ಗುರುವಾರ , ಜೂನ್ 30, 2022
22 °C
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಆರೋಪ

‘ಮೀಸಲಾತಿಗೆ ವಚನಾನಂದ ಶ್ರೀಗಳೇ ವಿರೋಧಿ’: ಪಂಚಮಸಾಲಿ ಮಹಾಸಭಾ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಕ್ಕೆ ಹರಿಹರದ ವಚನಾನಂದ ಶ್ರೀಗಳೇ ನಿಜವಾದ ವಿರೋಧಿಯಾಗಿದ್ದಾರೆ’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

‘ಮಾರ್ಚ್‌ 6ರಂದು ಹರಿಹರದಲ್ಲಿ ನಡೆದ ಪಂಚಮಸಾಲಿ ಪದಾಧಿಕಾರಿಗಳ ಸಭೆಯಲ್ಲಿ ಮೀಸಲಾತಿಗೆ ಅವಸರ ಬೇಡ ಎಂದು ಶ್ರೀಗಳು ಹೇಳಿದ್ದಾರೆ. ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುವ ಬದಲು ವಿಳಂಬ ಮಾಡುವಂತೆ ಹೇಳಿಕೆ ನೀಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

’ಮೀಸಲಾತಿ ವಿರೋಧಿಯಾಗಿರುವ ಸ್ವಾಮೀಜಿ ಅವರ ಬಗ್ಗೆ ಸಮುದಾಯ ಎಚ್ಚರವಹಿಸಬೇಕು. ಮರಾಠ ಮೀಸಲಾತಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಮರಾಠ ಸಮುದಾಯ ಪ್ರತ್ಯೇಕ ಮೀಸಲಾತಿ ಕೇಳಿದ್ದರಿಂದ ಅವಕಾಶ ದೊರೆತಿಲ್ಲ. ಈ ಸಾಮಾನ್ಯ ಜ್ಞಾನ ಶ್ರೀಗಳಿಗೆ ಇನ್ನೂ ತಿಳಿದಿಲ್ಲ. ಲಿಂಗಾಯತ ಪಂಚಮಸಾಲಿ ಸಮುದಾಯ ಮೀಸಲಾತಿಯ ಒಳಗಿನ ನಮ್ಮ ಪಾಲನ್ನು ಮಾತ್ರ’ ಎಂದು ಹೇಳಿದರು.

‘ವಚನಾನಂದ ಶ್ರೀಗಳು ಸುಳ್ಳು ಹೇಳಿ ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ. ಮೀಸಲಾತಿ ಅವರಿಗೆ ಬೇಡವಾಗಿದ್ದರೆ ಮೌನವಹಿಸಲಿ. ಆದರೆ, ಹೋರಾಟ ಹತ್ತಿಕ್ಕುವ ಹೇಳಿಕೆಗಳನ್ನು ನೀಡಬಾರದು. ಸಮುದಾಯ ಸಹ ಮೀಸಲಾತಿ ಹೋರಾಟದ ದಾರಿ ತಪ್ಪಿಸುವ ಹೇಳಿಕೆಗಳಿಗೆ ಕಿವಿಗೊಡಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಾದರೂ ಮೀಸಲಾತಿ ದೊರೆಯಲಿದೆ ಎನ್ನುವ ಆಶಾಭಾವ ಹೊಂದಿದ್ದೇವೆ. ಸರ್ಕಾರದ ಮೇಲೆ ವಿಶ್ವಾಸ ಇರಿಸಬೇಕು. ಕೊಟ್ಟ ಮಾತಿನಂತೆ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಮತ್ತೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ವಿವರಿಸಿದರು.

15ಕ್ಕೆ ದುಂಡು ಮೇಜಿನ ಸಭೆ

‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ಮಾರ್ಚ್‌ 15ರಂದು ದುಂಡು ಮೇಜಿನ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಈ ಅಧಿವೇಶನ ಮುಗಿಯುವ ಮುನ್ನವೇ ಸಮುದಾಯಕ್ಕೆ ಮೀಸಲಾತಿ ಘೋಷಿಸಬೇಕು. ಸರ್ಕಾರ ಈ ಹಿಂದೆ ನೀಡಿದ ಮಾತಿನಂತೆ ಮಾರ್ಚ್‌ 15ಕ್ಕೆ ಒಂದು ವರ್ಷವಾಗಲಿದೆ. ಹೀಗಾಗಿ, ಅದೇ ದಿನ ಪಂಚಮಸಾಲಿ ಹೋರಾಟಗಾರರ ಸಭೆ ನಡೆಸಲಾಗುವುದು’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು