ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಜೊತೆ ‘ಪರೀಕ್ಷಾ ಪೇ ಚರ್ಚಾ’: ರಾಜ್ಯದ ಇಬ್ಬರು ಆಯ್ಕೆ

Last Updated 19 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ‘ಪರೀಕ್ಷಾ ಪೇ ಚರ್ಚಾ’ ಸಂವಾದದಲ್ಲಿ ಭಾಗವಹಿಸಲು ಆಯ್ಕೆಯಾದ ದೇಶದ ಮೂವತ್ತು ವಿದ್ಯಾರ್ಥಿಗಳಲ್ಲಿ ರಾಜ್ಯದ ಇಬ್ಬರು ಇದ್ದಾರೆ.

ಉಡುಪಿ ಜಿಲ್ಲೆಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಆರ್ಡಿ (ನಮ್ಮೂರ ಶಾಲೆ) ವಿದ್ಯಾರ್ಥಿನಿ ಅನುಷಾ ಮತ್ತು ಹೊಸಕೋಟೆ ತಾಲ್ಲೂಕಿನ ತಾವರಕೆರೆ ಸರ್ಕಾರಿ ಪ್ರೌಢಶಾಲೆಯ ಮನೋಜ್‌ ಆಯ್ಕೆಯಾದವರು. ಈ ಇಬ್ಬರಿಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಅನುಷಾ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸುರೇಶ್‌ ಕುಮಾರ್, ಆಕೆಯ ಕುಟುಂಬ, ತಂದೆ-ತಾಯಿ ಕುರಿತು ಮಾಹಿತಿ ಪಡೆದರು. ಪ್ರಧಾನಿ ಜೊತೆ ಸಂವಾದಕ್ಕೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಚೆನ್ನಾಗಿ ಓದಿ ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಂತೆ ಹಾರೈಸಿದರು.

ಮನೋಜ್‌ ಕಲಿಯುವ ಶಾಲೆಗೆ ಭೇಟಿ ಮಾಡಿದ ಸಚಿವರು, ಪ್ರಧಾನಿ ಜೊತೆ ಆತ್ಮವಿಶ್ವಾಸದಿಂದ ಮಾತನಾಡುವಂತೆ ಸಲಹೆ ನೀಡಿದರು. ಶಾಲೆಯ ಇತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪರೀಕ್ಷೆ, ಶಾಲೆ, ತರಗತಿ, ಪಠ್ಯ, ಆರೋಗ್ಯ ರಕ್ಷಣೆ, ಸಾಂಕ್ರಾಮಿಕ ರೋಗಗಳಿಂದ ದೂರ ಇರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

‘ಇಬ್ಬರು ವಿದ್ಯಾರ್ಥಿಗಳೂ ಗ್ರಾಮೀಣ ಭಾಗದವರು. ಅನುಷಾಳ ತಂದೆ ಗಾರೆ ಕೆಲಸಗಾರರಾಗಿದ್ದರೆ, ಮನೋಜ್‌ನ ತಂದೆ ಹೂವಿನ ವ್ಯಾಪಾರಿ. ಬಡತನದ ಕುಟುಂಬಕ್ಕೆ ಸೇರಿದವರು. ಪ್ರತಿಭೆ ಎಲ್ಲಿದ್ದರೂ ಅರಳುತ್ತದೆ ಎಂಬುದಕ್ಕೆ ಈ ವಿದ್ಯಾರ್ಥಿಗಳು ಸಾಕ್ಷಿ’ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT