ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಶ್ರೀರಾಮ್‌ ಎಂದರೆ ಪೆಟ್ರೋಲ್‌ ಬೆಲೆ ಇಳಿಯುತ್ತಾ: ಮರಿತಿಬ್ಬೇಗೌಡ ಪ್ರಶ್ನೆ

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆ
Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪೆಟ್ರೋಲ್‌, ಡೀಸೆಲ್‌ ಬೆಲೆ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದೆ. ಇದರಿಂದ ಜನಜೀವನ ದುಸ್ತರವಾಗಿದೆ. ಜೈ ಶ್ರೀರಾಮ್‌, ಜೈ ಹನುಮಾನ್‌ ಎಂದರೆ ಪೆಟ್ರೋಲ್‌ ದರ ಇಳಿಯುತ್ತಾ’ ಎಂದು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಬುಧವಾರ ಪ್ರಶ್ನಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಉಂಟಾಗಿರುವ ಹೆಚ್ಚಳದ ಕುರಿತು ಪ್ರಸ್ತಾಪಿಸುತ್ತಾ ಅವರು ಈ ‍ಪ್ರಶ್ನೆ ಹಾಕಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

‘ರಾಮನನ್ನು ನೀವು ಗುತ್ತಿಗೆ ತೆಗೆದುಕೊಂಡಿದ್ದೀರಾ’ ಎಂದು ಕಾಂಗ್ರೆಸ್‌ ಸದಸ್ಯರು ಬಿಜೆಪಿಯವರನ್ನು ಕೇಳಿದರು. ಕೆಲಕಾಲ ಇದು ಮಾತಿನ ಸಮರಕ್ಕೆ ಕಾರಣವಾಯಿತು.

‘ಜೈ ಜವಾನ್‌– ಜೈ ಕಿಸಾನ್‌ ಎಂಬ ಘೋಷಣೆಯನ್ನು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ನೀಡಿದ್ದರು. ಈಗ ಕೇಂದ್ರದ ಬಿಜೆಪಿ ಸರ್ಕಾರ ಜೈ ಜವಾನ್‌ ಜೈಲ್‌ ಕಿಸಾನ್‌ ಎಂದು ಬದಲಾವಣೆ ಮಾಡಿದೆ. ರೈತರನ್ನು ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

ಮಿತಿ ಮೀರಿದ ಭ್ರಷ್ಟಾಚಾರ:

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕೆಲವೇ ಮಂದಿ ಐಎಎಸ್‌ ಅಧಿಕಾರಿಗಳು ಸರ್ಕಾರ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸಿ ಲೋಕಾಯುಕ್ತ ಬಲಗೊಳಿಸುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈಗ ಮೌನ ತಾಳಿದ್ದಾರೆ ಎಂದು ಮರಿತಿಬ್ಬೇಗೌಡ ಆರೋಪಿಸಿದರು.

’ಬಿಜೆಪಿ ಸರ್ಕಾರ ಮಾನ, ಮರ್ಯಾದೆ ಕಳೆದುಕೊಂಡಿದೆ. ರೈತರು, ಕಾರ್ಮಿಕರು, ಬಡ ಜನರ ಮೇಲೆ ಸಾಲದ ಹೊರೆ ಹೊರಿಸುವ ಬಜೆಟ್‌ ಸ್ವೀಕಾರಾರ್ಹವಲ್ಲ’ ಎಂದು ಹೇಳಿದರು.

ಮರಿತಿಬ್ಬೇಗೌಡ ಅವರು ಎರಡು ಗಂಟೆ ಕಾಲ ಮಾತನಾಡಿದರು. ಹಲವು ಬಾರಿ ಮೊನಚು ಮಾತಿಗಳಿಂದ ಸರ್ಕಾರಕ್ಕೆ ತಿವಿದರು. ಇದು ತೀವ್ರ ವಾಕ್ಸಮರಕ್ಕೂ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT