ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿ: ಡಾ. ಹನುಮಂತಯ್ಯ

ರಾಜ್ಯಸಭೆಯಲ್ಲಿ ಡಾ.ಎಲ್. ಹನುಮಂತಯ್ಯ ಪ್ರಸ್ತಾಪ
Last Updated 11 ಫೆಬ್ರುವರಿ 2021, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸ್ತ್ರೀಯ ಸ್ಥಾನ–ಮಾನ ಪಡೆದಿರುವ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡಬೇಕು’ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ರಾಜ್ಯಸಭೆಯಲ್ಲಿ ಗುರುವಾರ ಪ್ರಸ್ತಾಪಿಸಿದರು.

‘ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥೆಯು ಸ್ವಾಯತ್ತವಾಗಿರಬೇಕು ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೆವು. ಆದರೆ, ಕೇಂದ್ರ ಸರ್ಕಾರವು ಎಲ್ಲ ಶಾಸ್ತ್ರೀಯ ಭಾಷಾ ಸ್ಥಾನ–ಮಾನ ಪಡೆದ ಶಾಸ್ತ್ರೀಯ ಭಾಷಾ ಸಂಸ್ಥೆಗಳನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯದ ಅಧೀನದಲ್ಲಿ ತರಲು ಪ್ರಯತ್ನಿಸುತ್ತಿದೆ. ಇದು ಪ್ರತ್ಯೇಕ ಹಾಗೂ ಸ್ವಾಯತ್ತವಾಗಿಲ್ಲದ ಯಾವುದೇ ಶಾಸ್ತ್ರೀಯ ಭಾಷೆಯ ಸಂಸ್ಥೆಗಳ ಬೆಳವಣಿಗೆಗೆ ಹಾನಿಕರ’ ಎಂದೂ ಅವರು ಹೇಳಿದರು.

ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮೈಸೂರಿನ ಭಾರತೀಯ ಭಾಷಾ ಕೇಂದ್ರವನ್ನು ಹಾಗೂ ಭಾರತೀಯ ಅನುವಾದ ಮತ್ತು ವ್ಯಾಖ್ಯಾನ ಸಂಸ್ಥೆಯನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ (ಬಿವಿಬಿ) ಪರಿವರ್ತಿಸುವ ಪ್ರಸ್ತಾವ ಕೋರಿದೆ. ಶಾಸ್ತ್ರೀಯ ಭಾಷಾ ಸಂಸ್ಥೆಗಳನ್ನು ಬಿವಿಬಿ ಅಡಿಯಲ್ಲಿ ತರಲು ಎನ್. ಗೋಪಾಲಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಲಹೆಗಳನ್ನು ಕೋರಿದೆ.

‘ಈ ಹಿಂದೆ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿ, ಪ್ರಕಾಶ್‌ ಜಾವಡೇಕರ್ ಹಾಗೂ ಈಗ ಸಚಿವರಾಗಿರುವ ರಮೇಶ್ ಪೋಖ್ರಿಯಾಲ್ ಅವರಿಗೆ ಮನವಿ ಸಲ್ಲಿಸಿದ್ದು, ಕನ್ನಡಕ್ಕೆ ಸ್ವಾಯತ್ತ ಸ್ಥಾನಮಾನ ನೀಡಬೇಕು ಎಂದು ರಾಜ್ಯ ನಿಯೋಗದ ಮೂಲಕ ಪ್ರಸ್ತಾವ ಸಲ್ಲಿಸಿದ್ದೇನೆ. ಈ ಪ್ರಸ್ತಾವವನ್ನು ಮೂವರು ಸಚಿವರು ಒಪ್ಪಿದ್ದು, ಸ್ವಾಯತ್ತ ಸ್ಥಾನ–ಮಾನ ಕೊಡುವುದಾಗಿ ಖಚಿತ ಭರವಸೆ ನೀಡಿದ್ದರು. ಆದರೆ, ಈವರೆಗೂ ಈ ಸ್ಥಾನ–ಮಾನ ನೀಡಿಲ್ಲ’ ಎಂದೂ ಹನುಮಂತಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT