ಭಾನುವಾರ, ಜೂನ್ 13, 2021
29 °C
ಮುಖ್ಯಮಂತ್ರಿ ಬಿಎಸ್‌ವೈಗೆ ಮೊರೆ ಹೋದ ರೈತ ಮಹಿಳೆ

ಈರುಳ್ಳಿ ಬೆಲೆ ಕುಸಿತ: ನಾಡಿನ ಧಣಿ ನೀವು, ನನಗೆ ದಾರಿ ತೋರಿಸಿ ಎಂದು ಮಹಿಳೆ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಡ್ಲಹಳ್ಳಿ (ಹಿರಿಯೂರು): ‘ನನಗೆ ಇರೋದೆ ಎರಡೂವರೆ ಎಕರೆ ಜಮೀನು. ₹ 1.50 ಲಕ್ಷ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೆ. ಲಾಕ್‌ಡೌನ್ ಕಾರಣದಿಂದಾಗಿ ಬೆಳೆಯನ್ನು ಬೆಂಗಳೂರಿಗೆ ಒಯ್ಯುವಂತಿಲ್ಲ. ಸ್ಥಳೀಯವಾಗಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ನಾಡಿನ ಧಣಿ ನೀವು. ನೀವೇ ನನಗೆ ದಾರಿ ತೋರಿಸಬೇಕು...’

ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿಯ ರೈತ ಮಹಿಳೆ ಲಕ್ಷ್ಮಕ್ಕ ಮಂಗಳವಾರ ಮುಖ್ಯಮಂತ್ರಿಗೆ ಮಾಡಿರುವ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ಪರಿಚಯದವರ ಬಳಿ ಒಂದಿಷ್ಟು ಸಾಲ ಮಾಡಿ ಎರಡೂವರೆ ಎಕರೆಯಲ್ಲಿ ಈರುಳ್ಳಿ ಹಾಕಿದ್ದೆ. ಬೆಳೆ ಚೆನ್ನಾಗಿ ಬಂದಿದ್ದರಿಂದ 150 ಪ್ಯಾಕೆಟ್ (ತಲಾ 60 ಕೆ.ಜಿ. ತೂಕ) ಇಳುವರಿ ಬಂದಿತ್ತು. ನನ್ನ ದುರದೃಷ್ಟವೋ ಎಂಬಂತೆ ಹಿಂದಿನ ವಾರ ಸುರಿದ ಮಳೆಗೆ 80 ಪ್ಯಾಕೆಟ್ ಈರುಳ್ಳಿ ಹಾಳಾಗಿದೆ. ಮನೆಯಲ್ಲಿ 75 ಪ್ಯಾಕೆಟ್ ಈರುಳ್ಳಿ ಉಳಿದಿದೆ. ಸ್ಥಳೀಯ ವರ್ತಕರು ಚೀಲಕ್ಕೆ ₹300ರಿಂದ ₹400ಕ್ಕೆ ಕೇಳುತ್ತಿದ್ದಾರೆ. ಅಷ್ಟು ಕಡಿಮೆ ದರಕ್ಕೆ ಮಾರಿದರೆ ಬಿತ್ತನೆ ಬೀಜ, ಗೊಬ್ಬರದ ಖರ್ಚೂ ಸಿಗುವುದಿಲ್ಲ. ಇನ್ನು ಕೈಗಡ ತೀರಿಸುವುದು ಹೇಗೆ’ ಎಂದು 70 ವರ್ಷದ ಲಕ್ಷ್ಮಕ್ಕ ಪ್ರಶ್ನಿಸುತ್ತಾರೆ.

‘ನಮ್ಮೂರಿನಲ್ಲಿ ಇನ್ನೊಬ್ಬ ರೈತರು ಈರುಳ್ಳಿ ಬೆಳೆದಿದ್ದು, ಅವರದ್ದೂ ಇದೇ ಪರಿಸ್ಥಿತಿ ಆಗಿದೆ. ಲಾಕ್‌ಡೌನ್ ಇಲ್ಲದಿದ್ದರೆ, ಮಳೆಗೆ ಗೆಡ್ಡೆ ಕೊಳೆಯದಿದ್ದರೆ, ಬೆಂಗಳೂರಿಗೆ ಒಯ್ದು ಅಸಲನ್ನಾದರೂ ಪಡೆಯುತ್ತಿದ್ದೆ. ಕೊರೊನಾ ಮತ್ತು ಮಳೆ ನನ್ನ ಬದುಕನ್ನು ಕಿತ್ತುಕೊಂಡಿವೆ. ನನ್ನ ಮಕ್ಕಳಿಬ್ಬರು ಡಾಬಾ ನಡೆಸುತ್ತಿದ್ದಾರೆ. ಹಿಂದಿನ ವರ್ಷ ಐದಾರು ತಿಂಗಳು ಡಾಬಾ ಬಂದ್ ಮಾಡಿದ್ದರು. ಈ ವರ್ಷ ಯುಗಾದಿಯಿಂದ ಬಂದ್ ಮಾಡಿದ್ದಾರೆ. ಅವರೂ ಕಷ್ಟಕ್ಕೆ ಸಿಲುಕಿದ್ದಾರೆ. ಬದುಕಿನ ಬಂಡಿ ಸಾಗಿಸಲು ನೀವು ನೆರವಿಗೆ ಬರಬೇಕು’ ಎಂದು ಮನವಿ ಮಾಡಿದ್ದಾರೆ.

‘ವರ್ಷದ ಹಿಂದೆ ಈರುಳ್ಳಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದ ಕಾಟನಾಯಕನಹಳ್ಳಿಯ ರೈತ ಮಹಿಳೆಗೆ ನೀವು ನೆರವು ನೀಡಿದ್ದೀರಿ. ಇಳಿ ವಯಸ್ಸಿನಲ್ಲೂ ಕೃಷಿ ಮಾಡುತ್ತಿರುವ ನನಗೆ ನಿಮ್ಮ ನೆರವಿನ ಅಗತ್ಯ ತುಂಬ ಇದೆ. ಒಂದು ಪ್ಯಾಕೆಟ್ ಈರುಳ್ಳಿಗೆ ₹ 900ರಿಂದ ₹ 1000 (ಕೆ.ಜಿಗೆ ₹15 ರಿಂದ ₹18) ದರ ಸಿಕ್ಕರೂ ನಾನು ಮಾಡಿರುವ ಖರ್ಚು ಬರುತ್ತದೆ. ಮುಂಗಾರು ಮಳೆ ಆರಂಭವಾಗಿದ್ದು, ಬಿತ್ತನೆಗೆ ಅನುಕೂಲ ಆಗುತ್ತದೆ’ ಎಂದು ಲಕ್ಷ್ಮಕ್ಕ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು