ಮಂಗಳವಾರ, ಜನವರಿ 19, 2021
17 °C
ಸಂಸದ ಸೈಯದ್‌ ನಾಸಿರ್‌ ಹುಸೇನ್‌, ವಿ.ಎಸ್‌.ಉಗ್ರಪ್ಪ ಅಸಮಾಧಾನ

ತರ್ಕವೇ ಇಲ್ಲದ ಬಳ್ಳಾರಿ ವಿಭಜನೆ ನಿರ್ಧಾರ: ವಿ.ಎಸ್‌.ಉಗ್ರಪ್ಪ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ಜಿಲ್ಲೆಯನ್ನು ವಿಭಜನೆ ಮಾಡಿ ಎಂದು ಯಾರು ಕೇಳಿದ್ದರು? ಸರ್ಕಾರ ಏಕೆ ಜನಾಭಿಪ್ರಾಯ ಕೇಳಲಿಲ್ಲ? ಯಾವ ತರ್ಕದ ಆಧಾರದಲ್ಲಿ ವಿಭಜನೆ ಮಾಡಲು ಹೊರಟಿದೆ ಎಂಬುದನ್ನು ಮೊದಲು ಸಮರ್ಥಿಸಿಕೊಳ್ಳಬೇಕು. ತಾರ್ಕಿಕ ಸಮರ್ಥನೆಯೇ ಇಲ್ಲದೆ ಸರ್ಕಾರ ಕೇವಲ ರಾಜಕೀಯ ಕಾರಣಗಳಿಗಾಗಿ ವಿಭಜಿಸಲು ಮುಂದಾಗಿದೆ’ ಎಂದು ರಾಜ್ಯ ಸಭೆ ಸದಸ್ಯ ಸೈಯದ್‌ ನಾಸಿರ್‌ ಹುಸೇನ್‌ ಮತ್ತು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ದೂರಿದರು.

‘ವಿಭಜನೆಯಂಥ ಪ್ರಮುಖ ವಿಷಯವನ್ನು ಸರ್ಕಾರವು ಸಚಿವ ಸಂಪುಟದ ಮುಂದೆ ಚರ್ಚೆಗೆ ಮಂಡಿಸುವ ಮುನ್ನ ಸ್ಥಳೀಯ ಸಂಸ್ಥೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿಲ್ಲ. ವಿರೋಧ ಪಕ್ಷದ ನಾಯಕರ ಸಲಹೆ ಕೇಳಿಲ್ಲ. ರಾಜಕೀಯ ಪಕ್ಷಗಳ ನಿಲುವು ಏನೆಂದು ಕೇಳದೆಯೇ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ವಿಭಜನೆಯ ವಿರುದ್ಧ ಮತ್ತು ಪರವಾಗಿ ಪಕ್ಷಾತೀತವಾದ ಅಭಿಪ್ರಾಯಗಳಿವೆ. ಆದರೆ ಯಾವ ಪಕ್ಷದ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಈ ತೀರ್ಮಾನಕ್ಕೆ ತಾರ್ಕಿಕ ಸಮರ್ಥನೆಯೇ ಇಲ್ಲ’ ಎಂದು ಪ್ರತಿಪಾದಿಸಿದರು.

‘ಬಳ್ಳಾರಿ ಬಹಳ ದೊಡ್ಡದು. ಅದಕ್ಕಾಗಿ ವಿಭಜನೆ ಮಾಡಲಾಗುತ್ತಿದೆ ಎನ್ನುವುದಾದರೆ, 18 ವಿಧಾನಸಭಾ ಕ್ಷೇತ್ರಗಳಿರುವ ಬೆಳಗಾವಿ ಜಿಲ್ಲೆಯನ್ನು ಮೊದಲು ವಿಭಜಿಸಬೇಕು. ತುಮಕೂರಿನಲ್ಲಿ 11 ವಿಧಾನ ಸಭಾ ಕ್ಷೇತ್ರಗಳಿವೆ. ಅಲ್ಲೂ ವಿಭಜನೆ ಮಾಡಲಿ’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಅಭಿವೃದ್ಧಿಯೇ ವಿಭಜನೆಯ ಆಶಯ ಎನ್ನುವುದಾದರೆ ಮೊದಲು ವಿಶ್ವವಿಖ್ಯಾತ ಪಾರಂಪರಿಕ ಪ್ರದೇಶವಾದ ಹಂಪಿಯನ್ನು ಅಭಿವೃದ್ಧಿಪಡಿಸಲಿ, ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳನ್ನು ತೆಗೆಯಲಿ, ಬಳ್ಳಾರಿ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಿ. ನವಿಲೆ ಬಳಿ ಸಮಾನಾಂತರ ಜಲಾಶಯವನ್ನು ನಿರ್ಮಿಸಲಿ’ ಎಂದು ಒತ್ತಾಯಿಸಿದರು.

‘ವಿಭಜನೆಗೆ ಅವಸರ ಮಾಡುತ್ತಿರುವ ಸರ್ಕಾರವು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಏಕೆ ಒತ್ತು ಕೊಡುತ್ತಿಲ್ಲ. ಜಿಲ್ಲಾ ಕೇಂದ್ರ ಯಾವುದಾಗಬೇಕು ಎಂಬ ಬಗ್ಗೆ ವಿವಿಧ ತಾಲ್ಲೂಕುಗಳಲ್ಲಿ ಗೊಂದಲಗಳು ಮುಂದುವರಿದಿರುವಾಗ ಅಭಿವೃಧ್ದಿ ಹೇಗೆ ಸಾಧ್ಯ? ಎರಡು ವರ್ಷದ ಹಿಂದೆ ರಚಿಸಲಾಗಿರುವ ಹೊಸ ತಾಲ್ಲೂಕುಗಳಲ್ಲಿ ಮೊದಲು ಮೂಲಸೌಕರ್ಯ ಕಲ್ಪಿಸಿ ನಂತರ ವಿಭಜನೆಗೆ ಮುಂದಾಗಲಿ’ ಎಂದು ಆಗ್ರಹಿಸಿದರು.

‘ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತೀವವಾದ ಒಲವು, ಕಾಳಜಿ ಸರ್ಕಾರಕ್ಕೆ ಇದ್ದರೆ ಇಡೀ ಜಿಲ್ಲೆಗೆ ಆ ಹೆಸರನ್ನೇ ಇಡಲು ಅವಕಾಶವಿದೆ’ ಎಂದು ಪ್ರತಿಪಾದಿಸಿದ ಅವರು, ‘ಜಿಲ್ಲೆಯ ವಿಭಜನೆಯನ್ನು ವಿರೋಧಿಸುತ್ತಿದ್ದೇವೆಯೇ ಹೊರತು ಜಿಲ್ಲೆಯ ಅಭಿವೃದ್ಧಿಯ ವಿರುದ್ಧವಾಗಿ ಇಲ್ಲ. ಇಡೀ ರಾಷ್ಟ್ರದಲ್ಲೇ ಜಿಲ್ಲೆಯು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದೇ ನಮ್ಮ ಆಶಯ’ ಎಂದು ಹೇಳಿದರು.

‘ಚರಿತ್ರೆ ಗೊತ್ತಿಲ್ಲದ ಸಚಿವ ಆನಂದ್ ಸಿಂಗ್’

‘ಜಿಲ್ಲೆಯ ವಿಭಜನೆಗೆ ಮುಂದಾಗಿರುವ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರಿಗೆ ಚರಿತ್ರೆ ಗೊತ್ತಿಲ್ಲ. ಅದನ್ನು ಅವರು ಓದುವುದೂ ಇಲ್ಲ’ ಎಂದು ಸೈಯದ್ ನಾಸಿರ್ ಹುಸೇನ್ ದೂರಿದರು.

’ಆಂಧ್ರಕ್ಕೆ ಸೇರಿಹೋಗಬಾರದು ಎಂಬ ಕಾರಣಕ್ಕಾಗಿಯೇ. ಕರ್ನಾಟಕ ಏಕೀಕರಣಕ್ಕೆ ಮುಂಚೆಯೇ ಜಿಲ್ಲೆಯನ್ನು ಬೃಹತ್ತಾಗಿ ರಚಿಸಲಾಯಿತು. ಅದನ್ನು ಹೋಳು ಮಾಡಿದರೆ ಚರಿತ್ರೆಗೆ ಅಪಮಾನ ಮಾಡಿದಂತೆ’ ಎಂದು ಅವರು ಪ್ರತಿಪಾದಿಸಿದರು.

‘ಜಿಲ್ಲೆ ವಿಭಜನೆ ಮಾಡುವುದರ ಬದಲಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಿ. ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಿ. ವಿಭಜನೆ ಅನಗತ್ಯ ಎಂದು ಮುಖ್ಯಮಂತ್ರಿಯ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ’ ಎಂದು ವಿಷಾದಿಸಿದರು.

‘ವಿಭಜನೆಯ ಕುರಿತು ಬಿಜೆಪಿ ಶಾಸಕರು ಯಾಕೆ ಮಾತಾಡುತ್ತಿಲ್ಲ.  ಅವರು ತಮ್ಮ ನಿಲುವನ್ನು ಬಹಿರಂಗವಾಗಿ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು