ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ಗಾಗಿ ವೈಯಕ್ತಿಕ ಮಾಹಿತಿ ಸಂಗ್ರಹ!: ಕೆಪಿಟಿಸಿಎಲ್ ನೌಕರರಲ್ಲಿ ಆತಂಕ

ಮಾನವ ಸಂಪನ್ಮೂಲ ನಿರ್ವಹಣೆಗೆ ಹೊಸ ತಂತ್ರಾಂಶ
Last Updated 28 ಅಕ್ಟೋಬರ್ 2021, 21:58 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್‌) ಸಂಪರ್ಕರಹಿತ ಹಾಜರಾತಿ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಗೆ ಹೊಸದಾಗಿ ಆ್ಯಪ್‌ವೊಂದನ್ನು ಅನುಷ್ಠಾನಗೊಳಿಸಿದ್ದು, ಇದು ನೌಕರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಆ್ಯಪ್‌ಗೆ ಕೆಪಿಟಿಸಿಎಲ್‌ನ ಎಲ್ಲ ನೌಕರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿರುವುದು ನೌಕರರಲ್ಲಿ ಸಂದೇಹಕ್ಕೆ ಕಾರಣವಾಗಿದೆ. ಸಂದೇಹವನ್ನು ನಿವಾರಣೆ ಮಾಡುವ ಬಗ್ಗೆಯೂ ಅಧಿಕಾರಿಗಳು ಗಮನಹರಿಸಿಲ್ಲ.

ಸಂಪರ್ಕ ರಹಿತ ಹಾಜರಾತಿ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ತಂತ್ರಾಂಶ ವ್ಯವಸ್ಥೆ ಇದೇ 1 ರಿಂದ ಜಾರಿಯಾಗಿದೆ. ಇದಕ್ಕಾಗಿ ಝೆನೆಟೈಲ್ (zenetial) ಆ್ಯಪ್‌ ಅನ್ನು ಮೊಬೈಲ್‌ ಫೋನ್‌ಗಳಲ್ಲಿರುವ ಪ್ಲೇಸ್ಟೋರ್‌ಗಳ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಲು ನಿಗಮವು ಸುತ್ತೋಲೆ ಹೊರಡಿಸಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿರುವ ಕೆಲವು ಸಿಬ್ಬಂದಿ, ‘ಖಾಸಗಿ ಸಂಸ್ಥೆಯ ಮೂಲಕ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಅದಕ್ಕಾಗಿ ಎಲ್ಲ ನೌಕರರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ನೀಡಿರುವುದು ಸರಿಯಲ್ಲ. ಭಾರತ ಸರ್ಕಾರದ ನ್ಯಾಷನಲ್‌ ಇನ್ಫರ್ಮೇಟಿಕ್‌ ಸೆಂಟರ್‌ಗೆ ಈ ಜವಾಬ್ದಾರಿ ಕೊಟ್ಟಿದ್ದರೆ, ನಮ್ಮ ತಕರಾರು ಇಲ್ಲ. ಏಕೆಂದರೆ, ಸರ್ಕಾರದಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಸುಭದ್ರವಾಗಿರುತ್ತದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ನೌಕರರ ಹೆಸರು, ಜನ್ಮ ದಿನಾಂಕ, ನಿರ್ವಹಿಸುತ್ತಿರುವ ಹುದ್ದೆ, ರಕ್ತದ ಗುಂಪು, ಸೇವೆಗೆ ಸೇರಿದ ದಿನಾಂಕ, ಪಡೆಯುತ್ತಿರುವ ಸಂಬಳ, ಪ್ಯಾನ್‌ ಕಾರ್ಡ್‌, ಆಧಾರ್‌, ಇ–ಮೇಲ್‌ ಐಡಿ, ಖಾಸಗಿ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಇದು ಸಂವಿಧಾನ ನೀಡಿರುವ ಖಾಸಗೀತನದ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿಗಳನ್ನು ಸಂಗ್ರಹಿಸಿ ಖಾಸಗಿ ಕಂಪನಿಗೆ ನೀಡುವ ಸಂಬಂಧ ಮುಂಚಿತವಾಗಿ ಯಾವುದೇ ಸೂಚನೆಯನ್ನು ನೀಡಿಲ್ಲ. ಎಲ್ಲವನ್ನು ಮರೆ ಮಾಚಿದೆ. ಖಾಸಗಿ ಕಂಪನಿ ಇದನ್ನು ಅನ್ಯ ಉದ್ದೇಶಗಳಿಗೂ ಬಳಸಬಹುದು. ಇದರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಹೊಸ ಆ್ಯಪ್‌ ಅಭಿವೃದ್ಧಿಪಡಿಸಿರುವ ಖಾಸಗಿ ಕಂಪನಿಯ ವಿಶ್ವಾಸಾರ್ಹತೆ ಯಾರಿಗೂ ಗೊತ್ತಿಲ್ಲ. ಅದು ಎರಡು ವರ್ಷಗಳ ಹಿಂದಷ್ಟೆ ಸ್ಥಾಪನೆ ಆಗಿರುವ ಹೊಸ ಕಂಪನಿ ಎಂದು ನೌಕರರು ತಿಳಿಸಿದ್ದಾರೆ.

ಸಿಬ್ಬಂದಿ ತಮ್ಮ ಮೊಬೈಲ್‌ ಫೋನ್‌ ಮೂಲಕವೇ ಕಚೇರಿ ಅಥವಾ ವಿದ್ಯುತ್‌ ಘಟಕಗಳಿಗೆ ಪ್ರವೇಶಿಸಿ ತಕ್ಷಣವೇ ಚೆಕ್‌ ಇನ್‌ ಮತ್ತು ಅಲ್ಲಿಂದ ಹೊರಗೆ ಹೊರಟ ತಕ್ಷಣವೇ ಚೆಕ್‌ ಔಟ್‌ ದಾಖಲಿಸಬೇಕು. ಆದರೆ ,ಚೆಕ್‌ ಇನ್‌ ಎಂದು ನಮೂದಿಸಿದರೆ, ನಿರ್ಗಮಿಸುವ ವೇಳೆಗೂ ಚೆಕ್‌ ಇನ್‌ ಎಂದೇ ಬರುತ್ತದೆ. ಹೀಗಾಗಿ ಇದು ಪರಿಪೂರ್ಣವಾಗಿ ಅಭಿವೃದ್ಧಿಪಡಿಸಿದ ಆ್ಯಪ್‌ ಅಲ್ಲ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

‘ಆಧಾರ್‌, ಪಾನ್‌ ಕಾರ್ಡ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ಗಳನ್ನು ರಹಸ್ಯವಾಗಿ ಇಟ್ಟಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಗ್ಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇದೆ. ಕೆಪಿಟಿಸಿಎಲ್‌ ನಮ್ಮ ಖಾಸಗಿ ದೂರವಾಣಿ ಸಂಖ್ಯೆಯನ್ನೇ ಬಳಕೆದಾರರ ಐಡಿ ಮತ್ತು ಪಾಸ್‌ ವರ್ಡ್‌ ಆಗಿ ಬಳಕೆ ಮಾಡಲು ಅನುಮತಿ ನೀಡಿರುವುದು ಅಪಾಯಕಾರಿ’ ಎಂದು ವ್ಯಾಖ್ಯಾನಿಸಿದ್ದಾರೆ.

ಎಲ್ಲ ಮಾಹಿತಿ ಸುರಕ್ಷಿತ: ಡಾ.ಮಂಜುಳಾ
‘ಹಾಜರಾತಿ ವ್ಯವಸ್ಥೆಯನ್ನು ಶಿಸ್ತು ಬದ್ಧಗೊಳಿಸಲು ಈ ವ್ಯವಸ್ಥೆ ಜಾರಿ ತರಲಾಗಿದೆ. ಸಿಬ್ಬಂದಿ ಪಾಳಿಗಳನ್ನು ತಪ್ಪಿಸುವ, ಎರಡೆರಡು ದಿನಗಳು ಅನಧಿಕೃತವಾಗಿ ಗೈರಾಗುವುದಕ್ಕೆ ಇದರಿಂದ ಕಡಿವಾಣ ಬೀಳಲಿದೆ’ ಎಂದು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್‌.ಮಂಜುಳಾ ಹೇಳಿದರು.

‘ಕೆಳ ಹಂತದ ಸಿಬ್ಬಂದಿ ಪಾಳಿ ತಪ್ಪಿಸುವುದರಿಂದ ವಿದ್ಯುತ್‌ ಘಟಕಗಳಲ್ಲಿ ಅನಾಹುತಗಳು ಆಗಿವೆ. ಅಂಚೇಪಾಳ್ಯದಲ್ಲಿ ಸಂಭವಿಸಿದ್ದ ಅನಾಹುತದ ಬಳಿಕ ಈ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಲಾಯಿತು. ಸಿಬ್ಬಂದಿಯ ಎಲ್ಲ ವೈಯಕ್ತಿಕ ಮಾಹಿತಿಗಳು ನಮ್ಮ ಸರ್ವರ್‌ಗಳಲ್ಲೇ ಸುರಕ್ಷಿತವಾಗಿವೆ’ ಎಂದರು.

ಮುಂದಿನ ದಿನಗಳಲ್ಲಿ ರಜೆ ಹಾಕುವುದು ಸೇರಿ ಇಲಾಖೆಗೆ ಸಂಬಂಧಿಸಿದ ವಿವಿಧ ಸೇವೆಗಳಿಗೆ ಇದೇ ಆ್ಯಪ್‌ ಬಳಕೆ ಮಾಡಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT