ಸೋಮವಾರ, ಮಾರ್ಚ್ 27, 2023
31 °C
ಒಳನೋಟ ಪ್ರತಿಕ್ರಿಯೆ

ಸಿಂಥೆಟಿಕ್ ಡ್ರಗ್ಸ್ ದಂಧೆ– ಒಳನೋಟ ಪ್ರತಿಕ್ರಿಯೆಗಳು:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿಂಥೆಟಿಕ್ ಡ್ರಗ್ಸ್ ದಂಧೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 15) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

‘ಮಾದಕ ವಸ್ತು ಜಾಲ ಬೇಧಿಸಬೇಕು’

ಡ್ರಗ್ಸ್‌ ಜಾಲದ ಸುಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಸಿಲುಕಿಕೊಳ್ಳುತ್ತಿದ್ದು, ಇದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.  ಮಾದಕ ವಸ್ತು  ಸೇವನೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚು ಗಮನ ಹರಿಸಿ ಮಾದಕ ವಸ್ತುಗಳ ಮಾಯಾ ಜಾಲವನ್ನು ಬೇಧಿಸಬೇಕು. ಇವುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರೌಢಶಾಲಾ ಹಾಗೂ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. ಪೋಷಕರು ಸಹ ಮಕ್ಕಳ ಚಲನವಲನಗಳ ಬಗ್ಗೆ ಗಮನ ಹರಿಸಬೇಕು. ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕೆಲಸವನ್ನು ಸರ್ಕಾರವೂ ಮಾಡಬೇಕು. ರಾಜ್ಯದಲ್ಲಿ ಮಾದಕ ವಸ್ತು ಮಾಯಾಜಾಲದ ಕುರಿತು ‘ಪ್ರಜಾವಾಣಿ’ ವರದಿ ಮಾಡುವ ಮೂಲಕ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ಕಣ್ಣು ತೆರೆಸುವ ಕೆಲಸ ಮಾಡಿದೆ.

–ವಿನಾಯಕ ಎಂ.ಎಂ., ಹಂಪಸಾಗರ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ

‘ಯುವಜನತೆಯ ಭವಿಷ್ಯ ರಕ್ಷಿಸಿ’

ಯುವಜನತೆ ಜೀವನಕ್ಕೆ ಸಿಂಥೆಟಿಕ್ ಡ್ರಗ್ಸ್ ಮಾರಕವಾಗುತ್ತಿದೆ. ಇದನ್ನು ಆದಷ್ಟು ಬೇಗ ನಿರ್ನಾಮಗೊಳಿಸದಿದ್ದರೆ ಯುವಪೀಳಿಗೆಗೆ ಭವಿಷ್ಯವೇ ಇಲ್ಲವಾಗಲಿದೆ. ಸರ್ಕಾರ ಈ ದಂಧೆಯನ್ನು ಪತ್ತೆ ಮಾಡಿ, ಸಮಾಜಕ್ಕೆ ಮಾರಕವಾಗಿರುವ ದುಷ್ಟ ವ್ಯಕ್ತಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಸಂಗೀತ, ವೀಕೆಂಡ್ ಪಾರ್ಟಿ, ಬೀಚ್ ರೀತಿಯ ಮೋಜು-ಮಸ್ತಿ ಮಾಡುವ ಸ್ಥಳಗಳಲ್ಲಿ ಇಂತಹ ಡ್ರಗ್ಸ್ ಜಾಲ ಹರಡದಂತೆ ತಡೆಯಬೇಕು. ಶಾಲಾ ಮಕ್ಕಳ ಕೈಗೆ ಡ್ರಗ್ಸ್ ಸಿಗುತ್ತಿದೆ ಎಂದರೆ ಈ ದಂಧೆ ಎಷ್ಟು ವೇಗವಾಗಿ ಯುವಜನತೆಯನ್ನು ಅವರಿಸುತ್ತಿದೆ ಎಂದು ಯೋಚಿಸಬೇಕಾದ ವಿಷಯ. ಇಂತಹ ದಂಧೆಗಳನ್ನು ಸರ್ಕಾರ ಶೀಘ್ರವಾಗಿ ತಡೆಯದಿದ್ದಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲೂ ಡ್ರಗ್ಸ್ ಮಾರಾಟ ಆಗುವುದರಲ್ಲಿ ಸಂದೇಹ ಇಲ್ಲ.

ಗಿರೀಶ ಜೆ., ಪತ್ರಿಕೋದ್ಯಮ ವಿದ್ಯಾರ್ಥಿ, ತುಮಕೂರು ವಿಶ್ವವಿದ್ಯಾನಿಲಯ

‘ಸಂತ್ರಸ್ತರಿಗೆ ಪುನರ್ವಸತಿ ಅಗತ್ಯ’

ಡ್ರಗ್ಸ್‌ ಹಾವಳಿ ವಿರುದ್ಧ ಎಲ್ಲಾ ರಾಜ್ಯಗಳೂ ಹೋರಾಟ ಮಾಡಬೇಕಾಗಿದೆ. ಈ ವ್ಯಸನಕ್ಕೆ 15ರಿಂದ 20 ವರ್ಷದ ಯುವಕ– ಯುವತಿಯರು ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರೆ ವಿಧ್ಯಾರ್ಥಿಗಳು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಿ.ಜಿ., ಶಾಲೆ– ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ಸ್ನೇಹಿತರಿಗೆ ಯಾವುದಾದರೂ ತಿನಿಸುಗಳಲ್ಲಿ ಹಾಕಿ ಅವರನ್ನು ಆ ವ್ಯಸನಕ್ಕೆ ಬಲಿಪಶು ಮಾಡಲಾಗುತ್ತಿದೆ. ಆದ್ದರಿಂದ ಎಲ್ಲಾ ಶಾಲೆ– ಕಾಲೇಜು, ವಿದ್ಯಾರ್ಥಿ ನಿಲಯ, ಪಿ.ಜಿಗಳ ಆಹಾರದಲ್ಲಿ ಡ್ರಗ್ಸ್ ಪರೀಕ್ಷೆಯನ್ನು ಕಡ್ಡಾಯ ಮಾಡಿಸಬೇಕು. ಹೀಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಸಂವೇದನಾಶೀಲವಾಗಿ ಯೋಚಿಸಿ ಅವರ ಪುನರ್ವಸತಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು. ಡ್ರಗ್ಸ್ ಕಳ್ಳ ಸಾಗಣೆಗೆ ಕಡಿವಾಣ ಹಾಕಬೇಕು.

–ಆಕಾಶ ಬೇವಿನಕಟ್ಟಿ, ವಿದ್ಯಾರ್ಥಿ ನಾಯಕ ಬೆಳಗಾವಿ

‘ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು’

ಡ್ರಗ್ಸ್ ದಂಧೆ ಕರ್ನಾಟಕದಲ್ಲಿ ಅತೀ ಹೆಚ್ಚು ನಡೆಯುತ್ತಿದೆ. ಸರ್ಕಾರ ಕೂಡಲೇ ತಡೆಹಿಡಿಯುವ ಕೆಲಸ ಮಾಡಬೇಕು. ಅದೆಷ್ಟೋ ಮುಗ್ಧರು ಡ್ರಗ್ಸ್ ದಂಧೆಗೆ ಬಲಿಪಶುಗಳಾಗುತ್ತಿದ್ದಾರೆ. ಶಾಲಾ– ಕಾಲೇಜು ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಲುಕಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್‌ ಬಗ್ಗೆ ಗೊತ್ತಿಲ್ಲದಿದ್ದರೂ ಅವರಿಗೆ ರುಚಿ ತೋರಿಸಿ ದಾಸರನ್ನಾಗಿ ಮಾಡಲಾಗುತ್ತಿದೆ. ಈ ರೀತಿ ಬಲಿಪಶುಗಳಾಗದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ ಡ್ರಗ್ಸ್‌ ಜಾಲಕ್ಕೆ ಕಡಿವಾಣ ಹಾಕಬೇಕು.

–ಮಹೇಶ ಹೊಸೂರ, ಬೆಳಗಾವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು