ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಮಿಳುನಾಡಿನ ವೆಲ್ಲಾರು–ವೈಗೈ– ಗುಂಡಾರು ಯೋಜನೆಗೆ ಅವಕಾಶ ನೀಡಲ್ಲ’-ಬೊಮ್ಮಾಯಿ

ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ನೀರಾವರಿ ಯೋಜನೆಗಳಿಗೆ ಒಪ್ಪಿಗೆ ನೀಡಿಲ್ಲ– ಬಸವರಾಜ ಬೊಮ್ಮಾಯಿ
Last Updated 26 ಫೆಬ್ರುವರಿ 2021, 11:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವೇರಿ, ಮಹದಾಯಿ ಮತ್ತು ಕೃಷ್ಣ ಜಲ ವಿವಾದ ಸಂಬಂಧ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಅಲ್ಲದೆ, ಕಾವೇರಿ ಹೆಚ್ಚುವರಿ ನೀರು ಅಧಿಕೃತವಾಗಿ ಹಂಚಿಕೆ ಆಗಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನ್ಯಾಯಾಲಯದಲ್ಲಿರುವ ಅಂತರರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದ ದಾವೆಗಳ ಕುರಿತಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ‘ಕಾವೇರಿ ಹೆಚ್ಚುವರಿ ನೀರು ಹಂಚಿಕೆ ಬಗ್ಗೆ ನ್ಯಾಯಮಂಡಳಿಯಲ್ಲಿ ತೀರ್ಮಾನ ಆಗಬೇಕು. ಆದರೆ, ತಮಿಳುನಾಡು ಕಾನೂನಿಗೆ ವಿರೋಧವಾಗಿ ಯೋಜನೆ ಜಾರಿಗೆ ಹೊರಟಿದೆ. ಇದಕ್ಕೆ ನಾವು ಅವಕಾಶ ನೀಡಲ್ಲ’ ಎಂದರು.

‘ಕಾವೇರಿ, ವೆಲ್ಲಾರು–ವೈಗೈ– ಗುಂಡಾರು ನದಿ ಜೋಡಣೆ ಯೋಜನೆಗೆ ತಮಿಳುನಾಡು ಅಡಿಗಲ್ಲು ಹಾಕಿದೆ. ಇದರೊಂದಿಗೆ 45 ಟಿಎಂಸಿ ನೀರು ಬಳಕೆಗೆ ತಮಿಳುನಾಡು ಮುಂದಾಗಿರುವುದು ಖಂಡನೀಯ. ಇದನ್ನು ವಿರೋಧಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ’ ಎಂದರು.

‘ಅಂತರರಾಜ್ಯ ಜಲ ವಿವಾದ ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಮಧುರೈ ನ್ಯಾಯಾಲಯದಲ್ಲಿ ರೈತರ ಮೂಲಕ ಪಿಟಿಷನ್ ಹಾಕಿದ್ದಾರೆ. ವ್ಯಕ್ತಿಗಳು ಪಿಟಿಷನ್ ಹಾಕುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪಿಟಿಷನ್‌ನಲ್ಲಿ ನಮ್ಮನ್ನು ಪ್ರತಿವಾದಿ ಮಾಡಿಲ್ಲ. ತಮಿಳುನಾಡನ್ನು ಮಾಡಿದ್ದಾರೆ. ಆದರೂ ಆ ಕೇಸಿನಲ್ಲಿ ವಾದ ಮಾಡಲು ತೀರ್ಮಾನ ಮಾಡಿದ್ದು, ಮಧುರೈ ಹೈಕೋರ್ಟ್​​ನಲ್ಲಿ ನಮ್ಮ ವಕೀಲರು ಯೋಜನೆಗೆ ವಿರೋಧ ವ್ಯಕ್ತಪಡಿಸಿ ವಾದ ಮಾಡಲಿದ್ದಾರೆ. ಸುಪ್ರೀಂ ಕೋರ್ಟ್​​​​ಗೆ ಮತ್ತೊಮ್ಮೆ ಈ ವಿಚಾರವನ್ನು ತೆಗೆದುಕೊಂಡು ಹೋಗಲು ತೀರ್ಮಾನಿಸಿದೇವೆ’ ಎಂದರು.

‘ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೋವಾದ ಪಿಟಿಷನ್ ಒಪ್ಪಿಕೊಂಡು ಈಗಿರುವ ಸ್ಥಿತಿಯಲ್ಲಿ ನೀರು ತಿರುವು ಆಗಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಮೂರು ರಾಜ್ಯಕ್ಕೂ ಸೂಚಿಸಿದೆ. ಮೂರು ರಾಜ್ಯದ ಸುಪರಿಂಟೆಂಡೆಂಟ್​ ಎಂಜಿನಿಯರ್ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಅಲ್ಲಿರುವ ವಾಸ್ತಾವಾಂಶ ಪ್ರತಿಬಿಂಬಿಸಲು ತೀರ್ಮಾನ ಆಗಿದೆ’ ಎಂದರು.

‘ನದಿ ಪಾತ್ರ ಕೆಳಗಡೆ ಇದೆ. ಲಿಂಕಿಂಗ್ ಕೆನಾಲ್ ಎತ್ತರದಲ್ಲಿದೆ. ಹೀಗಾಗಿ, ಯಾವುದೇ ನೀರು ತಿರುವು ಸಾಧ್ಯವಿಲ್ಲ. ನ್ಯಾಯಮಂಡಳಿಯ ತೀರ್ಪಿನಂತೆ ರಾಜ್ಯ ನಡೆದುಕೊಂಡಿದೆ. ಅದನ್ನು ತಿರುಗಿಸಿಲ್ಲ. ಆದರೆ, ಕಳಸಾಬಂಡೂರಿ ಯೋಜನೆ ಮುಂದೂಡಲು ಗೋವಾ ಈ ರೀತಿಯ ತಂತ್ರ ಮಾಡುತ್ತಿದೆ’ ಎಂದೂ ಬೊಮ್ಮಾಯಿ ದೂರಿದರು.

‘ನ್ಯಾಯಮಂಡಳಿಯ ಕೊಟ್ಟಿರುವ ನೀರನ್ನು ಬಳಕೆ ಮಾಡಲು, ಕಾನೂನಿನ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಲು ಸರ್ಕಾರ ನಿರ್ಧರಿಸಿದೆ. ಕಾಮಗಾರಿಗೆ ಅನುಮತಿ ಪಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಯಾವ ರೀತಿ ವಾದ ಮಾಡಬೇಕೆಂಬ ಬಗ್ಗೆ ಸಲಹೆ ನೀಡಿದ್ದೇವೆ. ರಾಜ್ಯ ಸರ್ಕಾರದಿಂದ ಯಾವುದೇ ವಿಳಂಬ ಆಗಿಲ್ಲ. ತಮಿಳುನಾಡು ಏಕಾಏಕಿ ಅಡಿಗಲ್ಲು ಹಾಕಿದೆ. ಈ ಬಗ್ಗೆ ಮುಖ್ಯಮಂತ್ರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರಲ್ಲಿ ಯಾವುದೇ ವಿಳಂಬ ಇಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ. ನಮ್ಮ ನೆಲ ಜಲ ಕಾಪಾಡಲು ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ’ ಎಂದರು.

‘ಕೃಷ್ಣ ಎರಡನೇ ನ್ಯಾಯಾದಿಕರಣದ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಣೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ನಮ್ಮ ಜೊತೆ ಮಹಾರಾಷ್ಟ್ರ ಸರ್ಕಾರವೂ ಈ ಸಂಬಂಧ ಅರ್ಜಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಮತ್ತು ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಕಾನೂನು ತಂಡ ಸಿದ್ಧವಾಗಿದೆ’ ಎಂದರು.

ರಾಜ್ಯದ ಅಡ್ವೊಕೇಟ್ ಜನರಲ್ ಹಾಗೂ ಸುಪ್ರೀಂ ಕೋರ್ಟ್​​​​ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲರು, ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು, ಅಂತರರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಿತಿ ಸದಸ್ಯರು, ರಾಜ್ಯದ ಎಲ್ಲ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT