ಸೋಮವಾರ, ಜುಲೈ 4, 2022
22 °C

ಪಡಿತರ ಅಕ್ಕಿ ಕಳ್ಳಸಾಗಣೆ: ಲಾರಿ ಮಾಲೀಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಅಕ್ಕಿ ಗಿರಣಿಗಳಿಗೆ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ 20 ದಿನಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಮಾಲೀಕನನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಗರದ ನಂದಿನಿ ಬಡಾವಣೆ ನಿವಾಸಿ ಆರ್‌.ಎಸ್‌. ಮಣಿ ಬಂಧಿತ ಆರೋಪಿ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ವಿತರಣೆ ಮಾಡಲು ಹಂಚಿಕೆಯಾಗಿದ್ದ 240 ಚೀಲ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಬಂಗಾರಪೇಟೆಗೆ ಕಳ್ಳಸಾಗಣೆ ಮಾಡುತ್ತಿದ್ದ ಮಣಿ ಮಾಲೀಕತ್ವದ ಈಚರ್‌ ಲಾರಿಯನ್ನು ಮಾರ್ಚ್‌ 16ರಂದು ಕೋಲಾರದ ಗಾಜಲದಿನ್ನೆ ಬಳಿ ವಶಕ್ಕೆ ಪಡೆಯಲಾಗಿತ್ತು.

‘ಪ್ರಕರಣ ದಾಖಲಾದ ದಿನದಿಂದಲೂ ಆರೋಪಿ ತಲೆಮರೆಸಿಕೊಂಡಿದ್ದರು. ಕೋಲಾರ ಗ್ರಾಮಾಂತರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಕಿರಣ್‌ಕುಮಾರ್‌ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಮಂಗಳವಾರ ಬೆಂಗಳೂರಿನಲ್ಲಿ ಬಂಧಿಸಿದೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಆರೋಪಿಗಳಿಗೆ ಶೋಧ: ಪ್ರಕರಣದಲ್ಲಿ ಪಡಿತರ ಅಕ್ಕಿಯನ್ನು ಬೆಂಗಳೂರಿನಲ್ಲಿ ಉಗ್ರಾಣದಿಂದ ಪೂರೈಕೆ ಮಾಡಿದ್ದ ವ್ಯಕ್ತಿ, ಅದನ್ನು ಖರೀದಿಸಿ ಬಂಗಾರಪೇಟೆಗೆ ಸಾಗಿಸುತ್ತಿದ್ದವರು ಹಾಗೂ ಅಲ್ಲಿ ಖರೀದಿಸುತ್ತಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಲವು ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು