ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

58 ಅಣೆಕಟ್ಟೆ ಪುನಃಶ್ಚೇತನಕ್ಕೆ ₹1 ಸಾವಿರ ಕೋಟಿ ಸಾಲ

ಪೌರ ಕಾರ್ಮಿಕರ ಜತೆಗಿರುವ ಚಾಲಕರು, ಲೋಡರ್‌ಗಳ ಹುದ್ದೆ ಕಾಯಂ
Last Updated 21 ಜೂನ್ 2021, 21:39 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಬ್ಯಾಂಕ್‌ ನೆರವಿನೊಂದಿಗೆ ರಾಜ್ಯದ 58 ಅಣೆಕಟ್ಟೆಗಳ ಪುನಃಶ್ಚೇತನಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಕಾರ್ಯಕ್ಕೆ ₹1,500 ಕೋಟಿ ಬಳಕೆಯಾಗಲಿದ್ದು, ವಿಶ್ವಬ್ಯಾಂಕ್‌ ₹1050 ಕೋಟಿ ಸಾಲ ನೀಡಲಿದ್ದು, ರಾಜ್ಯ ಸರ್ಕಾರ ₹450 ಕೋಟಿ ನೀಡಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಣೆಕಟ್ಟೆಗಳ ನವೀಕರಣ ಮತ್ತು ಪುನಃಶ್ಚೇತನ ಯೋಜನೆ (ಡಿಆರ್‌ಪಿಐ) ಹಂತ 2 ಮತ್ತು 3 ರ ಅಡಿ ಈ ಎಲ್ಲ ಅಣೆಕಟ್ಟೆಗಳಿಗೆ ಅಗತ್ಯವಿರುವ ಆಧುನೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಅದಕ್ಕೂ ಮೊದಲು ಕೇಂದ್ರದಿಂದ ತಂಡ ಬಂದು ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದರು.

ಡ್ರೈವರ್‌, ಲೋಡರ್‌ ಕಾಯಂ: ಪೌರ ಕಾರ್ಮಿಕರನ್ನು ಕಾಯಂ ಮಾಡಿದಂತೆ, ಅವರ ಜತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರು ಮತ್ತು ಲೋಡರ್‌ಗಳನ್ನೂ ಕಾಯಂ ಮಾಡಲು ನಿರ್ಧರಿಸಲಾಗಿದೆ. ಈ ಸೌಲಭ್ಯ ಪಡೆಯುವವರು ಸುಮಾರು 1000 ಇರಬಹುದೆಂದು ಸದ್ಯಕ್ಕೆ ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖ ನಿರ್ಣಯಗಳು: *ಕರ್ನಾಟಕ ನಾಗರಿಕ ಸೇವೆಗಳು (ನಿರ್ವಹಣಾ ವರದಿ) ತಿದ್ದು‍ಪಡಿ ನಿಯಮ 2021 ಒಪ್ಪಿಗೆ ನೀಡಿದ್ದು, ಆಡಳಿತ ಮತ್ತು ಸಿಬ್ಬಂದಿ ಇಲಾಖೆಯಿಂದ ಗೋಪ್ಯ ವರದಿಯನ್ನು ಕೈ ಬರಹದ ಮೂಲಕ ನೀಡಲಾಗುತ್ತಿತ್ತು. ಇನ್ನು ಮುಂದೆ ಡಿಜಿಟಲ್‌ ರೂಪದಲ್ಲಿ ನೀಡಲು ಈ ತಿದ್ದುಪಡಿ ತರಲಾಗಿದೆ.

lಬೆಳಗಾವಿ ತಾಲ್ಲೂಕು ಹಿರೇಬಾಗೇವಾಡಿಯಲ್ಲಿ ₹110 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ

lಕರ್ನಾಟಕ ತುರ್ತು ಪರಿಹಾರ ನಿಧಿಯನ್ನು ₹500 ಕೋಟಿಯಿಂದ ₹2,500 ಕೋಟಿಗೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಕೋವಿಡ್‌ ಕಾರಣ ಮುಂದಿನ ದಿನಗಳಲ್ಲಿ ಖರ್ಚು ಮಾಡುವ ಉದ್ದೇಶದಿಂದ ತುರ್ತುನಿಧಿ ಮೊತ್ತ ಹೆಚ್ಚಿಸಲಾಗಿದೆ

lಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೇಂದ್ರೀಯ ಗ್ರಂಥಾಲಯ ಮತ್ತು ಪರೀಕ್ಷಾ ಹಾಲ್‌ ನಿರ್ಮಾಣಕ್ಕೆ ₹10.27 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ

lಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಗೆ ಒಳಪಡುವ ಪಿಕೆಟಿಬಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹154.44 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ

lವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌, ನರ್ಸಿಂಗ್‌ ಪರೀಕ್ಷಾ ಮಂಡಳಿ ಮತ್ತು ಅರೆ ವೈದ್ಯಕೀಯ ಮಂಡಳಿಗಳ ಕಚೇರಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ₹75 ಕೋಟಿ ಆಡಳಿತಾತ್ಮಕ ಅನುಮೋದನೆ

lಉತ್ತರ ಕನ್ನಡ ಜಿಲ್ಲೆಯ ರಾಮನಗುಳಿ ಮತ್ತು ಡೋಗ್ರಿ ಗ್ರಾಮವನ್ನು ಸಂಪರ್ಕಿಸುವ ಗಂಗಾವಳಿ ನದಿಗೆ ₹25 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ

lಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಂಡಸಿ ಮತ್ತು ಬಾಣಾವರದ 530 ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ₹307.17 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆ ಜಾರಿಗೆ ಒಪ್ಪಿಗೆ

lಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಬಡಾವಣೆಗಳನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವುದಕ್ಕೂ ಮುನ್ನ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ₹377.60 ಕೋಟಿ ಆಡಳಿತಾತ್ಮಕ ಅನುಮೋದನೆ. ಈ ಮೊತ್ತವನ್ನು ಪ್ರಾಧಿಕಾರವೇ ಭರಿಸಲಿದೆ.

ರೇಣುಕಾಚಾರ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಪ್ರತಿನಿಧಿಸುವ ಹೊನ್ನಾಳಿ ಕ್ಷೇತ್ರದ ಗೋವಿನಕೋವಿ, ಹನುಮಸಾಗರದ 94 ಕೆರೆಗಳನ್ನು ತುಂಬಿಸುವ ₹415 ಕೋಟಿ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ.

ಈ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರೆತ್ತಲಾಗುವುದು. ಇದಲ್ಲದೇ, ದಾವಣಗೆರೆ ಜಿಲ್ಲೆಯ ಸಾಸ್ವೇಹಳ್ಳಿ ಏತ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳ ಸಂವರ್ಧನೆಗೆ ₹167 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 74 ಕೆರೆಗಳನ್ನು ತುಂಬಿಸುವ ₹670 ಕೋಟಿ ಯೋಜನೆಗೂ ಒಪ್ಪಿಗೆ ನೀಡಲಾಗಿದೆ. ತುಂಗಭದ್ರಾ ನದಿ ನೀರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT