ಭಾನುವಾರ, ಆಗಸ್ಟ್ 14, 2022
19 °C

ಅವಿಶ್ವಾಸ : ರಾಜಭವನದ ಕದ ತಟ್ಟಲು ಬಿಜೆಪಿ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಳಿಗಾಲದ ಅಧಿವೇಶನದಲ್ಲೇ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಪಟ್ಟು ಸಡಿಸಲಿಸದ ಬಿಜೆಪಿ,ಈ ವಿಷಯದಲ್ಲಿ ರಾಜಭವನದ ಕದ ತಟ್ಟುವ ತಯಾರಿ ನಡೆಸಿದೆ.

ಅವಿಶ್ವಾಸ ನಿರ್ಣಯ ಮಂಡಿಸಿ ಸಭಾಪತಿ ಪದಚ್ಯುತಿಗೊಳಿಸಲು ಬಿಜೆಪಿ ತಯಾರಿ ನಡೆಸಿತ್ತು. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು, ಬಿಜೆಪಿ ನಡೆಗೆ ಅವಕಾಶವೇ ಸಿಗದಂತೆ ಮಾಡಿದರು. ಇದರಿಂದ ಆಕ್ರೋಶಗೊಂಡಿರುವ ಬಿಜೆಪಿ ಸದಸ್ಯರು, ಪರ್ಯಾಯ ಮಾರ್ಗ ಹುಡುಕಲು ಹೊರಟಿದ್ದಾರೆ.

ಸಭಾಪತಿ ನಡೆಯನ್ನು ಟೀಕಿಸಿರುವ ಬಿಜೆಪಿ ಸದಸ್ಯರು, ಅವಿಶ್ವಾಸ ನಿರ್ಣಯ ನೋಟಿಸ್‌ ಅನ್ನು ಚರ್ಚೆಗೆ ಎತ್ತಿಕೊಳ್ಳದ  ಸಭಾಪತಿ ನಡೆಯ ಬಗ್ಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ದೂರು ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ಸಭಾಪತಿ ಅವರನ್ನು ಕೆಳಗಿಳಿಸಲು, ರಾಜ್ಯಪಾಲರ ಭೇಟಿ ಮಾಡಿ ಮನವಿ ಸಲ್ಲಿಸುವುದು, ಶೀಘ್ರದಲ್ಲೇ ಮತ್ತೆ ವಿಧಾನಮಂಡಲ ಅಧಿವೇಶನ ಕರೆಯುವುದು ಸೇರಿದಂತೆ ಪರ್ಯಾಯ ಮಾರ್ಗದ ಬಗ್ಗೆಯೂ  ಚಿಂತನೆ ನಡೆಸುತ್ತಿದ್ದಾರೆ.

‘ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿ 14 ದಿನಗಳು ಕಳೆದರೂ ಸಭಾಪತಿಯವರು ಚರ್ಚೆಗೆ ಎತ್ತಿಕೊಳ್ಳದ ಬಗ್ಗೆ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಗುರುವಾರ ಸಂಜೆಯೇ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ರಾಜ್ಯಪಾಲರು ಅಡ್ವೊಕೇಟ್‌ ಜನರಲ್‌ ಅವರಿಂದ ಅಭಿಪ್ರಾಯ ಪಡೆಯಲು ಮುಂದಾಗಿದ್ದರು. ಈ ನಡುವೆಯೇ ಸಭಾಪತಿಯವರು ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದಾರೆ’ ಎಂದು ಆಯನೂರು ಮಂಜುನಾಥ ಹೇಳಿದರು.

ಆಯನೂರು ಮಂಜುನಾಥ್‌ ಸೇರಿ 11 ಸದಸ್ಯರು ಸಭಾಪತಿ ವಿರುದ್ಧ ನ. 25ರಂದು ಅವಿಶ್ವಾಸ ನಿರ್ಣಯ ನೋಟಿಸ್‌ ನೀಡಿದ್ದರು. ‘ಬುಧವಾರಕ್ಕೆ 14 ದಿನ ಮುಗಿದರೂ, ಪರಿಷತ್‌ ಕಾರ್ಯಕಲಾಪದ ನಿಯಮಾವಳಿಗಳ ಪ್ರಕಾರ ನೋಟಿಸ್‌ ನೀಡಿದ 14 ದಿನಗಳ ‘ತರುವಾಯ’ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂಬ ನಿಯಮವಿದೆ. ಹೀಗಾಗಿ, ಗುರುವಾರ ಬೇಕಿದ್ದರೆ ಚರ್ಚೆಗೆ ಎತ್ತಿಕೊಳ್ಳಬಹುದು’ ಎಂದು ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದ್ದರು. ಈ ಮಧ್ಯೆ, ‘ನೋಟಿಸ್‌ ಬಗ್ಗೆ ನನಗೆ ಅನುಮಾನಗಳಿವೆ. ಕಾನೂನು ತಜ್ಞರ ಸಲಹೆ ಪಡೆದ ಬಳಿಕ ಯಾವಾಗ ಚರ್ಚೆಗೆ ಎತ್ತಿಕೊಳ್ಳಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಬುಧವಾರ ಸದನದಲ್ಲಿ ಸಭಾಪತಿ ಹೇಳಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು