ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯದ ದೀಪ’ ಆರಿದರೆ ಅರಾಜಕತೆ; ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ಚರ್ಚೆ

‘ನ್ಯಾಯಾಂಗ ಭ್ರಷ್ಟಾಚಾರ’: ಪ್ರಹಾರ
Last Updated 19 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯದ ದೀಪ ಹೊಯ್ದಾಡುತ್ತಿದ್ದು, ಅದು ಆರಿ ಹೋದರೆ ದೇಶದಲ್ಲಿ ಅರಾಜಕತೆಯ ಕಾರ್ಗತ್ತಲು ಕವಿಯುತ್ತದೆ. ನ್ಯಾಯಾಂಗದಲ್ಲಿ ವಿಪರೀತ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಾಧೀಶರು ಜನಪ್ರತಿನಿಧಿಗಳನ್ನು ಕಳ್ಳ–ಕಾಕರಂತೆ ನೋಡುತ್ತಾರೆ. . .’

ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್‌ ಮೇಲಿನ ಚರ್ಚೆಯ ವೇಳೆ ಪಕ್ಷಭೇದ ಮರೆತು ಶಾಸಕರು ನ್ಯಾಯಾಂಗ ವ್ಯವಸ್ಥೆಯನ್ನು ಈ ಮೇಲಿನಂತೆ ಕಟುವಾಗಿಯೇ ಒರೆಗೆ ಹಚ್ಚಿದರು.

‘ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಹೊರಗೆ ಎಲ್ಲೂ ಧ್ವನಿ ಎತ್ತಲು ಸಾಧ್ಯವಿಲ್ಲ. ಮಾತನಾಡಿದರೆ ಮಾರನೇ ದಿನವೇನೋಟಿಸ್‌ ಬರುತ್ತದೆ. ಇಲ್ಲಿ (ಸದನದಲ್ಲಿ) ಮಾತ್ರ ನಮಗೆ ರಕ್ಷಣೆ ಇದೆ. ಇಲ್ಲಿಯೇ ವಿಮರ್ಶಾತ್ಮಕವಾಗಿ ಮಾತನಾಡದಿದ್ದರೆ ಇನ್ನೆಲ್ಲಿ ಮಾತನಾಡುವುದು’ ಎಂದು ಶಾಸಕರು ಕೇಳಿದರು.

ಈ ಗಂಭೀರ ಚರ್ಚೆಗೆ ಪೀಠಿಕೆ ಹಾಕಿದ್ದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌. ಚರ್ಚೆ ಇನ್ನಷ್ಟು ವಿಸ್ತಾರ ಪಡೆದುಕೊಳ್ಳಲು ಪ್ರೇರಣೆ ನೀಡಿ, ಎಲ್ಲ ಪಕ್ಷಗಳ ಹಿರಿಯ ಶಾಸಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಮಾಡಿದ್ದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ.

‘ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಜವಾಬ್ದಾರಿಗಳನ್ನು ಮರೆತಿದ್ದಾಗ ‘ನ್ಯಾಯಾಂಗ ಕ್ರಿಯಾಶೀಲತೆ’ (ಜುಡಿಷಿಯಲ್ ಆಕ್ಟಿವಿಸಮ್) ಆರಂಭವಾಯಿತು. ಈಗೀಗ ನ್ಯಾಯಾಲಯಗಳಿಂದ ಹೊರ ಬೀಳುತ್ತಿರುವ ತೀರ್ಪುಗಳನ್ನು ನೋಡಿದರೆ ಆತಂಕವಾಗುತ್ತದೆ. ನ್ಯಾಯದ ದೀಪ ಹೊಯ್ದಾಡುತ್ತಿದ್ದು, ಎಲ್ಲಿ ಆರಿ ಹೋಗುವುದೊ ಎಂಬ ಆತಂಕ ಕಾಡುತ್ತಿದೆ’ ಎಂದು ರಮೇಶ್‌ಕುಮಾರ್‌ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಕಾಗೇರಿ, ‘ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳದ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಬಾಕಿ ಉಳಿದಿವೆ. ಈ ವಿಚಾರದಲ್ಲಿ ಶಾಸಕಾಂಗ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆ’ ಎಂದು ರಮೇಶ್‌ ಕುಮಾರ್‌ ಅವರನ್ನು ಕೇಳಿದರು.

‘ಈ ವಿಚಾರದಲ್ಲಿ ನಾವು ಖಂಡಿತಾ ಮಧ್ಯ ಪ್ರವೇಶಿಸಲು ಸಾಧ್ಯವಿದೆ. ಆ ಅಧಿಕಾರ ಶಾಸಕಾಂಗಕ್ಕೆ ಇದೆ. ಬಳಸಬೇಕು’ ಎಂದು ರಮೇಶ್‌ಕುಮಾರ್‌ ಹೇಳಿದರು.

ನಿವೇಶನ ಹಗರಣದ ಬಗ್ಗೆ ಕ್ರಮ ಯಾಕಿಲ್ಲ?: ಚರ್ಚೆ ಅಪೂರ್ಣವಾಗಿದ್ದನ್ನು ಮನಗಂಡ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅದನ್ನು ಇನ್ನಷ್ಟು ಬೆಳೆಸಲು ಮುಂದಾದರು.

‘ಎಲ್ಲ ಕ್ಷೇತ್ರಗಳಂತೆ ನ್ಯಾಯಾಂಗವೂ ನೈತಿಕತೆ ಕಳೆದುಕೊಂಡಿದೆ. ನ್ಯಾಯಾಂಗ ನೌಕರರ ಗೃಹ ನಿರ್ಮಾಣ ಮಂಡಳಿಯ ಸದಸ್ಯರಲ್ಲದ ಮತ್ತು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನ 84 ನ್ಯಾಯಾಧೀಶರು ನಿವೇಶನ ಖರೀದಿಸಿದ್ದಾರೆ. ನಿಯಮಾವಳಿ ಪ್ರಕಾರ ನ್ಯಾಯಾಧೀಶರಿಗೆ ನಿವೇಶನ ಖರೀದಿಸುವ ಹಕ್ಕು ಇಲ್ಲ. ಹಾಗಿದ್ದರೆ ಇವರಿಗೇ ಬೇರೆ ಕಾನೂನು ಇದೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಈ ಹಗರಣ ನಡೆದು ಇಷ್ಟು ಸಮಯವಾದರೂ ಇವರ (ನ್ಯಾಯಾಧೀಶರ) ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ? ನಾವು ಯಾರ ಬಳಿ ಹೋಗಿ ನ್ಯಾಯ ಕೋರಬೇಕು? ನ್ಯಾಯಾಂಗದಲ್ಲಿ ಪಾವಿತ್ರ್ಯ ಉಳಿದಿದೆಯೇ’ ಎಂದೂ ರಾಮಸ್ವಾಮಿ ಕೇಳಿದರು.

ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ ಮಾತನಾಡಿ, ’ಸಂವಿಧಾನದಲ್ಲಿ ಜನಪ್ರತಿನಿಧಿ ಸಭೆಯೇ ಅಂತಿಮ ಸಭೆ. ಜನಪ್ರತಿನಿಧಿಗಳು ಎಲ್ಲಿಯವರೆಗೆ ಸಮರ್ಪಕವಾಗಿ ಕೆಲಸ ಮಾಡುತ್ತಾರೋ ಅಲ್ಲಿಯವರೆಗೆ ಸಂಶಯದಿಂದ ನೋಡಬಾರದು‘ ಎಂದರು.

‘ನಾನೂ ಕಾನೂನು ಸಚಿವನಾಗಿದ್ದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದ ಪ್ರಕರಣಗಳ ಸಂಖ್ಯೆಯನ್ನು ಒಬ್ಬ ದೊಡ್ಡ ವಕೀಲರ ಬಳಿ ಕೇಳಿದೆ. ಅದಕ್ಕೆ ಅವರು... ಅಯ್ಯೋ ಅದನ್ನೆಲ್ಲಾ ಕೇಳಿ ತಪ್ಪು ಮಾಡಬೇಡಿ. ಅದರಿಂದ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಗಾಬರಿ ಬೀಳಿಸಿದರು’ ಎಂದು ಪಾಟೀಲ ಹೇಳಿದರು.

‘ನ್ಯಾಯಾಂಗವು ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡುವ ಪ್ರವೃತ್ತಿ 1970ರ ದಶಕದಲ್ಲಿ ಆರಂಭವಾಯಿತು. 72 ವರ್ಷಗಳ ಪ್ರಜಾತಂತ್ರದ ಪಯಣದಲ್ಲಿ ಇದನ್ನು ಪದೇ ಪದೇ ನೋಡುತ್ತಿದ್ದೇವೆ’ ಎಂದು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

‘ನಾವು ಶಾಸನ ರಚಿಸುವವರು. ಸಾಮಾನ್ಯವಾಗಿ ಕಾನೂನುಗಳು ಅಸ್ಪಷ್ಟವಾಗಿರುತ್ತವೆ. ಅವುಗಳನ್ನು ವಿಭಿನ್ನವಾಗಿಯೂ ವ್ಯಾಖ್ಯಾನಿಸಲಾಗುತ್ತದೆ. ನಾವು(ಶಾಸಕಾಂಗ) ಈ ಅಸ್ಪಷ್ಟತೆಯನ್ನು ಸರಿಪಡಿಸಿದಾಗ, ನ್ಯಾಯಾಂಗಕ್ಕೆ ಮೂಗು ತೂರಿಸಲು ಅವಕಾಶವೇ ಸಿಗುವುದಿಲ್ಲ’ ಎಂದು ಅವರು ತಿಳಿಸಿದರು.

ಕಾಗೇರಿ ಮಾತನಾಡಿ, ‘ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಜನರ ನಿರೀಕ್ಷೆಯ ಎತ್ತರಕ್ಕೆ ಏರದೇ ಇದ್ದರೆ, ಭವಿಷ್ಯದಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ’ ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದರು.

‘ಶೇ 50 ರಷ್ಟು ಭ್ರಷ್ಟಾಚಾರ’

‘ಸುಪ್ರೀಂಕೋರ್ಟ್‌ನ ಕೆಲವು ನಿವೃತ್ತ ನ್ಯಾಯಾಧೀಶರು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ನಾವಾಗೇ ಅಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಹೆದರಿಸುತ್ತಾರೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

‘ನ್ಯಾಯಾಂಗದಲ್ಲಿ ಶೇ 50 ರಷ್ಟು ಭ್ರಷ್ಟಾಚಾರ ತುಂಬಿದೆ ಎಂದು ನಿವೃತ್ತ ನ್ಯಾಯಾಧೀಶರೇ ಹೇಳುತ್ತಾರೆ. ಭ್ರಷ್ಟಾಚಾರ ನಡೆಸುವ ನ್ಯಾಯಾಧೀಶರ ಮೇಲೆ ದಾಳಿ ನಡೆಸುವವರು ಯಾರು? ನ್ಯಾಯಾಂಗ ತನ್ನ ಗೌರವನ್ನು ಉಳಿಸಿಕೊಂಡು ಹೋಗಬೇಕು. ನ್ಯಾಯಾಂಗ ಕೆಟ್ಟು ಹೋದರೆ, ಅರಾಜಕತೆ ಸೃಷ್ಟಿಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಮ್ಮನ್ನು ಕಳ್ಳರಂತೆ ನೋಡುತ್ತಾರೆ’

‘ನ್ಯಾಯಾಧೀಶರು ಜನಪ್ರತಿನಿಧಿಗಳನ್ನು ಕಳ್ಳರಂತೆ ನೋಡುತ್ತಾರೆ. ನಮ್ಮ ಕ್ಷೇತ್ರಗಳಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೆ, ನಮ್ಮ ಪಕ್ಕದಲ್ಲಿ ಕೂರುವುದಿಲ್ಲ, ನಾವೇನು ಕಳ್ಳರಾ, ಕ್ರಿಮಿನಲ್‌ಗಳಾ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

* ಈಗಂತೂ ಕೆಲವು ನ್ಯಾಯಾಧೀಶರು ರಸ್ತೆಗೆ ಇಳಿದು ಸುದ್ದಿಗೋಷ್ಠಿ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ.

–ಎಚ್‌.ಕೆ.ಪಾಟೀಲ, ಕಾಂಗ್ರೆಸ್‌

* ನ್ಯಾಯಾಲಯ ಎಂದರೆ ಜನರಲ್ಲಿ ಗೌರವ ಮತ್ತು ಭಕ್ತಿ ಇದೆ. ಆದರೆ ಅಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.

–ಜಗದೀಶ ಶೆಟ್ಟರ್‌, ಕೈಗಾರಿಕಾ ಸಚಿವ

* ನ್ಯಾಯಾಧೀಶರು ಸೇರಿದಂತೆ ಯಾರೂ ದೇವಲೋಕದಿಂದ ಇಳಿದು ಬಂದಿಲ್ಲ. ಎಲ್ಲರೂ ತಾಯಿ ಗರ್ಭದಿಂದಲೇ ಬಂದವರು.

–ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್‌

* ನ್ಯಾಯಾಂಗ ಎಲ್ಲೆ ಮೀರಿದಾಗ ನ್ಯಾಯಾಂಗದಲ್ಲಿ ಸುಧಾರಣೆಗಳನ್ನು ತರಲು ಕ್ರಮ ತೆಗೆದುಕೊಳ್ಳಲೇ ಬೇಕಾಗುತ್ತದೆ.

–ಬಸವರಾಜ ಬೊಮ್ಮಾಯಿ, ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT