ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 2ನೇ ಅಲೆ ಎದುರಿಸಲು 40 ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯವಸ್ಥೆ: ಸುಧಾಕರ್‌

ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಕಾರ್ಯಪಡೆಯಿಂದ ಸಿದ್ಧತೆ
Last Updated 11 ಡಿಸೆಂಬರ್ 2020, 9:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆಯನ್ನು ಎದುರಿಸುವುದಕ್ಕಾಗಿ ₹ 37.72 ಕೋಟಿ ವೆಚ್ಚದಲ್ಲಿ ರಾಜ್ಯದ 40 ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಅಳವಡಿಸುವ ಪ್ರಸ್ತಾವಕ್ಕೆ ರಾಜ್ಯಮಟ್ಟದ ಕೋವಿಡ್‌ ನಿಯಂತ್ರಣ ಕಾರ್ಯಪಡೆ ಶುಕ್ರವಾರ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ‘ರಾಜ್ಯದ ಹತ್ತು ಜಿಲ್ಲಾ ಆಸ್ಪತ್ರೆಗಳು ಮತ್ತು 30 ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ಎರಡು ವಿಭಿನ್ನ ತಾಂತ್ರಿಕ ವಿಧಾನಗಳ ಮೂಲಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

90 ದಿನಗಳ ಅವಧಿಯಲ್ಲಿ ಕೋವಿಡ್‌ ಪತ್ತೆ ಪರೀಕ್ಷೆಗಾಗಿ ₹ 45 ಕೋಟಿ ವೆಚ್ಚ ಮಾಡಲು ಮಂಜೂರಾತಿ ನೀಡಲಾಗಿದೆ. ತಲಾ 10 ಲಕ್ಷ ಆರ್‌ಟಿಪಿಸಿಆರ್‌ ಮತ್ತು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ತುರ್ತು ಬಳಕೆಯ ಔಷಧಿ ಖರೀದಿಗಾಗಿ ₹ 22.50 ಕೋಟಿ ಬಿಡುಗಡೆ ಮಾಡುವ ಪ್ರಸ್ತಾವಕ್ಕೂ ಕಾರ್ಯಪಡೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಕೋವಿಡ್‌ ಎರಡನೇ ಅಲೆ ನಿಯಂತ್ರಣ ಹಾಗೂ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಯಾದಗಿರಿ, ದಕ್ಷಿಣ ಕನ್ನಡ, ಬೆಳಗಾವಿ, ಉಡುಪಿ, ಹಾವೇರಿ, ಬೀದರ್‌ ಮತ್ತು ರಾಯಚೂರು ಜಿಲ್ಲೆಗಳ ಅಧಿಕಾರಿಗಳ ಜತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಾಗಿದೆ. ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಲಸಿಕೆ ದಾಸ್ತಾನಿಗೆ ಸಿದ್ಧತೆ: ಕೋವಿಡ್‌ ಲಸಿಕೆ ದಾಸ್ತಾನು ಮತ್ತು ವಿತರಣೆಗೆ ಸಿದ್ಧತೆ ಆರಂಭವಾಗಿದೆ. ಲಸಿಕೆ ಮತ್ತು ಅದನ್ನು ದಾಸ್ತಾನು ಇರಿಸಿಕೊಳ್ಳಲು ಅಗತ್ಯವಿರುವ ಯಂತ್ರೋಪಕರಣಗಳನ್ನು ಕೇಂದ್ರ ಸರ್ಕಾರವೇ ಒದಗಿಸಲಿದೆ. ಜಿಲ್ಲಾ ಮಟ್ಟದ ಲಸಿಕಾ ಕೇಂದ್ರಗಳಲ್ಲಿ ನಡೆದಿರುವ ಸಿದ್ಧತೆಯನ್ನು ಕಾರ್ಯಪಡೆ ಪರಿಶೀಲನೆ ನಡೆಸಿದೆ ಎಂದು ಸುಧಾಕರ್‌ ತಿಳಿಸಿದರು.

ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದುಡಿಯುವವರಿಗೆ ಲಸಿಕೆ ನೀಡಲಾಗುವುದು. ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಹಿರಿಯ ನಾಗರಿಕರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುವುದು. ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಿ ಲಸಿಕೆ ವಿತರಣೆಗಾಗಿ ಸಿದ್ಧಪಡಿಸಿರುವ ಮೊಬೈಲ್‌ ಆ್ಯಪ್‌ ಮತ್ತು ಐಸಿಎಂಆರ್‌ ವೆಬ್‌ಸೈಟ್‌ನಲ್ಲಿ ದಾಖಲಿಸುವ ಕೆಲಸ ಆರಂಭವಾಗಿದೆ ಎಂದರು.

ಕ್ರಮದ ಎಚ್ಚರಿಕೆ: ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡೆಸಿವಿರ್‌ ಔಷಧಿಯನ್ನು ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಪ್ರತಿ ಡೋಸ್‌ಗೆ ₹ 2,000ಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೊಸ ವರ್ಷಾಚರಣೆಗೆ ನಿರ್ಬಂಧ: ಕಂದಾಯ ಸಚಿವ ಆರ್‌. ಅಶೋಕ ಮಾತನಾಡಿ, ‘ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅವರ ಒಪ್ಪಿಗೆ ದೊರೆತ ಬಳಿಕ ಆದೇಶ ಹೊರಡಿಸಲಾಗುವುದು’ ಎಂದರು.

ರಾಜ್ಯದ ಯಾವುದೇ ಭಾಗದಲ್ಲಿ ಬಹಿರಂಗ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಮನೆಗಳಲ್ಲೇ ವರ್ಷಾಚರಣೆ ನಡೆಸಬಹುದು. ಹೋಟೆಲ್‌, ಬಾರ್‌ಗಳಿಗೆ ಈಗ ಇರುವ ನಿರ್ಬಂಧವೇ ಮುಂದುವರಿಯಲಿದೆ ಎಂದು ತಿಳಿಸಿದರು.

ಕೋವಿಡ್‌ ನಿಯಂತ್ರಣ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ನೇಮಿಸಲಾಗಿದೆ. ಸಚಿವರಾದ ಸುಧಾಕರ್‌, ಎಸ್‌. ಸುರೇಶ್ ಕುಮಾರ್‌ ಮತ್ತು ಸಿ.ಸಿ. ಪಾಟೀಲ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT