ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಜನ್ಮದಿನಕ್ಕೆ ಶಾಲೆಗೆ ಬಣ್ಣ: ಡಿ ದರ್ಜೆ ನೌಕರನ ಕಾರ್ಯಕ್ಕೆ ಮೆಚ್ಚುಗೆ

ಹಿರೇಶಿವನಗುತ್ತಿ
Last Updated 20 ಆಗಸ್ಟ್ 2020, 21:22 IST
ಅಕ್ಷರ ಗಾತ್ರ
ADVERTISEMENT
""

ಬಾಗಲಕೋಟೆ: ಇಳಕಲ್ ತಾಲ್ಲೂಕಿನ ಹಿರೇಶಿವನಗುತ್ತಿ ಸರ್ಕಾರಿ ಪ್ರೌಢಶಾಲೆಯ ಡಿ ದರ್ಜೆ ನೌಕರ ಮಹಿಬೂಬ್ ಆಗ್ರಾ ತಮ್ಮ ಮಗನ ಹುಟ್ಟುಹಬ್ಬಕ್ಕೆ ₹30 ಸಾವಿರ ವೆಚ್ಚದಲ್ಲಿ ಶಾಲೆಗೆ ಬಣ್ಣ ಬಳಿಸಿದ್ದಾರೆ.

ಗ್ರಾಮದ ಮಾ.ಬಿ.ವಿ ಸಂಗನಾಳ ಸರ್ಕಾರಿ ಪ್ರೌಢಶಾಲೆ ಕಟ್ಟಡ ಈಗ ಬಣ್ಣದ ಮೆರುಗು ಕಂಡಿದೆ. ಮಹಿಬೂಬ್–ಫರೀದಾ ದಂಪತಿಯ ಒಬ್ಬನೇ ಮಗ ಮೊಹಮ್ಮದ್ ಮುಸ್ತಫಾ ಗ್ರಾಮದಲ್ಲಿಯೇ ಒಂದನೇ ತರಗತಿ ಓದುತ್ತಿದ್ದಾನೆ. ಆಗಸ್ಟ್ 14ರಂದು ಅವನ ಹುಟ್ಟುಹಬ್ಬ ಇತ್ತು.

‘ಹಚ್ಚಿಸುವ ಬಗ್ಗೆ ಮಹಿಬೂಬ್ ನಮಗೇನೂ ಹೇಳಿರಲಿಲ್ಲ. ಆಗಸ್ಟ್ 8ರಂದು ಶನಿವಾರ ಅರ್ಧದಿನ ಶಾಲೆಗೆ ಬಂದು ಮನೆಗೆ ಮರಳಿದ್ದೆವು. ಅಂದು ಮಧ್ಯಾಹ್ನ ಹಾಗೂ ಮರುದಿನ ಭಾನುವಾರ ಬಣ್ಣ ಹಚ್ಚಿಸಿದ್ದಾರೆ. ಸೋಮವಾರ ಮರಳಿ ಬಂದಾಗ ಶಾಲೆ ಹೊಸರೂಪ ಪಡೆದಿರುವುದು ಕಂಡು ಅಶ್ಚರ್ಯವಾಯಿತು‘ ಎಂದು ಮುಖ್ಯ ಶಿಕ್ಷಕ ಶಿವಶಂಕರ ಪೋಚಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಬೂಬ್ ಅವರೇ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮಗನಿಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಎಲ್ಲಾ ಸಂಕಷ್ಟಗಳ ನಡುವೆ ಶಾಲೆಗಾಗಿ ಮಿಡಿದದ್ದು ದೊಡ್ಡ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇದೊಂದು ಒಳ್ಳೆಯ ಕಾರ್ಯ. ಶಾಲಾ ಸುಧಾರಣಾ ಸಮಿತಿ ವತಿಯಿಂದಲೂ ಅವರನ್ನು ಗೌರವಿಸಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ಹಾಗಲದಾಳ ಹೇಳಿದರು.

ಮಹಿಬೂಬ್ ಆಗ್ರಾ

ಹಿರೇಶಿವನಗುತ್ತಿ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ 209 ಮಕ್ಕಳು ಕಲಿಯುತ್ತಿದ್ದಾರೆ. 11 ಮಂದಿ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದಾರೆ.

ಶಿಕ್ಷಣ ಸಚಿವರಿಂದಮೆಚ್ಚುಗೆ ಪತ್ರ
ಮಹಿಬೂಬ್ ಅವರು ಶಾಲೆಗೆ ಬಣ್ಣ ಹಚ್ಚಿಸಿರುವುದಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅಭಿನಂದಿಸಿದ್ದಾರೆ. ಮಹಿಬೂಬ್ ಅವರಿಗೆ ಗುರುವಾರ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಆರ್ಥಿಕ ಸ್ಥಿತಿಗತಿ ಬದಿಗಿರಿಸಿ, ಇಂಥ ಉದಾತ್ತ ಕೆಲಸ ಮಾಡಿರುವ ನಿಮ್ಮಂಥವರ ಸಂಖ್ಯೆ ಹೆಚ್ಚಲಿ ಎಂದು ಪತ್ರದಲ್ಲಿ ಆಶಿಸಿದ್ದಾರೆ.

***

ಮಗನ ಹುಟ್ಟುಹಬ್ಬಕ್ಕೆ ವಿಶೇಷವೇನಾದರೂ ಮಾಡಬೇಕು ಅಂದುಕೊಂಡಿದ್ದೆ. ಕೊನೆಗೆ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿಸುವುದೆಂದು ನಿರ್ಧರಿಸಿದೆ.
-ಮಹಿಬೂಬ್ ಆಗ್ರಾ, ಡಿ ದರ್ಜೆ ನೌಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT