ಸೋಮವಾರ, ಆಗಸ್ಟ್ 8, 2022
24 °C
ಬಿಜೆಪಿ ಬಲ ಹೆಚ್ಚಿಸಲು ಪ್ರಧಾನಿಗೆ ಮೊರೆ ಹೋದ ರಾಜ್ಯ ಘಟಕ

ಚುನಾವಣೆ ತಾಲೀಮಿಗೆ ಮೋದಿ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಸುಮಾರು 10 ತಿಂಗಳು ಬಾಕಿ ಇರುವಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ

ಯವರು ಬೆಂಗಳೂರು– ಮೈಸೂರಿನ ಎರಡು ದಿನಗಳ ಭೇಟಿಯ ಮೂಲಕ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಮತ್ತು ಮತದಾರರ ಮನಸ್ಸಿಗೆ ಲಗ್ಗೆ ಇಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಎರಡೂ ನಗರಗಳಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರಿಗೆ ಬಿಜೆಪಿ ಪರವಾಗಿ ಪರೋಕ್ಷ ಸಂದೇಶಗಳನ್ನು ನೀಡಿದರು. ‘40 ವರ್ಷಗಳಲ್ಲಿ ಮಾತಿನಲ್ಲೇ ಉಳಿದಿದ್ದ ಕೆಲಸಗಳನ್ನು 40 ತಿಂಗಳಲ್ಲಿ ಬಿಜೆಪಿ ಸರ್ಕಾರ ಮಾಡಿ ತೋರಿಸಲಿದೆ’ ಎಂದು ಜನರಿಗೆ ಭರವಸೆ ನೀಡಿದರು. ಡಬಲ್‌ ಎಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಹೆಗಲು ಕೊಡಲಿದೆ ಎಂದೂ ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ರೋಡ್‌ ಶೋಗಳ ಮೂಲಕ ಈಗಿನಿಂದಲೇ ಚುನಾವಣೆ ತಯಾರಿ ನಡೆಸುವ ಯೋಜನೆಯನ್ನು ಬಿಜೆಪಿ ರಾಜ್ಯ ಘಟಕ ರೂಪಿಸಿತ್ತು. ಆದರೆ, ಭದ್ರತೆಯ ಕಾರಣಕ್ಕೆ ಎಸ್‌ಪಿಜಿ ಅದಕ್ಕೆ ಅವಕಾಶ ನೀಡಲಿಲ್ಲ. ಅದರ ಬದಲಿಗೆ ಜಕ್ಕೂರಿನಿಂದ ಮೇಖ್ರಿ ಸರ್ಕಲ್‌ವರೆಗೆ ಕಾರ್ಯಕರ್ತರನ್ನು ಜಮಾಯಿಸುವ ತಂತ್ರಕ್ಕೆ ಪಕ್ಷವು ಮೊರೆ ಹೋಯಿತು. ಮೇಖ್ರಿ ಸರ್ಕಲ್‌ನಲ್ಲಿ ಮೋದಿಯವರು ತಮ್ಮ ಕಾರು ನಿಲ್ಲಿಸಿ ಕಾರ್ಯಕರ್ತರತ್ತ ಕೈಬೀಸಿ ಅಭಿವಂದನೆ ಸ್ವೀಕರಿಸಿದರು. 

ಬಿಜೆಪಿಯು ದೇಶದ ಯಾವುದೇ ರಾಜ್ಯದ ಚುನಾವಣೆಗಳನ್ನೂ ಹಗುರವಾಗಿ ಪರಿಗಣಿಸಿಲ್ಲ. ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಪಂಜಾಬ್‌ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಸಿಗುವುದಿಲ್ಲ ಎಂಬ ಅರಿವು ಇದ್ದರೂ, ಮೋದಿ ಗರಿಷ್ಠ ಪ್ರಮಾಣದಲ್ಲಿ ಪ್ರಚಾರ ನಡೆಸಿದರು. ಸೋಲುತ್ತದೆ ಎಂಬ ಮಾಹಿತಿ ಇದ್ದ ರಾಜ್ಯಗಳಲ್ಲೂ ಸೋಲನ್ನು ಗೆಲವಾಗಿ ಪರಿವರ್ತಿಸಲು ಮೋದಿ ಆರಂಭದಿಂದಲೇ ಶ್ರಮ ಹಾಕಿದ್ದರು. ಮುಂದಿನ ಏಪ್ರಿಲ್‌–ಮೇ ತಿಂಗಳಲ್ಲಿ ರಾಜ್ಯದ ವಿಧಾನಸಭೆಗೆ ನಡೆಯುವ ಚುನಾವಣೆಗೆ ಇದು ಆರಂಭಿಕ ಪ್ರವಾಸ ಎಂದೇ ಬಿಜೆಪಿ ಬಿಂಬಿಸಿದೆ. ಮುಂದೆ ಇಂತಹ ಹಲವು ಕಾರ್ಯಕ್ರಮಗಳ ಶಂಕುಸ್ಥಾಪನೆ ಅಥವಾ ಉದ್ಘಾಟನೆಗಳಿಗಾಗಿ ರಾಜ್ಯಕ್ಕೆ ಪದೇ ಪದೇ ಮೋದಿಯವರು ಭೇಟಿ ನೀಡಲಿದ್ದಾರೆ. ಆ ಮೂಲಕ ಬಿಜೆಪಿ ಪರ ಅಲೆ ಸೃಷ್ಟಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕರ್ನಾಟಕವು ಬಿಜೆಪಿಯ ಪಾಲಿಗೆ ದಕ್ಷಿಣದ ಮಹತ್ವದ ರಾಜ್ಯವಾಗಿದೆ. ರಾಜ್ಯದ ಆಡಳಿತದಲ್ಲಿನ ಲೋಪಗಳು ಮೋದಿಯವರ ಗಮನದಲ್ಲೂ ಇದೆ. ಅಲ್ಲದೆ, ಪಕ್ಷದ ಸ್ಥಿತಿಗತಿಯ ಬಗ್ಗೆ ಈಗಾಗಲೇ ಹಲವು ಸುತ್ತಿನ ಆಂತರಿಕ ಸಮೀಕ್ಷೆಗಳನ್ನು ನಡೆಸಿದ್ದು, ಅದಕ್ಕೆ ತಕ್ಕಂತೆ ತಂತ್ರಗಾರಿಕೆಯನ್ನು ಪಕ್ಷವು ಹೆಣೆಯುತ್ತಿದೆ. ಮೋದಿ ಪ್ರವಾಸವೂ ಅದರ ಭಾಗ ಎಂದು ವಿಶ್ಲೇಷಿಸಲಾಗಿದೆ.

ಕಾರ್ಯಕರ್ತರಲ್ಲಿ ಉತ್ಸಾಹ: ನಳಿನ್ ಕುಮಾರ್‌ ಕಟೀಲ್‌

ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಕರ್ನಾಟಕ ಭೇಟಿ ಕಾರ್ಯಕರ್ತರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

‘ಈ ಭೇಟಿಯು ನಮ್ಮೆಲ್ಲ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಸುಮಾರು ₹33 ಸಾವಿರ ಕೋಟಿ ಮೊತ್ತದ 19ಕ್ಕೂ ಹೆಚ್ಚು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರಿಂದ ಕರ್ನಾಟಕವು ಸಮಗ್ರ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮುನ್ನಡೆಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು