ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳು ಪುರಾವೆ ಕೊಡಲಿ:

Last Updated 17 ನವೆಂಬರ್ 2021, 21:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್‌ಕಾಯಿನ್‌ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿರುವುದು ಭೂತ ಬಂತು ಭೂತ ಎಂಬ ಕತೆಯಂತಿದೆ. ಹಗರಣ ನಡೆದಿದ್ದರೆ ವಿರೋಧ ಪಕ್ಷಗಳೇ ಪುರಾವೆ ಕೊಡಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಆರೋಪಿ ಶ್ರೀಕೃಷ್ಣ ಒಬ್ಬ ಹ್ಯಾಕರ್‌. ಆತ ಬಿಟ್‌ಕಾಯಿನ್‌ ಹ್ಯಾಕ್‌ ಮಾಡಿದ್ದಾನೆ ಎಂಬುದು ಆರೋಪ. ಸರ್ಕಾರ ವೆಬ್‌ಸೈಟ್‌ ಅನ್ನೂ ಹ್ಯಾಕ್‌ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ. ಆತನನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ಬಂಧಿಸಲಾಗಿದೆ. ಹಗರಣ ಏನು? ಎಲ್ಲಿ ನಡೆದಿದೆ? ಎಂಬುದನ್ನು ಆರೋಪ ಮಾಡುತ್ತಿರುವವರೇ ಹೇಳಬೇಕು’ ಎಂದರು.

‘ಮಕ್ಕಳನ್ನು ಹೆದರಿಸಲು ಭೂತ ಬಂತು ಭೂತ ಎಂದು ಕತೆ ಹೇಳಲಾಗುತ್ತದೆ. ಅದೇ ರೀತಿ ವಿರೋಧ ಪಕ್ಷಗಳೂ ಬಿಟ್‌ಕಾಯಿನ್‌ ಹಗರಣ ಎಂದು ಹೇಳುತ್ತಿವೆ. ಈ ವಿಚಾರ ಸಾಮಾನ್ಯ ಜನರಿಗೆ ಅರ್ಥವೇ ಆಗುವುದಿಲ್ಲ. ಸೂಕ್ತ ದಾಖಲೆಗಳ ಜತೆಗೆ ವಿವರಗಳೊಂದಿಗೆ ಮಾತನಾಡಲಿ. ದಾಖಲೆ ನೀಡುವ ಮೂಲಕ ಆರೋಪವನ್ನು ಸಾಬೀತುಪಡಿಸುವ ಜವಾಬ್ದಾರಿ ವಿರೋಧ ಪಕ್ಷಗಳ ಮೇಲಿದೆ’ ಎಂದು ಹೇಳಿದರು.

ಬಿಟ್‌ಕಾಯಿನ್‌ ಹ್ಯಾಕಿಂಗ್‌ ಪ್ರಕರಣದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಯಾವ ಅಂಜಿಕೆಯೂ ಇಲ್ಲ. ಈಗಾಗಲೇ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣದಲ್ಲಿ ಮುಚ್ಚಿಡುವಂತಹ ಸಂಗತಿಗಳೂ ಏನೂ ಇಲ್ಲ. ತನಿಖೆ ನಡೆಯುತ್ತಿರುವಾಗಲೇ ವಿರೋಧ ಪಕ್ಷಗಳು ಹುರುಳಿಲ್ಲದ ಆರೋಪ ಮಾಡುತ್ತಿವೆ. ಅದಕ್ಕೆ ಉತ್ತರಿಸಬೇಕಾದ ಅಗತ್ಯವಿಲ್ಲ ಎಂದು ಕಾರಜೋಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT