ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರಕ್ಕಲ್ಲ, ಹಣ ದುರ್ಬಳಕೆಗೆ ಮಾತ್ರ ವಿರೋಧ: ಎಚ್‌ಡಿ ಕುಮಾರಸ್ವಾಮಿ

Last Updated 17 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಥವಾ ಅದಕ್ಕೆ ಅಧಿಕೃತವಾಗಿ ದೇಣಿಗೆ ಸಂಗ್ರಹಕ್ಕೆ ತಮ್ಮ ವಿರೋಧ ಇಲ್ಲ.‌ ರಾಮ ಮಂದಿರ‌ ನಿರ್ಮಾಣದ ಹೆಸರಿನಲ್ಲಿ ‌ಹಣ ದುರ್ಬಳಕೆಗೆ ಮಾತ್ರ ವಿರೋಧವಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಣಿಗೆ ಕೊಡದವರ ಮನೆಗಳಿಗೆ ಸ್ಟಿಕ್ಕರ್ ಅಂಟಿಸುತ್ತಿರುವುದನ್ನು ಸಂಬಂಧಿಸಿದವರು ಒಪ್ಪಿಕೊಂಡಿದ್ದಾರೆ. ದೇಣಿಗೆ ಕೊಡುವಂತೆ ಜನರನ್ನು ಪ್ರೇರೇಪಿಸಬೇಕೆಂಬ ಉದ್ದೇಶವಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸಲಿ. ಮನೆಗೆ ಏಕೆ ಸ್ಟಿಕ್ಕರ್ ಅಂಟಿಸಬೇಕು’ ಎಂದು ಕೇಳಿದರು.

ಪೋಲಿ, ಪುಂಡರೆಲ್ಲ ವಿಶ್ವ ಹಿಂದೂ ಪರಿಷತ್ ಸದಸ್ಯರು ಎಂದು ಹೇಳಿಕೊಂಡು ಬೀದಿ, ಬೀದಿಗಳಲ್ಲಿ ರಾಮ ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ? ಹೀಗೆ ಹಣ ವಸೂಲಿಗೆ ಸರ್ಕಾರದ ಅನುಮತಿ ಇದೆಯೆ? ಹಣ ಸಂಗ್ರಹಿಸುವ ವ್ಯಕ್ತಿಗಳಿಗೆ ವಿಶ್ವ ಹಿಂದೂ ಪರಿಷತ್ ಗುರುತಿನ ಚೀಟಿ ನೀಡಿದೆಯೆ? ಎಂದು ಪ್ರಶ್ನಿಸಿದರು.

‘ಹಣ ದುರ್ಬಳಕೆ ಆಗದಂತೆ ತಡೆಯಿರಿ ಎಂದು ಕೇಳುವುದು ಅಪರಾಧವೆ? 1989ರಲ್ಲಿ ರಾಮ ಮಂದಿರದ ಹೆಸರಿನಲ್ಲಿ ಸಂಗ್ರಹಿಸಿದ ಹಣ, ಇಟ್ಟಿಗೆ, ಉಕ್ಕಿನ ಪ್ರಮಾಣ ಎಷ್ಟು? ಅದು ಏನಾಯಿತು? ಎಂಬ ಮಾಹಿತಿ ಈವರೆಗೂ ಹೊರಬಂದಿಲ್ಲ. ಮತ್ತೆ ಅದೇ ರೀತಿ ಆಗಬಾರದು ಎಂಬುದು ನನ್ನ ಉದ್ದೇಶ’ ಎಂದರು.

ಇತಿಹಾಸ ತಜ್ಞರ ಅಭಿಪ್ರಾಯ:‘ನಾಝಿ ಸಂಸ್ಕೃತಿ ‌ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸಂಸ್ಕೃತಿ ಒಂದೇ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಅದನ್ನೇ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ್ದೇನೆ. ಎರಡೂ ಸಂಘಟನೆಗಳ ಮೂಲ ಉದ್ದೇಶ ಒಂದೇ. ಇವರೇನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರಾ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘₹ 250 ಕೋಟಿ ಮೊತ್ತದ ಜಾಬ್‌ ಕೋಡ್‌ ಹಗರಣದ ಆರೋಪ ಹೊತ್ತಿರುವ ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಅಂತವರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬೆಂಕಿ ಹಚ್ಚುವವರು ಅವರು. ಬೆಂಕಿ ಆರಿಸುವುದು ನಮ್ಮ ಸಂಸ್ಕೃತಿ’ ಎಂದರು.

ಅಘೋಷಿತ ತುರ್ತು ಪರಿಸ್ಥಿತಿ: ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳು ಎಂಬುದಾಗಿ ಬಿಂಬಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಅಂತಿಮ‌ ಇದ್ದೇ ಇದೆ. ಪರ್ಯಾಯ ರಾಜಕೀಯ ಶಕ್ತಿ ಇಲ್ಲ ಎಂದು ಈಗ ಅನಿಸಬಹುದು. ಹಿಂದೆಯೂ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗಲೂ ಇದೇ ವಾತಾವರಣ ಇತ್ತು ಎಂದರು.

ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದ ಹೆಣ್ಣು ಮಗಳು ದೇಶದ ವಿರುದ್ಧ ಮಾತನಾಡುತ್ತಾರಾ ಎಂಬ ಅನುಮಾನ ಇದೆ. ಟೂಲ್‌ಕಿಟ್ ನಂತಹ ಚಟುವಟಿಕೆಗಳನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇರಲಿಲ್ಲವೆ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT