ಮಂಗಳವಾರ, ಜುಲೈ 5, 2022
21 °C
ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ

‘ತಾ.ಪಂ. ವ್ಯವಸ್ಥೆ ತೆಗೆಯಬೇಕು; ಆದರೆ ನಮಗೆ ಅಧಿಕಾರ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನು ಖಂಡಿತ ತೆಗೆಯಬೇಕು. ಆದರೆ, ನಮಗೆ ಅಧಿಕಾರ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದಅವರು, ‘ಮೂರು ಹಂತದ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ, ನಮಗೆ ಅವಕಾಶ ಇಲ್ಲ. ಅಧಿಕಾರ ಇದ್ದಿದ್ದರೆ ತೆಗೆದು ಬಿಸಾಕುತ್ತಿದ್ದೆವು’ ಎಂದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಈಗ ಚುನಾವಣೆಗಳನ್ನು ನಡೆಸಿದರೆ ಮೀಸಲಾತಿ ಪಟ್ಟಿಯಿಂದ ಹಿಂದುಳಿದ ವರ್ಗಗಳನ್ನು ಕೈಬಿಡಬೇಕಾಗುತ್ತದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸಲಾಗುವುದು’ ಎಂದು ತಿಳಿಸಿದರು.

ಮಸೂದೆ ಕುರಿತು ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ರಮೇಶ್‌ ಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್.ಎಲ್. ಭೋಜೇಗೌಡ, ಮರಿತಿಬ್ಬೇಗೌಡ ಮತ್ತು ಕಾಂಗ್ರೆಸ್‌ನ ಎಸ್. ರವಿ, ಯು.ಬಿ. ವೆಂಕಟೇಶ್‌, ಪಿ.ಆರ್. ರಮೇಶ್ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ದುರುದ್ದೇಶದಿಂದಲೇ ಈ ಮಸೂದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ತಾಲ್ಲೂಕು ಪಂಚಾಯಿತಿಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. ಕೇವಲ ಹೆಸರಿಗೆ ಉಳಿದಿವೆ. ಲೆಕ್ಕಕ್ಕಿಲ್ಲದಂತಿರುವ ತಾಲ್ಲೂಕು ಪಂಚಾಯಿತಿಗಳನ್ನು ಮುಚ್ಚಿ ಇಲ್ಲವೇ ಬಲ ತುಂಬಿ’ ಎಂದು ಪ್ರತಿಪಾದಿಸಿದರು.

‘ಸಹಕಾರ ಸಂಸ್ಥೆಗಳ ಅಧ್ಯಕ್ಷ ಅಥವಾ ಸದಸ್ಯ ಸ್ಥಾನದಿಂದ ವಜಾಗೊಂಡವರು ಕೂಡ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವುದು ಸಹ ಸರಿ ಇಲ್ಲ. ಈ ಅಂಶ
ವನ್ನು ದುರುಪಯೋಗಪಡಿಸಿಕೊಳ್ಳುವಸಾಧ್ಯತೆಯೇ ಹೆಚ್ಚು. ಇದೇ ರೀತಿಯ ಕಾಯ್ದೆಯನ್ನು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ರೂಪಿಸಿ’ ಎಂದು ಕಾಂಗ್ರೆಸ್‌ನ ರವಿ ಮತ್ತು ಜೆಡಿಎಸ್‌ನ ಮರಿತಿಬ್ಬೇಗೌಡ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಅಂಗೀಕಾರವಾದ ಈ ಮಸೂದೆಗೆ ಚರ್ಚೆ ಬಳಿಕ ಅನುಮೋದನೆ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು