ ಪರಿಹಾರ ಮೊತ್ತವನ್ನು ₹ 30 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅರಣ್ಯ ಇಲಾಖೆ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ– 2022 ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

’ಹುತಾತ್ಮರಿಗೆ ₹ 20 ಲಕ್ಷ ಇದ್ದ ಪರಿಹಾರವನ್ನು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ₹ 30 ಲಕ್ಷಕ್ಕೆ ಹೆಚ್ಚಿಸಿದ್ದರು. ಹುತಾತ್ಮರ ನೇಮಕಾತಿ, ಕಲ್ಯಾಣ ಎಲ್ಲವನ್ನೂ ಸರ್ಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ. ನೀವು ಅರಣ್ಯ ರಕ್ಷಣೆ ಮಾಡಿ, ಸರ್ಕಾರ ನಿಮ್ಮ ರಕ್ಷಣೆ ಮಾಡುತ್ತದೆ‘ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಅವರು ಮನವಿ ಮಾಡಿದರು.

ಶೇ 21ರಷ್ಟಿರುವ ಅರಣ್ಯ ಪ್ರದೇಶ ಶೇ 30ರಷ್ಟು ಗುರಿ: ‘ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಬಂಜರು ಭೂಮಿ ಇದ್ದು ಇದನ್ನು ಅರಣ್ಯೀಕರಣ ಮಾಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಬಹುದು. ಬಹಳಷ್ಟು ಗುಡ್ಡಗಾಡುಗಳಿವೆ. ಅಲ್ಲಿ ಮೂಲ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮಗೊಳಿಸಬಹುದು. ಟಾಟಾ ಸಂಸ್ಥೆಯ ಕಬ್ಬಿಣದ ಅದಿರಿನ ಗಣಿಗಳು ಜಮ್‌ ಶೇಡ್ ಪುರದಲ್ಲಿದ್ದು, ಅಲ್ಲಿ ಎಲ್ಲೆಲ್ಲಿಯೂ ಹಸಿರಿನಿಂದ ತುಂಬಿದೆ. ಗಣಿಗಳಲ್ಲಿ ಮಾಡಬಹುದಾದರೆ ಗುಡ್ಡಗಾಡಿನಲ್ಲಿ ಸಾಧ್ಯವಿಲ್ಲವೇ. ಇಚ್ಚಾಶಕ್ತಿ ಇದ್ದರೆ ಅರಣ್ಯ ಪ್ರದೇಶ ಹೆಚ್ಚಿಸೋಣ. ಜನಾಂಗಕ್ಕೆ ಇದಕ್ಕಿಂತ ಹೆಚ್ಚಿನ ಕೊಡುಗೆ ಮತ್ತೊಂದಿಲ್ಲ’ ಎಂದರು.

‘ಒಂದು ವರ್ಷದಲ್ಲಿ ಆಗುವ ಪರಿಸರ ನಷ್ಟವನ್ನು ಅದೇ ವರ್ಷ ತುಂಬುವ ಕೆಲಸ ಮಾಡಬೇಕು. ಪರಿಸರ ಆಯವ್ಯಯ ರೂಪಿಸಿದ ಪ್ರಥಮ ರಾಜ್ಯ ನಮ್ಮದು. ₹ 100 ಕೋಟಿಯನ್ನು ಇದಕ್ಕೆ ಮೀಸಲಿಡಲಾಗಿದೆ. ಈಗಾಗಲೇ ಪರಿಸರ ಆಯವ್ಯಯ ಮಾಡುವ ಬಗೆಯನ್ನು ಇಲಾಖೆ ರೂಪಿಸಿದೆ. ಸರ್ಕಾರ ಕ್ರಿಯಾಯೋಜನೆಗೆ ಅನುಮೋದನೆ ಕೂಡ ನೀಡಿದೆ. ಈ ವರ್ಷ ₹ 100 ಕೋಟಿಯಲ್ಲಿ ಅರಣ್ಯೀಕರಣ ಹೆಚ್ಚಿಗೆ ಮಾಡಲಾಗುವುದು. ಅರಣ್ಯ ಸೂಕ್ಷ್ಮ ಪ್ರದೇಶಗಳನ್ನು ಉಳಿಸಿಕೊಳ್ಳಲು ವಿಶೇಷ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಮಾಡಿದೆ. ಈ ವರ್ಷ ಕ್ರಿಯಾಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಹೊಸ ಮಾದರಿಯನ್ನು ಸಿದ್ಧಪಡಿಸಿ ಬರುವ ದಿನಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದು’ ಎಂದರು.

ಮಾನವ– ಪ್ರಾಣಿ ಸಂಘರ್ಷ: ‘ಅರಣ್ಯ ಇಲಾಖೆ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವತ್ತ ಶ್ರಮಿಸಬೇಕು. ಆನೆ ಕಾಟ ದೊಡ್ಡ ಪ್ರಮಾಣದಲ್ಲಿದೆ. ಅವುಗಳನ್ನು ರಕ್ಷಣೆ ಮಾಡಲು ಹೊಸ ವಿಧಾನ ಬಳಸಲು ₹ 100 ಕೋಟಿ ಒದಗಿಸಲಾಗಿದೆ. ದಿವಂಗತ ಉಮೇಶ್ ಕತ್ತಿಯವರು ಬಹಳ ಆಸಕ್ತಿ ವಹಿಸಿದ್ದರು. ಬೇಲಿ ಹಾಕುವ ಹೊಸ ವಿಧಾನಗಳ ಬಗ್ಗೆ ಚರ್ಚೆ ಮಾಡಿ ಬಂಡೀಪುರದಲ್ಲಿ ಅದರ ಪ್ರಯೋಗವೂ ನಡೆಯುತ್ತಿದೆ. ಕತ್ತಿಯವರು ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅವರು ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಿ ಯಾವುದೇ ರಾಜಿಯನ್ನು ಮಾಡಿಕೊಳ್ಳದ ವ್ಯಕ್ತಿಯಾಗಿದ್ದರು. ಒತ್ತಡಗಳಿಗೆ ಮಣಿಯಲಿಲ್ಲ. ಇನ್ನಷ್ಟು ದಿನ ಅರಣ್ಯ ಸಚಿವರಾಗಿ ಕೆಲಸ ಮಾಡಬೇಕಿತ್ತು. ಅಕಾಲಿಕವಾಗಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ನೆನಪು ಸದಾ ಮನದಾಳದಲ್ಲಿ ಇರುತ್ತದೆ‘ ಎಂದರು.

ಅರಣ್ಯ ಸಚಿವರಾಗಿದ್ದ ದಿ. ಉಮೇಶ್ ಕತ್ತಿ ಅವರ ಅವಧಿಯಲ್ಲಿ ಅರಣ್ಯ ಇಲಾಖೆಯ ಸಾಧನೆಗಳ ಕುರಿತ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು