ಗುರುವಾರ , ಮಾರ್ಚ್ 30, 2023
24 °C

ಗೊಂದಲಗಳಿಗೆ ಒಂದೆರಡು ದಿನಗಳಲ್ಲಿ ತೆರೆ: ಬಾಲಚಂದ್ರ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಗೋಕಾಕದ ಬಿಜೆಪಿ ಶಾಸಕ, ಹಿರಿಯ ಸಹೋದರ ರಮೇಶ ಜಾರಕಿಹೊಳಿ ವಿಷಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಶೀಘ್ರವೇ ತೆರೆ ಎಳೆಯಲಿದ್ದೇವೆ’ ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗೋಕಾಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು, ‘ನಾನು ಸಚಿವ ಸ್ಥಾನ ಕ್ಲೇಮ್ ಮಾಡಿಲ್ಲ. ಮಾಧ್ಯಮದಲ್ಲಿ ಆ ರೀತಿಯ ಸುದ್ದಿ ಏಕೆ ಬರುತ್ತಿದೆಯೋ ಗೊತ್ತಿಲ್ಲ. ಪಕ್ಷದಿಂದಲೂ ಅಂತಹ ಆಫರ್‌ ಕೂಡ ಮಾಡಿಲ್ಲ. ಕೆಎಂಎಫ್‌ ಅಧ್ಯಕ್ಷನಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ರಮೇಶ ಜಾರಕಿಹೊಳಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅವರು ಜುಲೈ 2ರಂದು ಗೋಕಾಕಕ್ಕೆ ಬರಲಿದ್ದಾರೆ. ನಾವೆಲ್ಲರೂ ಸಭೆ ನಡೆಸಿ ಚರ್ಚಿಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತೇವೆ. ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕಾಗಿದೆ. ಒಂದೆರಡು ದಿನಗಳಲ್ಲಿ ಈ ಕೆಲಸ ಮಾಡುತ್ತೇವೆ’ ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಮೇಶ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ರಾಜಕಾರಣದಲ್ಲಿ ಒಮ್ಮೊಮ್ಮೆ ಅಸಮಾಧಾನ ಅಥವಾ ಬೇಸರ ಇರುತ್ತದೆ. ಅದೇನು ದೊಡ್ಡ ವಿಷಯವೇನಲ್ಲ. ರಮೇಶ ಅವರೇ ಮತ್ತೊಮ್ಮೆ ಸಚಿವರಾಗಬೇಕು ಎನ್ನುವ ಆಸೆ ನಮ್ಮದಾಗಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ಕೆಲವೊಂದು ಕಾನೂನು ತೊಡಕುಗಳಿವೆ. ಅದನ್ನೂ ಸರಿಪಡಿಸಿಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ರಮೇಶ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೆಯೋ ಎನ್ನುವುದು ಗೊತ್ತಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು