ಮಂಗಳವಾರ, ನವೆಂಬರ್ 24, 2020
19 °C
‘ಪ್ರಜಾವಾಣಿ’ ಸಂವಾದ

ಬೇಡಿಕೆಗೆ ಮಣಿಯದಿದ್ದರೆ ಆಮರಣಾಂತ ಉಪವಾಸ: ಜಯ ಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಈಗ ಸರ್ಕಾರ ಮಣಿಯದಿದ್ದರೆ, ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಬೆಂಗಳೂರಿನಲ್ಲೇ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮ ಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ  ಶುಕ್ರವಾರ ನಡೆದ ‘ಪ್ರಜಾವಾಣಿ ಸಂವಾದ’ ದಲ್ಲಿ ಮಾತನಾಡಿದ ಅವರು, ‘ಕೃಷಿ ಕಸುಬು ಮಾಡುವ ಸಮುದಾಯ ಆರ್ಥಿಕ ಸಂಕಷ್ಟದಲ್ಲೇ ಜೀವಿಸುತ್ತಿದೆ. ಶೇಕಡ 5ರಷ್ಟು ಮಂದಿ ಮಾತ್ರ ಸ್ಥಿತಿವಂತರಿದ್ದಾರೆ. ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಸಮುದಾಯದ ಮಕ್ಕಳ ಭವಿಷ್ಯದ ಒಳಿತಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಬೇಡಿಕೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವಧಿಯಲ್ಲಿ ಸಮುದಾಯದ ಮೀಸಲಾತಿ ಬೇಡಿಕೆ ಈಡೇರುತ್ತದೆ ಎಂಬ ವಿಶ್ವಾಸವಿದೆ. ಈಗ ಅಕ್ಟೋಬರ್‌ 28ರಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ರಾಜ್ಯ ಸರ್ಕಾರದ ನಡೆ ಆಧರಿಸಿ ಮುಂದಿನ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಯಾರ ಪಾಲಿಗೂ ಕೈ ಹಾಕುತ್ತಿಲ್ಲ: ‘ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸುವುದರಿಂದ ಇತರ ಜಾತಿಗಳ ಮೀಸಲಾತಿಯ ಪಾಲು ಕಡಿಮೆಯಾಗುವುದಿಲ್ಲ. ನಾವು ಯಾವುದೇ ಸಮುದಾಯದ ಮೀಸಲಾತಿಯ ಪಾಲಿಗೆ ಕೈಹಾಕುವುದಿಲ್ಲ. ಪ್ರವರ್ಗ 2ಎಗೆ ಶೇ 15ರಷ್ಟು ಮೀಸಲಾತಿ ಇದೆ. ಪಂಚಮಸಾಲಿಗಳನ್ನು ಪ್ರವರ್ಗ 2ಎಗೆ ಸೇರಿಸುವುದರ ಜತೆಯಲ್ಲೇ ಮೀಸಲಾತಿಯ ಪ್ರಮಾಣವನ್ನೂ ಹೆಚ್ಚಿಸಲಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯ ಪ್ರಮಾಣವನ್ನೂ ಹೆಚ್ಚಿಸಲಿ’ ಎಂದು ಸ್ವಾಮೀಜಿ ಹೇಳಿದರು.

ಹಿಂದೆ ಹಲವು ಸಮುದಾಯಗಳನ್ನು ರಾಜ್ಯ ಸರ್ಕಾರ ಪ್ರವರ್ಗ 2ಎಗೆ ಸೇರಿಸಿದೆ. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿ.ಎಂ. ಉದಾಸಿ ನೇತೃತ್ವದ ಸಂಪುಟ ಉಪ ಸಮಿತಿ ಪಂಚಮಸಾಲಿಗಳೂ ಸೇರಿದಂತೆ ಲಿಂಗಾಯತರ 42 ಉಪ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬಹುದು ಎಂದು ಶಿಫಾರಸು ಮಾಡಿತ್ತು. ಆ ಕುರಿತು ಸರ್ಕಾರ ತ್ವರಿತವಾಗಿ ತೀರ್ಮಾನಕ್ಕೆ ಬರಲಿ. ಕೇಂದ್ರ ಸರ್ಕಾರದ ಜಾತಿಗಳ ಪಟ್ಟಿಯಲ್ಲೂ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಿ ಎಂದು ಒತ್ತಾಯಿಸಿದರು.

‘ಹರಿಹರದ ಪಂಚಮಸಾಲಿ ಪೀಠ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ನಾವು ಆರಂಭಿಸಿದ ಹೋರಾಟಕ್ಕೆ ಅವರು ಬೆಂಬಲ ನೀಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇರುವ ಧರ್ಮಕ್ಕೆ ಮಾನ್ಯತೆ ಕೇಳಿದ್ದು

‘900 ವರ್ಷಗಳಿಂದ ಲಿಂಗಾಯತ ಧರ್ಮ ಅಸ್ತಿತ್ವದಲ್ಲಿದೆ. ನಾವು ಪ್ರತ್ಯೇಕ ಧರ್ಮ ಕೇಳುತ್ತಿಲ್ಲ. ಒಂಭತ್ತು ಶತಮಾನಗಳಿಂದ ಅಸ್ತಿತ್ವದಲ್ಲಿರುವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂಬುದು ನಮ್ಮ ಆಗ್ರಹ. ಅದಕ್ಕಾಗಿಯೇ ಲಿಂಗಾಯತ ಮಹಾಸಭಾ ಹೋರಾಟ ನಡೆಸುತ್ತಿದೆ’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು