ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವಾಣಿ ಎಫ್‌ಎಂ ಅಮೃತವರ್ಷಿಣಿ ವಿಲೀನಕ್ಕೆ ಹೆಚ್ಚಿದ ಕನ್ನಡಿಗರ ಆಕ್ಷೇಪ

ನಾಡಿನ ಕಲಾವಿದರ ಆತಂಕ *ಪ್ರತ್ಯೇಕವಾಗಿ ಉಳಿಸಿಕೊಳ್ಳಲು ಆಗ್ರಹ
Last Updated 21 ಅಕ್ಟೋಬರ್ 2021, 3:10 IST
ಅಕ್ಷರ ಗಾತ್ರ

ಬೆಂಗಳೂರು:ಆಕಾಶವಾಣಿ ಬೆಂಗಳೂರು ಕೇಂದ್ರದ ‘ಅಮೃತವರ್ಷಿಣಿ’ ವಾಹಿನಿಯನ್ನು ‘ರಾಗಂ’ ರಾಷ್ಟ್ರೀಯ ವಾಹಿನಿ ಜೊತೆಗೆ ವಿಲೀನ ಮಾಡಲು ಮುಂದಾಗಿರುವುದಕ್ಕೆ ಸಾಂಸ್ಕೃತಿಕ ವಲಯದ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2004ರಲ್ಲಿ ಪ್ರಾರಂಭವಾದ ಈ ವಾಹಿನಿಯಲ್ಲಿ ಪ್ರಾದೇಶಿಕ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೆ ಇದು ವಿಶೇಷ ವೇದಿಕೆಯಾಗಿತ್ತು.ಈಗ ವಿಲೀನ ಮಾಡಿದರೆ, ವಾಹಿನಿಯು ಬಹುಭಾಷಾ ಸಂಗೀತದ ಭಾಗವಾಗಲಿದೆ. ಬೆಂಗಳೂರು ಸೇರಿದಂತೆ ದೇಶದ 14 ಆಲ್‌ ಇಂಡಿಯಾ ರೇಡಿಯೊ ಕೇಂದ್ರಗಳಿಂದ ವಿಷಯ ವಸ್ತುಗಳು ಪ್ರಸಾರವಾಗುತ್ತವೆ. ಇದರಿಂದಾಗಿ ಇಲ್ಲಿನ ಕಲಾವಿದರು ಅವಕಾಶ ವಂಚಿತರಾಗುತ್ತಾರೆ ಎಂಬ ಚರ್ಚೆಯೂ ಆರಂಭವಾಗಿದೆ.

100.1 ತರಂಗಾಂತರದಲ್ಲಿ ‘ಅಮೃತವರ್ಷಿಣಿ’ ಲಭ್ಯವಾಗುತ್ತಿತ್ತು. ಇದೇ ತರಂಗದಲ್ಲಿ ‘ರಾಗಂ’ ಸಹ ದೊರೆಯಲಿದೆ. ಈವರೆಗೆ ಬೆಳಿಗ್ಗೆ 6ರಿಂದ 9 ಗಂಟೆಗಳವರೆಗೆ ಹಾಗೂ ಸಂಜೆ 6ರಿಂದ 11ರವರೆಗೆ ಸಂಗೀತ ಕಾರ್ಯಕ್ರಮಗಳನ್ನು ‘ಅಮೃತವರ್ಷಿಣಿ’ ಪ್ರಸಾರ ಮಾಡುತ್ತಿತ್ತು. ‘ರಾಗಂ’ನಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಕಾರ್ಯಕ್ರಮಗಳು ಪ್ರಸಾರವಾಗಲಿದೆ.

‘ಪ್ರಾದೇಶಿಕತೆ ಕಡೆಗಣನೆ ಸರಿಯಲ್ಲ’

ಇಲ್ಲಿನ ‘ಅಮೃತವರ್ಷಿಣಿ’ ವಾಹಿನಿಯನ್ನು ರಾಷ್ಟ್ರೀಯ ವಾಹಿನಿ ‘ರಾಗಂ’ ಜೊತೆಗೆ ವಿಲೀನ ಸರಿಯಲ್ಲ. ಈ ಕ್ರಮದಿಂದ ಕನ್ನಡ ಮತ್ತು ಇಲ್ಲಿನ ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪ್ರತಿಭಾವಂತ ಕಲಾವಿದರಿಗೆ ಆಕಾಶವಾಣಿ ಮೊದಲಿನಿಂದಲೂ ವೇದಿಕೆ ಒದಗಿಸುತ್ತಾ ಬಂದಿದೆ. ಆ ಕಾರ್ಯವನ್ನು ಮುಂದುವರಿಸಬೇಕೆ ಹೊರತು, ಅವಕಾಶ ವಂಚಿತರನ್ನಾಗಿ ಮಾಡಬಾರದು. ಎಲ್ಲ ಭಾಷೆಗಳಿಗೂ ಸಮಾನ ಪ್ರಾತಿನಿಧ್ಯ ನೀಡಿ, ಕಾರ್ಯಕ್ರಮಗಳಿಗೆ ಸಮಯವನ್ನಾದರೂ ನಿಗದಿಮಾಡಬೇಕು. ಪ್ರಾದೇಶಿಕ ಕಲೆ ಮತ್ತು ಸಂಸ್ಕೃತಿ ಉಳಿವಿಗೆ ಆಕಾಶವಾಣಿ ಕೈಜೋಡಿಸಬೇಕು.

।ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ

‘ಕಲಾವಿದರು ಅವಕಾಶ ವಂಚಿತರಾಗುತ್ತಾರೆ’

‘ಅಮೃತವರ್ಷಿಣಿ’ ವಾಹಿನಿಯಲ್ಲಿ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬರುತ್ತಿತ್ತು. 30 ವರ್ಷಗಳ ಹಿಂದೆ ದೂರದರ್ಶನವನ್ನು ರಾಷ್ಟ್ರೀಕರಣ ಮಾಡುವ ಸಂಚು ನಡೆದಿತ್ತು. ಆಗಿನ ಪ್ರಸಾರ ಭಾರತಿ ನಿರ್ದೇಶಕರು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗೆ ಮಾತ್ರ ಆದ್ಯತೆ ನೀಡಲು ಮುಂದಾಗಿದ್ದರು. ಆಗ ಪ್ರತಿಭಟಿಸಿದ್ದರಿಂದ ಪ್ರಾದೇಶಿಕ ಭಾಷೆಗಳನ್ನು ಕೈಬಿಡುವ ನಿರ್ಧಾರದಿಂದ ಹಿಂದೆ ಸರಿದರು. ‘ಅಮೃತವರ್ಷಿಣಿ’ ವಾಹಿನಿಯನ್ನು ವಿಲೀನ ಮಾಡಿದರೆ ಕಲಾವಿದರು ಅವಕಾಶ ವಂಚಿತರಾಗುತ್ತಾರೆ. ಮೊದಲಿನಂತೆ ‘ಅಮೃತವರ್ಷಿಣಿ’ ವಾಹಿನಿಯನ್ನು ಪ್ರಾರಂಭಿಸಬೇಕು. ಆಕಾಶವಾಣಿಯು ಜನಪರವಾಗಿ ನಿಂತು, ಇಲ್ಲಿನ ಜನರು ಹಾಗೂ ಕಲಾವಿದರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು.

। ವೈ.ಕೆ. ಮುದ್ದುಕೃಷ್ಣ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ

‘ನೆಲ ಮೂಲದ ಧ್ವನಿ ನಾಶ’

ಕೇಂದ್ರದಲ್ಲಿ ಸರ್ಕಾರ ನಡೆಸುವವರಿಗೆ ಪ್ರಾದೇಶಿಕತೆಯ ವೈವಿಧ್ಯತೆಗಳು ಬೇಕಾಗಿಲ್ಲ. ಇದು ಹಿಂದಿ ಹೇರಿಕೆಯ ಹುನ್ನಾರವಾಗಿದೆ. ಸ್ಥಳೀಯ ಕಲಾವಿದರನ್ನು ಹಾಗೂ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಪ್ರಾದೇಶಿಕ ವಾಹಿನಿಗಳನ್ನು ಪ್ರಾರಂಭಿಸಲಾಗಿತ್ತು. ಆದರೆ, ಈಗ ಏಕ ಭಾಷೆಯನ್ನು ಹೇರಿಕೆ ಮಾಡಲು ಮುಂದಾಗಿರುವುದು ವಿಪರ್ಯಾಸ. 6 ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಸಿಗುತ್ತಿರುವ ಕಾರ್ಯಕ್ರಮವೂ ಈಗ ಇಲ್ಲದಂತಾಗುತ್ತದೆ. ನೆಲ ಮೂಲದ ಸಂಸ್ಕೃತಿಯನ್ನು ನಾಶ ಮಾಡಲು ಮಾಡುತ್ತಿರುವ ಬಹುದೊಡ್ಡ ಹುನ್ನಾರ ಇದಾಗಿದೆ. ಆಕಾಶವಾಣಿಯನ್ನೂ ಖಾಸಗಿ ಸಂಸ್ಥೆಗಳಿಗೆ ವಹಿಸುವ ಸಂಚು ನಡೆದಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

। ಪಿಚ್ಚಳ್ಳಿ ಶ್ರೀನಿವಾಸ್, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ

‘ಪ್ರಸಿದ್ಧ ಕಲಾವಿದರಿಗೆ ಮಾತ್ರ ಅವಕಾಶ’

‘ರಾಗಂ’ ಜೊತೆಗೆ ವಿಲೀನ ಮಾಡಿದರೆ ಸ್ಥಳೀಯ ಕಲಾವಿದರು ಅವಕಾಶ ವಂಚಿತರಾಗುತ್ತಾರೆ. ಸಂಗೀತದ ವಿವಿಧ ಪ್ರಕಾರಗಳ ಕಾರ್ಯಕ್ರಮಗಳು ‘ಅಮೃತವರ್ಷಿಣಿ’ಯಲ್ಲಿ ನಿರಂತರ ಪ್ರಸಾರ ಆಗುತ್ತಿದ್ದವು. ಇದರಿಂದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿತ್ತು. ರಾಜ್ಯದ ಸಂಗೀತ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಕಲಿಕೆಗೂ ಇಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಸಹಕಾರಿಯಾಗಿದ್ದವು. ಇನ್ನುಮುಂದೆ ಸ್ಥಳೀಯ ‍ಪ್ರತಿಭೆಗಳಿಗೆ ಅವಕಾಶ ಸಿಗುವುದು ಕಷ್ಟ. ಮುಂದಿನ ದಿನಗಳಲ್ಲಿ ಪ್ರಸಿದ್ಧ ಕಲಾವಿದರಿಗೆ ಮಾತ್ರ ಅವಕಾಶಗಳು ಸಿಗುತ್ತವೆ. ಇಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ‘ಅಮೃತವರ್ಷಿಣಿ’ ಪ್ರತಿನಿಧಿಸುತ್ತಿತ್ತು.

। ಬಸವರಾಜ ಸಾದರ, ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ

‘ಉನ್ನತ ಶ್ರೇಣಿ ಕಲಾವಿದರಿಗೆ ಅವಕಾಶ’

‘ ಟ್ರಾನ್ಸ್‌ಮೀಟರ್‌ ಬದಲಾವಣೆಯ ಕಾರಣ ನೀಡಿ, ವಿಲೀನ ಮಾಡಲಾಗುತ್ತಿದೆ. ಹೊಸದಾಗಿ ಟ್ರಾನ್ಸ್‌ಮೀಟರ್ ಅಳವಡಿಕೆಗೆ ₹ 1 ಕೋಟಿ ವೆಚ್ಚವಾಗಬಹುದು. ಈ ಹಣ ಸರ್ಕಾರಕ್ಕೆ ಹೊರೆ ಆಗುತ್ತಿರಲಿಲ್ಲ. ‘ರಾಗಂ’ನಲ್ಲಿ ‘ಎ’ ಹಾಗೂ ಅದಕ್ಕಿಂತ ಮೇಲಿನ ಶ್ರೇಣಿಯ ಕಲಾವಿದರಿಗೆ ಮಾತ್ರ ಕಾರ್ಯಕ್ರಮಗಳು ಸಿಗಲಿವೆ. ‘ಬಿ’ ಹಾಗೂ ಅದಕ್ಕಿಂತ ಕೆಳಗಿನ ಶ್ರೇಣಿಯ ಕಲಾವಿದರು ಅವಕಾಶ ವಂಚಿತರಾಗುತ್ತಾರೆ. ಹಾಗಾಗಿ, ‘ಅಮೃತವರ್ಷಿಣಿ’ ವಾಹಿನಿಯನ್ನು ಉಳಿಸಿಕೊಳ್ಳಬೇಕು. ಈ ಹಿಂದೆ ಆಕಾಶವಾಣಿ ಕಲಾವಿದರಿಗೆ ಮೂರು ತಿಂಗಳಿಗೆ ಒಮ್ಮೆ ಕಾರ್ಯಕ್ರಮಗಳು ಸಿಗುತ್ತಿದ್ದವು. ಬಳಿಕ ಆರು ತಿಂಗಳು ವರ್ಷಕ್ಕೆ ಕಾರ್ಯಕ್ರಮ ದೊರೆಯುತ್ತಿತ್ತು. ಈಗ ಅದು ಕೂಡ ಇಲ್ಲವಾಗುತ್ತದೆ.

।ಆನೂರು ಅನಂತಕೃಷ್ಣ ಶರ್ಮ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ

‘ಹಿಂದಿಯೇತರ ಭಾಷೆಗಳ ಕಡೆಗಣನೆ’

‘ಪ್ರಾದೇಶಿಕತೆಯನ್ನು ಮೊದಲಿನಿಂದಲೂ ಮೂಲೆಗುಂಪು ಮಾಡಲಾಗಿದೆ. ರಾಜ್ಯದ ಎಷ್ಟು ಮಂದಿ ಕಲಾವಿದರನ್ನು ಕೇಂದ್ರ ಸರ್ಕಾರ ಗುರುತಿಸಿ ಗೌರವಿಸಿದೆ? ಹಿಂದಿಯೇತರ ಭಾಷೆಗಳು ಹಾಗೂ ಕಲಾವಿದರು ನಿರಂತರ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಖಾಸಗಿ ವಾಹಿನಿಗಳಿಗೆ ಅವಕಾಶ ಸಿಗದಿದ್ದರೆ ಸರ್ಕಾರಿ ವಾಹಿನಿಯಲ್ಲಿ ಕನ್ನಡದ ಭಿಕ್ಷೆ ಹಾಕುತ್ತಿದ್ದರು. ಕೇಂದ್ರ ಸರ್ಕಾರವು ಕೇವಲ ಹಿಂದಿಯನ್ನು ಪ್ರತಿನಿಧಿಸುವಂತೆ ವರ್ತಿಸುತ್ತಿದೆ.

।ಅರುಣ್ ಜಾವಗಲ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT