ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಪ್ಯೂ ಜಾರಿ: ಎಲ್ಲೆಡೆ ಖಾಕಿ ನಾಕಾಬಂದಿ

ಹೋಟೆಲ್‌, ಪಬ್‌ ಬಾಗಿಲು ಮುಚ್ಚಿಸಿದ ಪೊಲೀಸರು: ಕೆಲವೆಡೆ ವಾಹನ ದಟ್ಟಣೆ
Last Updated 28 ಡಿಸೆಂಬರ್ 2021, 18:41 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ರೂಪಾಂತರಿ ತಳಿ ಓಮೈಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರ ಇದೇ 28ರಿಂದ 2022ರ ಜನವರಿ 7ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಇದಕ್ಕೆ ಮೊದಲ ದಿನ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ನಗರದ ವಿವಿಧೆಡೆ‍ಪೊಲೀಸ್‌ ಸಿಬ್ಬಂದಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ನಡೆಸಿದರು. ರಾತ್ರಿ 9.30ಕ್ಕೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಹೊಯ್ಸಳ ಹಾಗೂ ಚೀತಾ ಸಿಬ್ಬಂದಿ 10 ಗಂಟೆಯೊಳಗೆ ಹೋಟೆಲ್‌, ಪಬ್‌ ಹಾಗೂ ರೆಸ್ಟೋರೆಂಟ್‌ಗಳ ಬಾಗಿಲು ಮುಚ್ಚುವಂತೆ ಸೂಚನೆ ನೀಡುತ್ತಿದ್ದರು. ಕೆಲವೆಡೆ, ಗಸ್ತಿನಲ್ಲಿದ್ದ ಸಿಬ್ಬಂದಿ 9.50ಕ್ಕೆ ಅಂಗಡಿಗಳ ಬಾಗಿಲು ಹಾಕಿಸಿದರು.

ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದುದರಿಂದ ಹಲವೆಡೆ ದಟ್ಟಣೆ ಏರ್ಪಟ್ಟಿತ್ತು. ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರ ಸೂಚನೆಯಂತೆ ನಗರದ ಎಲ್ಲಾ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ಧ್ವನಿವರ್ಧಕಗಳ ಮೂಲಕ ರಾತ್ರಿ ಕರ್ಫ್ಯೂಗೆ ಸಹಕರಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದರು. ಯಾರೂ ಮನೆಯಿಂದ ಹೊರಬರದಂತೆ ಸೂಚಿಸಿದರು.

ಟೌನ್‌ಹಾಲ್‌, ಎಂ.ಜಿ.ರಸ್ತೆ. ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರ, ಜೆ.ಪಿ.ನಗರ, ಜಯನಗರ‌, ಶಿವಾಜಿನಗರ, ಉಪ್ಪಾರಪೇಟೆ, ಮೆಜೆಸ್ಟಿಕ್‌, ಹೆಬ್ಬಾಳ, ಯಲಹಂಕ, ಸದಾಶಿವನಗರ, ಎಚ್‌ಎಸ್‌ಆರ್‌ ಬಡಾವಣೆ, ಎಲೆಕ್ಟ್ರಾನಿಕ್‌ ಸಿಟಿ, ಮಹಾಲಕ್ಷ್ಮಿ ಲೇಔಟ್‌, ಕೆಂಗೇರಿ, ಮೈಸೂರು ರಸ್ತೆ, ದೀಪಾಂಜಲಿನಗರ, ಮಾಗಡಿ ರಸ್ತೆ, ಸಂಜಯನಗರ, ಜೆ.ಸಿ.ನಗರ, ವಿಜಯನಗರ, ಬೈಯಪ್ಪನಹಳ್ಳಿ, ಕೆ.ಆರ್‌.ಪುರ, ಜಾಲಹಳ್ಳಿ, ಯಶವಂತಪುರ, ಪೀಣ್ಯ, ಜೀವನ್‌ಬಿಮಾ ನಗರ, ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ಮೈಸೂರು ಬ್ಯಾಂಕ್‌ ವೃತ್ತ, ಕಾರ್ಪೊರೇಷನ್ ವೃತ್ತ, ಪುರಭವನ, ನೃಪತುಂಗ ರಸ್ತೆ ಸೇರಿದಂತೆ ವಿವಿಧೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಪ್ರಮುಖ ಹಾಗೂ ಒಳರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸಿದರು. ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಮೆಜೆಸ್ಟಿಕ್‌ ಸುತ್ತಲಿನ ಪ್ರದೇಶಗಳಲ್ಲಿನ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳಿಗೆ ಬಾಗಿಲು ಹಾಕಿದ್ದರು. 10 ಗಂಟೆಯ ನಂತರವೂ ರಸ್ತೆಗಳಲ್ಲಿ ಸಂಚರಿಸುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯಗಳೂ ಕಂಡುಬಂದವು. ಸ್ಯಾಟಲೈಟ್‌ ಬಸ್‌ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲೂ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಕರ್ತವ್ಯದಲ್ಲಿದ್ದ ಸಿಬ್ಬಂದಿ ತುರ್ತು ಸೇವೆಗಳ ವಾಹನಗಳು ಹಾಗೂ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಕಳುಹಿಸುತ್ತಿದ್ದರು.

ಪ್ರಯಾಣಿಕರ ಪರದಾಟ

ಬೇರೆ ಬೇರೆ ಊರುಗಳಿಂದ ನಗರಕ್ಕೆ ಬಂದಿದ್ದವರು ಮನೆಗಳಿಗೆ ಹೋಗಲು ವಾಹನಗಳು ಸಿಗದೆ ಪರದಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಆಟೊ ಹಾಗೂ ಕ್ಯಾಬ್‌ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳುತ್ತಿದ್ದರು. ಅವರು ಕೇಳಿದಷ್ಟು ಹಣ ಕೊಡಲಾಗದೆ ಕೆಲವರು ಮಕ್ಕಳೊಂದಿಗೆ ರೈಲ್ವೆ ಹಾಗೂ ಬಸ್‌ ನಿಲ್ದಾಣದ ಬಳಿ ಬ್ಯಾಗ್‌ಗಳನ್ನು ಹಿಡಿದು ನಿಂತಿದ್ದರು.

ಕೆಲವೆಡೆ ಆಟೊ ಸಂಚಾರಕ್ಕೆ ಪೊಲೀಸರು ಅವಕಾಶ ನಿರಾಕರಿಸಿದರು. ಹೀಗಾಗಿ ಚಾಲಕರು ಹಾಗೂ ಪೊಲೀಸ್‌ ಸಿಬ್ಬಂದಿ ನಡುವೆ ವಾಗ್ವಾದ ಏರ್ಪಟ್ಟಿತ್ತು.

ಪೊಲೀಸರೊಂದಿಗೆದಿವ್ಯಾ ಸುರೇಶ್‌ ವಾಗ್ವಾದ

ಬಿಗ್‌ ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್‌ ಅವರು 10 ಗಂಟೆಯ ನಂತರವೂ ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಲು ಮುಂದಾದರು. ದೃಶ್ಯ ಮಾಧ್ಯಮದವರು ಇದನ್ನು ಸೆರೆಹಿಡಿಯಲು ಮುಂದಾದಾಗ ಅವರ ಸ್ನೇಹಿತ ಕ್ಯಾಮೆರಾ ಕಸಿದುಕೊಳ್ಳಲು ಪ್ರಯತ್ನಿಸಿದರು. ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT