ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ತಾಲ್ಲೂಕು: ಹಣ ಇಲ್ಲವಾದರೆ ರದ್ದು ಮಾಡಿ’–ಹೈಕೋರ್ಟ್ ಕಿಡಿ

Last Updated 30 ನವೆಂಬರ್ 2021, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸದಾಗಿ ಘೋಷಿಸಿದ 50 ತಾಲ್ಲೂಕುಗಳಲ್ಲಿ, ತಾಲ್ಲೂಕು ಕೇಂದ್ರ ಕಚೇರಿ ನಿರ್ಮಾಣ ವಿಳಂಬವಾಗುತ್ತಿದೆ ಹಾಗೂ ಅಗತ್ಯ ಮೂಲಸೌಕರ್ಯಕ್ಕೆ ಹಣ ಒದಗಿಸಲು ಸದ್ಯಕ್ಕೆ ಆಗುತ್ತಿಲ್ಲ ಎನ್ನುವುದಾದರೆ ಹೊಸ ತಾಲ್ಲೂಕುಗಳನ್ನು ರದ್ದು ಮಾಡಿಬಿಡಿ’ ಎಂದು ಹೈಕೋರ್ಟ್ ಕಿಡಿಕಾರಿದೆ.

ಈ ಕುರಿತಂತೆ ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ,‘50 ತಾಲ್ಲೂಕುಗಳಲ್ಲಿ ಮೂಲಸೌಕರ್ಯ ಒದಗಿಸಲು ದೊಡ್ಡ ಮೊತ್ತದ ಹಣಕಾಸು ಬೇಕಾಗುತ್ತದೆ. ಆದರೆ, ಕೋವಿಡ್ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿಯಲ್ಲ. ಆದಾಗ್ಯೂ, ಹಣಕಾಸಿನ ನೆರವು ನೀಡಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ನಡೆಸಿದೆ’ ಎಂದರು.

ಪ್ರಮಾಣ ಪತ್ರ ಪರಿಶೀಲಸಿದ ನ್ಯಾಯಪೀಠ, ‘ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರ ಸಮಾಧಾನಕರವಾಗಿಲ್ಲ. ಹಣ ಬಿಡುಗಡೆ ಮಾಡಲಾಗಿದೆ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದಷ್ಟೇ ಹೇಳಲಾಗಿದೆ. ಇದೊಂದು ಅಸ್ಪಷ್ಟ ಪ್ರಮಾಣಪತ್ರ. ಆದ್ದರಿಂದ, ಹೊಸದಾಗಿ ಸಮರ್ಪಕ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ಸೂಚಿಸಿತು.

‘ಒಂದು ವೇಳೆ ಸಮರ್ಪಕ ಪ್ರಮಾಣಪತ್ರ ಸಲ್ಲಿಸಲು ವಿಫಲವಾದಲ್ಲಿ ಮುಂದಿನ ವಿಚಾರಣೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು 2022ರ ಜನವರಿ 14ಕ್ಕೆ ಮುಂದೂಡಿತು.

ಆಕ್ಷೇಪ ಏನು?: ‘2017–18ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿದ 50 ತಾಲ್ಲೂಕುಗಳಲ್ಲಿ ತಾಲ್ಲೂಕು ಕೇಂದ್ರ ಕಚೇರಿಗಳೇ ಇಲ್ಲ ಮತ್ತು ಅವುಗಳಿಗೆ ಅಗತ್ಯವಾದ ಇತರೆ ಸರ್ಕಾರಿ ಕಚೇರಿಗಳೂ ಸ್ಥಾಪನೆಯಾಗಿಲ್ಲ. ಮೂರು ವರ್ಷ ಕಳೆದರೂ ಸಾರ್ವಜನಿಕರು ಪರದಾಡುತ್ತಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT