ಸೋಮವಾರ, ಜೂನ್ 21, 2021
21 °C
ಆಮ್ಲಜನಕ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ದಿನವೂ 1200 ಟನ್‌ ಕೊಡಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಆಮ್ಲಜನಕ ಹಂಚಿಕೆಯ ಪಾಲನ್ನು (ಕೋಟಾ) ತಕ್ಷಣದಿಂದಲೇ ಅನ್ವಯವಾಗುವಂತೆ ಪ್ರತಿ ದಿನಕ್ಕೆ 1,200 ಟನ್‌ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಕೋವಿಡ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ‘ಆಮ್ಲಜನಕ ಹಂಚಿಕೆಯ ಕೋಟಾ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಏಪ್ರಿಲ್ 30ರಂದು ಸಲ್ಲಿಸಿರುವ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸುವವರೆಗೂ ಪ್ರತಿನಿತ್ಯ 1,200 ಟನ್‌ ಕೋಟಾ ಮುಂದುವರೆಸಬೇಕು’ ಎಂದು ಹೇಳಿತು.

‘ಎಲ್ಲ ರಾಜ್ಯಗಳಲ್ಲೂ ಆಮ್ಲಜನಕದ ಕಾಯ್ದಿರಿಸಿದ ದಾಸ್ತಾನು (ಬಫರ್‌ ಸ್ಟಾಕ್‌) ವ್ಯವಸ್ಥೆ ಮಾಡುವಂತೆ ಸುಪ್ರೀಂಕೋರ್ಟ್‌ ಏಪ್ರಿಲ್‌ 30ರಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ, ಈವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಕರ್ನಾಟಕಕ್ಕೆ ಪ್ರತಿ ದಿನದ ಆಮ್ಲಜನಕ ಹಂಚಿಕೆಯ ಪಾಲನ್ನು 865 ಟನ್‌ಗಳಿಂದ 965 ಟನ್‌ಗಳಿಗೆ ಹೆಚ್ಚಿಸಲು ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ವಿಚಾರಣೆಯ ಆರಂಭದಲ್ಲೇ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಕೋವಿಡ್‌ ಪ್ರಕರಣಗಳ ಏರಿಕೆಯ ಆಧಾರದಲ್ಲಿ ಹೆಚ್ಚುವರಿ ಬೇಡಿಕೆಯನ್ನು ಪರಿಶೀಲಿಸಿ, ನಾಲ್ಕು ದಿನಗಳೊಳಗೆ ಹೊಸದಾಗಿ ಆಮ್ಲಜನಕದ ಪರಿಷ್ಕೃತ ಬೇಡಿಕೆ ಪತ್ರ ಸಲ್ಲಿಸುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಬುಧವಾರದ (ಮೇ 5) ವೇಳೆಗೆ ರಾಜ್ಯದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 3.95 ಲಕ್ಷ ತಲುಪುವ ಅಂದಾಜಿದೆ. ಆ ವೇಳೆಗೆ ರಾಜ್ಯಕ್ಕೆ ಪ್ರತಿದಿನ 1,792 ಟನ್‌ ಆಮ್ಲಜನಕದ ಅಗತ್ಯ ಇದೆ. ಕನಿಷ್ಠ 1,162 ಟನ್‌ನಷ್ಟಾದರೂ ಆಮ್ಲಜನಕ ಪೂರೈಕೆ ಆಗಲೇಬೇಕು ಎಂದು ರಾಜ್ಯ ಸರ್ಕಾರ ಏಪ್ರಿಲ್‌ 3 ರಂದು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಬೇಡಿಕೆ ಮಂಡಿಸಿತ್ತು.

‘ಒಂದು ವಾರದ ಅವಧಿಯಲ್ಲೇ 1.60 ಲಕ್ಷದಷ್ಟು ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರದ (ಮೇ 4) ವೇಳೆಗೆ ರಾಜ್ಯದಲ್ಲಿನ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 4.64 ಲಕ್ಷ ದಾಟಿದೆ’ ಎಂಬ ಮಾಹಿತಿಯನ್ನು ನ್ಯಾಯಪೀಠ ವಿಚಾರಣೆ ವೇಳೆ ಉಲ್ಲೇಖಿಸಿತು.

‘ರಾಜ್ಯದಲ್ಲೇ ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಆದರೂ, ವಿಶಾಖಪಟ್ಟಣ, ಒಡಿಶಾ ಮತ್ತು ಕೇರಳದಿಂದ ಆಮ್ಲಜನಕ ತರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ’ ಎಂದು ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ಕೆ. ನಾವಡಗಿ ತಿಳಿಸಿದರು. ‘ಕೇಂದ್ರ ಸರ್ಕಾರ ರಾಜ್ಯದಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನೇ ಬಳಸಿಕೊಳ್ಳಲು ಅವಕಾಶ ನೀಡಬಹುದು’ ಎಂದು ವಿಭಾಗೀಯ ಪೀಠ ಹೇಳಿತು.

ಸಕಾರಾತ್ಮಕ ನಿರ್ಧಾರಕ್ಕೆ ಸೂಚನೆ: ಕೋವಿಡ್‌ ರೋಗಿಗಳಲ್ಲಿ ಶ್ವಾಸಕೋಶದ ಅತಿಯಾದ ಸೋಂಕಿನಿಂದ ಬಳಲುತ್ತಿರುವವರ ಚಿಕಿತ್ಸೆಗೆ ಬಳಸುತ್ತಿರುವ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ಪೂರೈಕೆ ಬಗ್ಗೆಯೂ ವಿಚಾರಣೆ ನಡೆಯಿತು. ರಾಜ್ಯ ಸರ್ಕಾರ ಮೇ 1 ರಿಂದ 15ರವರೆಗಿನ ಅವಧಿಯಲ್ಲಿ 4 ಲಕ್ಷದಿಂದ 5 ಲಕ್ಷ ವಯಲ್ಸ್‌ ರೆಮ್‌ಡಿಸಿವಿರ್‌ ಚುಚ್ಚುಮದ್ದು ಪೂರೈಸುವಂತೆ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದೆ.

‘ರಾಜ್ಯ ಸರ್ಕಾರದ ಬೇಡಿಕೆಯ ಮೂರನೇ ಒಂದರಷ್ಟು ರೆಮ್‌ಡಿಸಿವಿರ್‌ ಚುಚ್ಚುಮದ್ದು ಮಾತ್ರ ಪೂರೈಕೆಯಾಗುತ್ತಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ಸೂಚಿಸಿತು.

ಆಮ್ಲಜನಕ ಬಳಕೆ: ಕೇಂದ್ರದ ಅನುಮತಿ ನಿರೀಕ್ಷೆ: ಶೆಟ್ಟರ್‌

‘ರಾಜ್ಯದಲ್ಲಿ ಉತ್ಪಾದಿಸುತ್ತಿರುವ ಆಮ್ಲಜನಕವನ್ನು ಇಲ್ಲಿಯೇ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸಚಿವರ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದೇನೆ. ಶೀಘ್ರದಲ್ಲೇ ಅನುಮತಿ ಸಿಗಲಿದೆ’ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ಆಕ್ಸಿಜನ್ ಪೂರೈಕೆ ಮತ್ತು ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಪ್ರಮಾಣ ಹೆಚ್ಚಿಸಲಾಗಿದ್ದು, ಬಳ್ಳಾರಿಯ ಜಿಂದಾಲ್‌ನಲ್ಲಿ ಈಗಾಗಲೇ ಉತ್ಪಾದನೆ ಹೆಚ್ಚಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ಹೊರ ರಾಜ್ಯಗಳಿಂದಲೂ ಆಮ್ಲಜನಕ ಹಂಚಿಕೆ ಮಾಡಿದೆ’ ಎಂದರು.

‘ಬಹರೇನ್‌ನಿಂದ 40 ಟನ್‌ ಆಮ್ಲಜನಕ ಬಂದಿದೆ. ಇತರೆ ರಾಜ್ಯಗಳಿಂದಲೂ ಹೆಚ್ಚುವರಿಯಾಗಿ 40 ಟನ್‌ಗಳಷ್ಟು ಆಮ್ಲಜನಕ ಬರಲಿದೆ. ಸ್ಟೀಲ್‌ ಉತ್ಪಾದನೆ ಕಡಿಮೆಗೊಳಿಸಿ ಆಮ್ಲಜನಕ ಉತ್ಪಾದನೆ ಹೆಚ್ಚಿಸುವಂತೆ ಜಿಂದಾಲ್‌ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ’ ಎಂದೂ ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು