ಸೋಮವಾರ, ನವೆಂಬರ್ 30, 2020
20 °C
ಹಂಪಿ, ತುಂಗಭದ್ರೆ ನಮ್ಮ ಹೆಮ್ಮೆ ಎನ್ನಲಾಗದು: ಅದು ಗತ ವೈಭವ!

ಬಳ್ಳಾರಿ ಎಂದರೆ ಇನ್ನು ಕೋಟೆ ತೋರಿಸಬೇಕು!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಇನ್ನು ಮುಂದೆ ಬಳ್ಳಾರಿಗೆ ಬಂದವರಿಗೆ ಹಂಪೆಯನ್ನು, ತುಂಗಭದ್ರಾ ಜಲಾಶಯವನ್ನು ನಮ್ಮದು ಎಂದು ತೋರಿಸುವಂತಿಲ್ಲ. ಬಳ್ಳಾರಿಯಲ್ಲಿರುವ ಕೋಟೆಯನ್ನು ತೋರಿಸಿ ಸುಮ್ಮನಾಗಬೇಕಷ್ಟೇ...’

ಕುರುಗೋಡಿನ ಯುವಕ ಹನುಮೇಶ ಗುರುವಾರ ಹೀಗೆ ಹೇಳಿ ವಿಷಾದದ ನಗೆ ನಕ್ಕರು. ಹೌದು. ‘ಜಿಲ್ಲೆಯ ವಿಭಜನೆಯಿಂದ ನಾವು ಏನೇನನ್ನು ಕಳೆದುಕೊಳ್ಳಲಿದ್ದೇವೆ’ ಎಂಬ ಚಿಂತೆಯೂ ಜನರಲ್ಲಿ ಈಗ ಶುರುವಾಗಿದೆ.

‘ವಿಶ್ವವಿಖ್ಯಾತವಾದ ಹಂಪಿಯನ್ನೂ, ಅದರ ಉತ್ಸವವನ್ನೂ ನಮ್ಮ ಅಸ್ಮಿತೆ ಎಂದು ಹೆಮ್ಮೆ ಪಟ್ಟುಕೊಳ್ಳುವಂತಿಲ್ಲ. ಬಳ್ಳಾರಿಯ ಬಗ್ಗೆ ಹೇಳಲು, ತೋರಿಸಲು ವಿಶೇಷಗಳೇ ಇರುವುದಿಲ್ಲವಲ್ಲ’ ಎಂಬುದು ಹನುಮೇಶ ಅವರ ಚಿಂತೆ.

ಜಿಲ್ಲೆ ವಿಭಜನೆಯ ಕುರಿತು ಹಡಗಲಿಯಲ್ಲಿ ದಶಕಕ್ಕೂ ಹಿಂದೆ ಮನವಿ ಸಲ್ಲಿಸಿದ್ದ ವಿ.ಬಿ.ಮಲ್ಲಪ್ಪ ಅವರ ಪ್ರಕಾರ, ‘ಬಳ್ಳಾರಿಗೆ ಬರುವ ಹೊಸಬರು ಇಲ್ಲಿ ನೋಡುವಂಥದ್ದು ಏನಿದೆ ಎಂದು ಕೇಳಿದರೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಯವರ ಬಂಗಲೆಗಳನ್ನು ತೋರಿಸಬೇಕಾಗಬಹುದೇನೋ!!’

ತಮ್ಮ ಫೇಸ್‌ಬುಕ್‌ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ‘ಹೊಸಪೇಟೆ ಜಿಲ್ಲೆ ಎಂದು ಘೋಷಣೆಯಾದರೆ ಬಳ್ಳಾರಿಯು ವಿಜಯನಗರ ಸಾಮ್ರಾಜ್ಯದ ಭಾವನಾತ್ಮಕ ಹಿರಿಮೆಯನ್ನು ಕಳಚಿಕೊಳ್ಳಲಿದೆ! ಬದಲಾಗಿ, ರೆಡ್ಡಿ, ರಾಮುಲು ಅವರ ನಡುಗಡ್ಡೆಯಾಗಿ ರೂಪಾಂತರವಾಗಬಹುದೇನೋ!!’

ಹೊಸ ಜಿಲ್ಲೆ ರಚನೆಯಿಂದ ಆಗಬಹುದಾದ ಪರಿಣಾಮಗಳ ಕುರಿತು ಚಿಂತನೆ ನಡೆಸಿರುವ ಅವರು, ‘ತೆಲುಗು ಭಾಷಿಕರ ಪ್ರಾಬಲ್ಯವೂ ಬಳ್ಳಾರಿ ಭಾಗದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಊಹಿಸಿದ್ದಾರೆ.

‘ಈಗಿನ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿತ್ತು. ಹೊಸ ಜಿಲ್ಲೆಯಿಂದ ಅವರೆಲ್ಲರ ಒಡನಾಟವೂ ಬಳ್ಳಾರಿಯೊಂದಿಗೆ ಕಡಿಮೆಯಾಗುವುದು ಸಹಜ. ಹಾಗಾಗಿ ಬಳ್ಳಾರಿಯು ಆಂಧ್ರಮೂಲದವರ ಬಾಹುಳ್ಯಕ್ಕೆ ಸಿಗುವ ಸಾಧ್ಯತೆ ಹೆಚ್ಚು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೊದಲು ದನಿ ಎತ್ತಿದ್ದು ಹಡಗಲಿ!

‘ವಿಜಯನಗರ ಜಿಲ್ಲೆಗಾಗಿ ಆಗ್ರಹಿಸಿ ಮೊದಲು ದನಿ ಎತ್ತಿದವರು ಹೂವಿನ ಹಡಗಲಿಯವರು’ ಎಂದು ವಿ.ಬಿ.ಮಲ್ಲಪ್ಪ ನೆನಪಿಸಿಕೊಂಡಿದ್ದಾರೆ.

ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿರುವ ಅವರು, ‘ಆನಂದ್‌ಸಿಂಗ್‌ ಶಾಸಕರಾಗುವ ಮೊದಲೇ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿಯನ್ನು ಸೇರಿಸಿ, ಹಡಗಲಿಯನ್ನು ಕೇಂದ್ರವಾಗಿರಿಸಿಕೊಂಡು ವಿಜಯನಗರ ಜಿಲ್ಲೆ ಘೋಷಣೆ ಮಾಡಿ ಎಂದು ಪ್ರಪ್ರಥಮವಾಗಿ ಪ್ರತಿಭಟನೆ ಮಾಡಿ, ಹಡಗಲಿ ತಹಶಿಲ್ದಾರ್‌ಗೆ ಮನವಿ ನೀಡಿದ್ದೆವು’ ಎಂದು ಸ್ಮರಿಸಿದ್ದಾರೆ.

ಹಿರಿಮೆ–ಗರಿಮೆಗಳ ಗತವೈಭವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂಕಟದಲ್ಲಿ ಅಖಂಡ ಬಳ್ಳಾರಿಯ ಪ್ರತಿಪಾದಕರೂ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಇದೇ ವೇಳೆಯಲ್ಲಿ, "ಅನುಕೂಲವೇ ಮುಖ್ಯ' ಎಂದು ಭಾವಿಸಿರುವ ಪಶ್ಚಿಮ ತಾಲ್ಲೂಕುಗಳ ಜನ ಮಾತ್ರ ವಿಭಜನೆಗೆ ಮೌನ ಸಮ್ಮತಿ ತೋರಿದ್ದಾರೆ. ದಿನವಿಡೀ ಪ್ರಯಾಣಿಸಿ ಸುಸ್ತಾಗಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಜಿಲ್ಲಾಮಟ್ಟದ ಕಚೇರಿಗಳಿಗೆ ಬರುವ ತಾಪತ್ರಯ ತಪ್ಪುತ್ತದೆ ಎಂಬ ಆಶಾವಾದವೂ ಅವರಲ್ಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು