ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಪತಿ ಹತ್ಯೆ; 14 ವರ್ಷದ ಮಗನೇ ಆರೋಪಿ !

* ಬುದ್ಧಿ ಮಾತು ಹೇಳಿದ್ದಕ್ಕೆ ಸಿಟ್ಟಾಗಿ ಕೃತ್ಯ * ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು
Last Updated 7 ಮೇ 2021, 16:45 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಖ್ಯಿಕ ಇಲಾಖೆಯ ಬೆಂಗಳೂರು ಜಿಲ್ಲಾ ಕಚೇರಿಯಲ್ಲಿ ನಡೆದಿದ್ದ ದಂಪತಿ ಹತ್ಯೆ ಪ್ರಕರಣ ಭೇದಿಸಿರುವ ಪೀಣ್ಯ ಠಾಣೆ ಪೊಲೀಸರು, ಅವರ ಮಗನೇ ಆರೋಪಿ ಎಂಬುದನ್ನು ಪತ್ತೆ ಮಾಡಿದ್ದಾರೆ.

‘ಪೀಣ್ಯದ ಕರಿಹೋಬನಹಳ್ಳಿ ಸಮೀಪದ ಜಿಲ್ಲಾ ಸಾಂಖ್ಯಿಕ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹನುಮಂತರಾಯ (41) ಹಾಗೂ ಅವರ ಪತ್ನಿ ಹೊನ್ನಮ್ಮ (34) ಅವರನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಅವರ 14 ವರ್ಷದ ಹಿರಿಯ ಮಗನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಯಾದಗಿರಿಯ ಹನುಮಂತರಾಯ, ಜಿಲ್ಲಾ ಕಚೇರಿಯಲ್ಲಿ ಸೆಕ್ಯುರಿಟಿ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹೊನ್ನಮ್ಮ ಸಹ ಅದೇ ಕಚೇರಿಯ ಸ್ವಚ್ಛತೆ ಸಿಬ್ಬಂದಿಯಾಗಿದ್ದರು. ದಂಪತಿ ತಮ್ಮಿಬ್ಬರ ಮಕ್ಕಳ ಜೊತೆ ಕಚೇರಿ ಬಳಿಯೇ ಶೆಡ್‌ ನಿರ್ಮಿಸಿಕೊಂಡು ವಾಸವಿದ್ದರು.’

‘ದಂಪತಿಯ ಮೃತದೇಹಗಳು ಗುರುವಾರ ಕಚೇರಿಯ ಶೌಚಾಲಯದಲ್ಲಿ ಪತ್ತೆಯಾಗಿದ್ದವು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮಕ್ಕಳಿಬ್ಬರನ್ನು ವಿಚಾರಣೆಗೆ ಒಳಪಡಿಸಲಾಯಿತು. ಹಿರಿಯ ಮಗ ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.

‘ಕೆಲ ಸ್ಥಳೀಯ ಹುಡುಗರ ಜೊತೆ ಓಡಾಡುತ್ತಿದ್ದ ಹಿರಿಯ ಮಗ, ಅಡ್ಡದಾರಿ ಹಿಡಿದಿದ್ದ. ಅದನ್ನು ಕಂಡಿದ್ದ ತಂದೆ, ‘ವಿದ್ಯೆ ಕಲಿ. ಉಡಾಳ ಕೆಲಸ ಮಾಡಬೇಡ’ ಎಂದು ಬುದ್ಧಿ ಮಾತು ಹೇಳಿದ್ದರು. ಅದರಿಂದ ಸಿಟ್ಟಾಗಿದ್ದ ಮಗ, ತಂದೆ–ತಾಯಿಯನ್ನೇ ಕೊಂದಿದ್ದಾನೆ. ಈ ಬಗ್ಗೆ ಆತ ಹೇಳಿಕೆ ನೀಡಿದ್ದಾನೆ’ ಎಂದೂ ಹೇಳಿದರು.

ಕಚೇರಿಯಲ್ಲಿ ಮಲಗಿದ್ದಾಗ ಕೃತ್ಯ: ‘ತಂದೆಯನ್ನು ಕೊಲೆ ಮಾಡಲು ಮುಂದಾಗಿದ್ದ ಮಗ, ಕೆಲ ದಿನಗಳ ಹಿಂದೆಯೇ ದೊಡ್ಡ ಗಾತ್ರದ ಕಲ್ಲು ತಂದಿಟ್ಟುಕೊಂಡಿದ್ದ. ದಂಪತಿ ಬುಧವಾರ ರಾತ್ರಿ ಕಚೇರಿಯಲ್ಲಿ ಮಲಗಿದ್ದರು. ಹಿರಿಯ ಮಗನೂ ಅವರ ಹೊತೆ ಮಲಗಲು ಹೋಗಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಗುರುವಾರ ನಸುಕಿನಲ್ಲಿ ಎಚ್ಚರಗೊಂಡಿದ್ದ ಹಿರಿಯ ಮಗ, ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಲು ಮುಂದಾಗಿದ್ದ. ಆದರೆ, ಕೈ ಜಾರಿ ತಾಯಿ ಮೇಲೆ ಕಲ್ಲು ಬಿದ್ದಿತ್ತು. ಅವರು ಪ್ರಜ್ಞೆ ತಪ್ಪಿದ್ದರು. ಅದೇ ಸಂದರ್ಭದಲ್ಲೇ ಎಚ್ಚರಗೊಂಡಿದ್ದ ತಂದೆಯನ್ನು ತಳ್ಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದ.’

‘ತಾಯಿ ಎಚ್ಚರವಾದರೆ ತನಗೆ ಹೊಡೆಯುತ್ತಾಳೆಂದು ತಿಳಿದು ಅವರ ತಲೆ ಮೇಲೆಯೂ ಕಲ್ಲು ಎತ್ತಿಹಾಕಿ ಕೊಂದಿದ್ದ. ಇಬ್ಬರ ಮೃತದೇಹಗಳನ್ನು ಶೌಚಾಲಯಕ್ಕೆ ಎಳೆದೊಯ್ದು ಬೀಗ ಹಾಕಿ ಶೆಡ್‌ಗೆ ಬಂದಿದ್ದ’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT