ಸೋಮವಾರ, ಮೇ 23, 2022
30 °C

ಪಾರ್ಸಿ ಸಂಖ್ಯೆ ವೃದ್ಧಿಗೆ ಕಾರ್ಯಕ್ರಮ: ಶ್ರೀಮಂತ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ

ಬೆಂಗಳೂರು: ಪಾರ್ಸಿ ಸಮುದಾಯದ ಜನಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ, ಆ ಸಮುದಾಯದ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಈ ಸಂಬಂಧ ಕೇಂದ್ರ ಸರ್ಕಾರ ಯೋಜನೆಯೊಂದು ರೂಪಿಸುತ್ತಿದ್ದು, ಕೇಂದ್ರದಿಂದ ಮಾರ್ಗಸೂಚಿ ಬಂದ ಬಳಿಕ ರಾಜ್ಯದಲ್ಲೂ ಅನುಷ್ಠಾನ ಮಾಡಲಾಗುವುದು. ರಾಜ್ಯದಲ್ಲಿ ಪಾರ್ಸಿ ಸಮುದಾಯದ ಜಸಂಖ್ಯೆ 1 ಸಾವಿರ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಈ ವಿಷಯವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ವಿವಿಧ ಕಾರಣಗಳಿಂದಾಗಿ ಪಾರ್ಸಿಗಳ ಸಂಖ್ಯೆ ಅಳಿವಿನಂಚಿಗೆ ಬಂದಿದೆ. ವೈಜ್ಞಾನಿಕವಾಗಿ ಆ ಸಮುದಾಯದ ಸಂಖ್ಯೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಅಲ್ಪಸಂಖ್ಯಾತರಿಗೆ ಸಾಲ:

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಸ್ವಯಂ ಉದ್ಯೋಗ ಮತ್ತು ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸಾಲ ಮತ್ತು ಸಬ್ಸಿಡಿಯನ್ನು ಅತ್ಯಂತ ಸರಳ ರೀತಿಯಲ್ಲಿ ನೀಡುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಶ್ರೀಮಂತ ಪಾಟೀಲ ಹೇಳಿದರು.

ಫಲಾನುಭವಿಗಳಿಗೆ ₹ 5 ಲಕ್ಷದಿಂದ ₹20 ಲಕ್ಷದವರೆಗೆ ಸಾಲವನ್ನು ಅಲ್ಪಸಂಖ್ಯಾತರ ಕಲ್ಯಾಣ ನಿಗಮದ ವತಿಯಿಂದ ನೀಡಲಾಗುವುದು ಎಂದರು.

ಸಾಕಷ್ಟು ನಿಯಮಗಳ ಕಾರಣದಿಂದ ಹಿಂದೆ ಬ್ಯಾಂಕಿನಿಂದ ಸಾಲ ಪಡೆಯುವುದು ಕಷ್ಟವಾಗಿತ್ತು. ಈಗ ಅತ್ಯಂತ ಸರಳವಾಗಿ ಅವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಇಂತಹ ಉದ್ಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೊಬೈಲ್‌ ರಿಪೇರಿಯಿಂದ ಹಿಡಿದು, ಪ್ಲಂಬಿಂಗ್‌ ಕೆಲಸದವರೆಗೆ ಹಲವು ಕಸಬುಗಳಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ಕೆಲವು ಸಂಸ್ಥೆಗಳಿಗೆ ಅನುದಾನ ನೀಡಲು ಅಲ್ಪ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನದ ಹಣವನ್ನು ಬಳಕೆ ಆಗಿರುವುದು ನಿಜ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣಕ್ಕೆ ಯಾವುದೇ ಕಾರಣಕ್ಕೂ ಅನುದಾನ ಕಡಿಮೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಈ ಬಾರಿ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡುವ ಮೂಲಕ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೋದಿ ಅವರ ಸರ್ಕಾರ ಶ್ರಮಿಸುತ್ತಿದೆ. ಶಿಕ್ಷಣ ಮತ್ತು ಉದ್ಯೋಗ ನೀಡುವ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಬಜೆಟ್‌ನಲ್ಲೂ ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಿಯಾರ್‌ ಪಠಾಣ್ ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮುಜಾಮಿಲ್‌ ಅಹ್ಮದ್‌ ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು