ಭಾನುವಾರ, ನವೆಂಬರ್ 28, 2021
19 °C

ಕುಲಾಂತರಿ ತಳಿ ಪ್ರಯೋಗಕ್ಕೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ರ್‍ಯಾಲಿಸ್‌ ಇಂಡಿಯಾ ಕಂಪನಿಗೆ ಕುಲಾಂತರಿ ಹತ್ತಿ ಮತ್ತು ಮೆಕ್ಕೆ ಜೋಳಗಳ ಕ್ಷೇತ್ರ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ವಿವಿಧ ಸಂಘಟನೆಗಳು ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

‘ವಿಶ್ವದೆಲ್ಲೆಡೆ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ ಮಾತ್ರವಲ್ಲ, ಹಳಸಲು ತಂತ್ರಜ್ಞಾನ ಎಂದೂ ಸಾಬೀತಾಗಿದೆ. 20 ಕ್ಕೂ ಹೆಚ್ಚು ದೇಶಗಳು ಕುಲಾಂತರಿ ಬೆಳೆಗಳನ್ನು ನಿಷೇಧ ಮಾಡಿವೆ. ಯುರೋಪಿನ 28 ದೇಶಗಳಲ್ಲಿ ಅರ್ಧಕ್ಕೂ ಹೆಚ್ಚು ದೇಶಗಳು ಕುಲಾಂತರಿ ಮುಕ್ತ ದೇಶಗಳಾಗಿವೆ. ನಮ್ಮ ದೇಶದಲ್ಲಿ ಬಿ.ಟಿ ಹತ್ತಿಯ ಕೆಟ್ಟ ಪರಿಣಾಮಗಳನ್ನು ಕಂಡ ಎಲ್ಲ ರಾಜ್ಯಗಳೂ ಕುಲಾಂತರಿ ಬದನೆ ಮತ್ತು ಸಾಸಿವೆಗಳನ್ನು ಹೋರಾಟದ ಮೂಲಕ ಹಿಮ್ಮೆಟಿಸಲಾಯಿತು’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಕೇರಳ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಛತ್ತೀಸಘಡ, ಗುಜರಾತ್‌ ರಾಜ್ಯಗಳು ಈ ಹಿಂದೆಯೇ ಕುಲಾಂತರಿ ಕ್ಷೇತ್ರ ಪ್ರಯೋಗಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಿದ್ದವು. ಹೀಗಿರುವಾಗ ಕರ್ನಾಟಕಕ್ಕೆ ಇದರ ಅನಿವಾರ್ಯತೆ ಖಂಡಿತಾ ಇಲ್ಲ. ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು’ ಎಂದಿದ್ದಾರೆ.

ರ್‍ಯಾಲಿಸ್‌ ಇಂಡಿಯಾ ಕಂಪನಿಯು ಹತ್ತಿಯಲ್ಲಿ ಯಾವ ಹೊಸ ಅಂಶ ಅಥವಾ ಸಮಸ್ಯೆಗೆ ಸಂಬಂಧಿಸಿ ಕುಲಾಂತರಿ ಪ್ರಯೋಗ ಮಾಡಲು ಹೊರಟಿದೆ ಎಂಬ ಸರಿಯಾದ ಮಾಹಿತಿ ನೀಡಿಲ್ಲ. ಆದರೆ, ಕಂಪನಿ ಪ್ರಯೋಗದಿಂದ ಪರಿಸರ, ಜೀವಿಗಳ ಮೇಲಾಗಲಿ ಪರಿಣಾಮ ಆಗುವು
ದಿಲ್ಲ ಎಂದು ಸರ್ಕಾರದ ಮನವೊಲಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

‘ನಮ್ಮ ಬೆಳೆಗಳನ್ನು ಕುಲಾಂತರಿ ಮಾಲಿನ್ಯಗೊಳಿಸುವ ಪ್ರಕ್ರಿಯೆ ಕ್ಷೇತ್ರ ಪ್ರಯೋಗಗಳಿಂದಲೇ ಆರಂಭವಾಗುತ್ತಿದೆ. ‘ನಿರ್ಬಂಧಿತ’ ಎಂದು ಹೇಳಿಕೊಳ್ಳುವ ಈ ಕ್ಷೇತ್ರ ಪ್ರಯೋಗಗಳಲ್ಲಿ ಬೆಳೆಗಳನ್ನು ಹೊಲಗಳಲ್ಲಿ ಮುಕ್ತವಾಗಿ ಬೆಳೆಯಲಾಗುತ್ತದೆ. ಇಲ್ಲಿ ಪಾಲಿಸಬೇಕಾದ ಕಟ್ಟುಕಟ್ಟಳೆಗಳನ್ನು ಬಹುತೇಕ ಪಾಲಿಸುವುದಿಲ್ಲ. ಕುಲಾಂತರಿ ಮಾಲಿನ್ಯವು ಮುಕ್ತವಾಗಿ ಪರಿಸರಕ್ಕೆ ಸೇರಿ ಹಿಮ್ಮೊಗಗೊಳಿಸಲಾಗದಂಥ ಘಾಸಿ ಉಂಟು ಮಾಡುತ್ತದೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ಆಕ್ಷೇಪಣೆ ಪತ್ರಕ್ಕೆ ‘ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ’ (ರೈತಸಂಘಟನೆಗಳು, ಸಾವಯವ ಕೃಷಿ ಸಂಘಟನೆಗಳು, ಕೃಷಿ ಕೂಲಿಕಾರ ಸಂಘಟನೆ, ಗ್ರಾಮೀಣ ಮಹಿಳಾ ಸಂಘಟನೆ, ಪರಿಸರ ಸಂಘಟನೆಗಳು ಸೇರಿ 40 ಕ್ಕೂ ಹೆಚ್ಚು ಸಂಘಟನೆಗಳ ಸಮನ್ವಯ), ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, ಲೇಖಕ ನಾಗೇಶ್‌ ಹೆಗಡೆ, ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ್‌ ಕಮ್ಮರಡಿ ಸಹಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು