ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಜ್ಞಾನವಿಲ್ಲದೇ ರಾತ್ರಿ ಕರ್ಫ್ಯೂ: ಡಿ.ಕೆ. ಶಿವಕುಮಾರ್

Last Updated 25 ಡಿಸೆಂಬರ್ 2020, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಜ್ಞಾನವಿಲ್ಲದೇ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ತೀರ್ಮಾನವಾಗಿರಲಿಲ್ಲ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಈ ನಿರ್ಧಾರ ಕೈಗೊಂಡಿದ್ದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ರಾತ್ರಿ ಮಾತ್ರ ಕೋವಿಡ್‌ ಸೋಂಕು ಹರಡುತ್ತದೆ, ಹಗಲಿನಲ್ಲಿ ಹರಡುವುದಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ರಾತ್ರಿ 11 ಗಂಟೆ ಬಳಿಕ ಎಷ್ಟು ಮಂದಿ ಓಡಾಡುತ್ತಾರೆ. ಸಾಮಾನ್ಯ ಪರಿಜ್ಞಾನ ಇರುವ ಯಾರೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ’ ಎಂದರು.

‘ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ. ಅವರ ಅಭಿಪ್ರಾಯ ಪಡೆಯದೇ ದಿಢೀರ್‌ ನಿರ್ಧಾರ ಕೈಗೊಂಡಿದ್ದು ಏಕೆ? ರಾತ್ರಿ ಕರ್ಫ್ಯೂ ಜಾರಿಗೊಳಿಸಿದರೆ ಕೋವಿಡ್‌ ಸೋಂಕು ಹರಡುವುದಿಲ್ಲ ಎಂದು ತಜ್ಞರು ಹೇಳಿದ್ದರೆ ಅವರ ಫೋಟೊ ಕೊಡಿ. ನಮ್ಮ ಮನೆಗಳಲ್ಲಿ ಇರಿಸಿಕೊಳ್ಳುತ್ತೇವೆ’ ಎಂದು ಪ್ರಶ್ನಿಸಿದರು.

ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಗಲಿನಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ. ಅಗತ್ಯ ಇರುವ ಕಡೆ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಈಗಾಗಲೇ ಉದ್ಯೋಗ, ವಹಿವಾಟು ಕಳೆದುಕೊಂಡವರ ಮೇಲೆ ಮತ್ತೆ ಸವಾರಿ ಮಾಡಬಾರದು. ಪ್ರಚಾರಕ್ಕಾಗಿ ಇಷ್ಟ ಬಂದ ಹಾಗೆ ತೀರ್ಮಾನ ಮಾಡಬಾರದು ಎಂದು ಶಿವಕುಮಾರ್‌ ಹೇಳಿದರು.

‘ಇದೊಂಡು ‘ಯೂ ಟರ್ನ್‌’ ಸರ್ಕಾರ. ಎಷ್ಟು ನಿರ್ಧಾರಗಳನ್ನು ವಾಪಸ್‌ ಪಡೆದಿದೆ ಎಂದು ಲೆಕ್ಕ ಹಾಕಬೇಕು’ ಎಂದು ಟೀಕಿಸಿದರು.

‘ವಿವೇಚನೆಯಿಂದ ಕೈಗೊಂಡಿದ್ದ ನಿರ್ಧಾರ’

‘ರಾತ್ರಿ ಕರ್ಫ್ಯೂ ನಿರ್ಧಾರವನ್ನು ವಿವೇಚನೆಯಿಂದಲೇ ಕೈಗೊಳ್ಳಲಾಗಿತ್ತು. ಅದು ರಾಜಕೀಯ ನಿರ್ಧಾರವಲ್ಲ. ಬ್ರಿಟನ್‌ನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಜರ್ಮನಿಯಲ್ಲೂ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲಿ ಇರುವವರಿಗೆ ಬುದ್ಧಿ ಇಲ್ಲ ಎಂದು ಹೇಳಲು ಸಾಧ್ಯವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ್‌ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಜನರ ಆರೋಗ್ಯಕ್ಕಾಗಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಡಿ.ಕೆ. ಶಿವಕುಮಾರ್‌ ಅವರಂತಹವರ ಪ್ರಮಾಣಪತ್ರ ಅಗತ್ಯವಿಲ್ಲ. ಜಾಮೀನಿನ ಮೇಲೆ ಹೊರಗೆ ಇರುವವರೇ ಆರೋಪ ಮಾಡುತ್ತಾರೆ’ ಎಂದು ತಿರುಗೇಟು ನೀಡಿದರು.

‘ಬ್ರಿಟನ್‌ನಿಂದ ಬಂದವರ ‍ಪೈಕಿ 10 ಜನರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಎಲ್ಲರ ಮಾದರಿಗಳನ್ನು ನಿಮ್ಹಾನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT