ಭಾನುವಾರ, ಆಗಸ್ಟ್ 14, 2022
19 °C

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ತೆಗೆದುಕೊಂಡ ತೀರ್ಮಾನಗಳ ಕುರಿತು ಹಲವು ಸಚಿವರು, ಶಾಸಕರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಎದುರು ಭಾನುವಾರ ಆಕ್ಷೇಪ ವ್ಯಕ್ತಪಡಿಸಿದರು.

ಏಕಪಕ್ಷೀಯ ತೀರ್ಮಾನಗಳಿಗೆ ತಡೆ ಹಾಕಿ, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವ ಮೂಲಕ ಬಣ ರಾಜಕಾರಣಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದೂ ಬೇಡಿಕೆ ಮುಂದಿಟ್ಟಿದರು.

ಪಕ್ಷದ ರಾಜ್ಯ ಉಸ್ತುವಾರಿಯಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅರುಣ್‌ ಸಿಂಗ್, ಸಚಿವರು, ಶಾಸಕರು ಮತ್ತು ಪಕ್ಷದ ಪ್ರಮುಖರ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಪಕ್ಷದಲ್ಲಿನ ಬಣ ರಾಜಕಾರಣ, ನಿಗಮ, ಮಂಡಳಿಗಳ ನೇಮಕಾತಿ, ಸಂಪುಟ ವಿಸ್ತರಣೆ ಪ್ರಸ್ತಾವ ಸೇರಿ ಹಲವು ವಿಷಯಗಳ ಕುರಿತು ಅಭಿಪ್ರಾಯಪಡೆದರು.

ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಶಾಸಕರ ಅಭಿಪ್ರಾಯ ಆಲಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ಗೆ ಪತ್ರ ಬರೆದಿದ್ದ ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕರೂ ಆಗಿರುವ ಶಾಸಕ ವಿ.ಸುನೀಲ್‌ ಕುಮಾರ್‌, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ, ಸಂಸದ ಪಿ.ಸಿ.ಮೋಹನ್‌, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ
ತೇಜಸ್ವಿ ಸೂರ್ಯ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಸೇರಿ ಹಲವರ ಜತೆ ಅರುಣ್‌ ಸಿಂಗ್‌ ಪ್ರತ್ಯೇಕವಾಗಿ ಸಭೆ ನಡೆಸಿ, ಅಹವಾಲು ಆಲಿಸಿದರು.

ಏಕಪಕ್ಷೀಯ ತೀರ್ಮಾನಕ್ಕೆ ಆಕ್ಷೇಪ: ನಿಗಮ ಮತ್ತು ಮಂಡಳಿಗಳ ನೇಮಕಾತಿಯಲ್ಲಿ ಪಕ್ಷದ ಮೂಲ ಕಾರ್ಯಕರ್ತರು ಹಾಗೂ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಅವರ ಆಪ್ತರಿಗೆ ಮಹತ್ವದ ಸ್ಥಾನಗಳನ್ನು ನೀಡಲಾಗಿದೆ ಎಂಬ ಆಕ್ಷೇಪವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಬಾಕಿ ಇರುವ ನಿಗಮ, ಮಂಡಳಿಗಳಿಗೆ ನೇಮಿಸಲು  ಮೂಲ ಕಾರ್ಯಕರ್ತರನ್ನೇ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಕ್ಷ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸದೇ ಮರಾಠಾ ಅಭಿವೃದ್ಧಿ ನಿಗಮ ಮತ್ತು ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮಗಳನ್ನು ರಚಿಸಲಾಗಿದೆ. ವೀರಶೈವ– ಲಿಂಗಾಯತರನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವ ಪ್ರಸ್ತಾವವನ್ನೂ ಏಕಪಕ್ಷೀಯವಾಗಿ ಸಿದ್ಧಪಡಿಸಲಾಗಿದೆ. ಪಕ್ಷ ಮತ್ತು ಸರ್ಕಾರದ ನಡುವೆ ಸಂಬಂಧವೇ ಇಲ್ಲದಂತಹ ಸ್ಥಿತಿಯಿದೆ ಎಂದೂ ಶಾಸಕರು ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಮೂಲ ಕಾರ್ಯಕರ್ತರಿಗೆ ಅನ್ಯಾಯ ಆಗುವುದನ್ನು ತಡೆಯುವುದು ಹಾಗೂ ಬಣ ರಾಜಕಾರಣಕ್ಕೆ ಕಡಿವಾಣ ಹಾಕದಿದ್ದರೆ ಪಕ್ಷದ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ಪಕ್ಷದ ನಾಯಕತ್ವಕ್ಕೆ ಮುಜುಗರ ಆಗದಂತೆ ಸಮನ್ವಯ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂಬ ಅಭಿಪ್ರಾಯವನ್ನು ಸುನೀಲ್‌ ಕುಮಾರ್‌ ಹಂಚಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಸೋಮಶೇಖರ್‌ ಸೇರಿದಂತೆ ಕೆಲವು ಸಚಿವರು ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನೂ ಆಲಿಸಿದ ಅರುಣ್‌ ಸಿಂಗ್‌, ವರಿಷ್ಠರ ಜತೆ ಚರ್ಚೆ ನಡೆಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಯಾರೂ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ ಎಂದು ಶಾಸಕರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಸಂಪುಟ ವಿಸ್ತರಣೆಗೆ ಅನುಮತಿ ಸಿಕ್ಕಿಲ್ಲ’

‘ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿಯ ವರಿಷ್ಠರು ಅನುಮತಿ ನೀಡಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯುವ ಪ್ರಶ್ನೆಯೇ ಇಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಅರುಣ್‌ ಸಿಂಗ್‌ ಸೇರಿದಂತೆ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಚರ್ಚಿಸಿದ ಬಳಿಕ ಎಲ್ಲವೂ ನಿರ್ಧಾರವಾಗಲಿದೆ‘ ಎಂದರು.

ಮನವೊಲಿಕೆಗೆ ಮುಖ್ಯಮಂತ್ರಿ ಯತ್ನ

ಸಚಿವರು, ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ಕಾವೇರಿ’ಗೆ ಭೇಟಿ ನೀಡಿದ ಅರುಣ್‌ ಸಿಂಗ್‌, ಯಡಿಯೂರಪ್ಪ ಜೊತೆ ಮಧ್ಯಾಹ್ನದ ಭೋಜನ ಸವಿದರು. ಆಗ ಸಿಂಗ್‌ ಜತೆಗೆ ಚರ್ಚಿಸಿದ ಮುಖ್ಯಮಂತ್ರಿ, ಸಂಪುಟ ವಿಸ್ತರಣೆಯ ಅನಿವಾರ್ಯತೆ ತಿಳಿಸಿ ಮನವೊಲಿಸಲು ಯತ್ನಿಸಿದ್ದಾರೆ.

ವಿಜಯೇಂದ್ರ ಹಸ್ತಕ್ಷೇಪ: ಆರೋಪ

‘ಮುಖ್ಯಮಂತ್ರಿ ಮಗ ಬಿ.ವೈ.ವಿಜಯೇಂದ್ರ ಸರ್ಕಾರದ ಕೆಲಸಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಾರೆ’ ಎಂದು ಹಲವರು ಪಕ್ಷದ ರಾಜ್ಯ ಉಸ್ತುವಾರಿ ಎದುರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಗಮ, ಮಂಡಳಿಗಳ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಎಲ್ಲ ವಿಚಾರಗಳು ವಿಜಯೇಂದ್ರ ಸೂಚನೆಯಂತೆಯೇ ತೀರ್ಮಾನಗಳಾಗುತ್ತಿವೆ ಎಂಬುದಾಗಿ ಶಾಸಕರು ದೂರಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು