ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಳೆಗೇರಿ ಅಭಿವೃದ್ಧಿಯಿಂದ ಸ್ಮಾರ್ಟ್ ಸಿಟಿ ಸಾಕಾರ’

ಕಲಬುರ್ಗಿ ಕೇಂದ್ರೀಯ ವಿ.ವಿ ಕುಲಾಧಿಪತಿ ಅಭಿಮತ
Last Updated 5 ಜನವರಿ 2021, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್‌ ಸಿಟಿ ಯೋಜನೆ ಸಾಕಾರವಾಗಬೇಕಾದರೆ ಮೊದಲು ಕೊಳೆಗೇರಿ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕು’ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎನ್.ಆರ್. ಶೆಟ್ಟಿ ತಿಳಿಸಿದರು.

ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ನಿಟ್ಟೆ ಗ್ರಾಮದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು, ತರಬೇತಿ ಮತ್ತು ಕಲಿಕಾ ಅಕಾಡೆಮಿ ಹಮ್ಮಿಕೊಂಡ ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಗರಗಳ ಅಭಿವೃದ್ಧಿಗೆ ಕೊಳೆಗೇರಿನಿವಾಸಿಗಳು ಶ್ರಮಿಸುತ್ತಿದ್ದಾರೆ. ಇಲ್ಲಿ ವಾಸಿಸುತ್ತಿರುವ ಕಟ್ಟ ಕಡೆಯ ವ್ಯಕ್ತಿಯ ಬದುಕು ಕೂಡ ಹಸನಾಗಲು ಪೂರಕವಾದ ಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ ಸ್ಮಾರ್ಟ್‌ ಸಿಟಿ ಯಂತಹ ಯೋಜನೆಗಳು ಮುಗ್ಗರಿಸುತ್ತವೆ. ನಗರದಲ್ಲಿನ ಕಾರ್ಮಿಕರ ಬದುಕು ಸುಧಾರಿಸದಿದ್ದಲ್ಲಿ ಅಂತಹ ನಗರದಲ್ಲಿ ಏನೇ ಸವಲತ್ತುಗಳು ಇದ್ದರೂ ಅದು ಸ್ಮಾರ್ಟ್‌ ಸಿಟಿಯ ಅರ್ಹತೆ ಪಡೆಯುವುದಿಲ್ಲ’ ಎಂದು ಹೇಳಿದರು.

‘ಸ್ಮಾರ್ಟ್‌ ಸಿಟಿಯ ಪರಿಕಲ್ಪನೆಯು ನಗರದಿಂದ ನಗರಕ್ಕೆ ಭಿನ್ನವಾಗಿರಬೇಕು. ಅಲ್ಲಿನ ಸಂಸ್ಕೃತಿ, ಜೀವನ ವಿಧಾನ, ನೈಸರ್ಗಿಕ ಸಂಪನ್ಮೂಲಗಳನ್ನು ಆಧರಿಸಿ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಮಾದರಿಗಳನ್ನು ಅನುಸರಿಸಿದರೆ ನಮ್ಮ ಬುಡಕ್ಕೇ ಕೊಡಲಿಯ ಪೆಟ್ಟು ಹಾಕಿಕೊಂಡಂತಾಗುತ್ತದೆ. ನಮ್ಮ ದೇಶದಲ್ಲಿ ಕಡಿಮೆ ಖರ್ಚಿನಲ್ಲಿ ಸವಲತ್ತುಗಳನ್ನು ಸೃಷ್ಟಿಸಬೇಕಾದದ್ದು ಸವಾಲಿನ ಕೆಲಸವಾಗಿದೆ. ಈ ಸವಾಲಿಗೆ ಸರ್‌.ಎಂ. ವಿಶ್ವೇಶ್ವರಯ್ಯಅವರ ನಗರ ಯೋಜನೆಗಳು ಉತ್ತರ ಒದಗಿಸುತ್ತವೆ’ ಎಂದು ಅವರು ವಿವರಿಸಿದರು.

ಉತ್ತರಾಖಂಡದ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್‌ಟಿಟ್ಯೂಟ್ ನಿರ್ದೇಶಕ ಡಾ.ಎನ್. ಗೋಪಾಲಕೃಷ್ಣನ್, ಚೆನ್ನೈನ ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್‌ ಸೆಂಟರ್‌ನ ನಿರ್ದೇಶಕ ಡಾ.ಕೆ. ರಾಮಾಂಜನೇಯಲು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ.ವಿ. ಶ್ರೀಧರ್, ಆಡಳಿತಾಧಿಕಾರಿ ರೋಹಿತ್ ಪೂಂಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT