ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾರ್ಯಕ್ರಮದ ವೇದಿಕೆಗೆ ಆಹ್ವಾನಿಸಿ ಬಿಎಸ್‌ವೈಗೆ ಮೋದಿ ಗೌರವ

Last Updated 3 ಸೆಪ್ಟೆಂಬರ್ 2022, 4:42 IST
ಅಕ್ಷರ ಗಾತ್ರ

ಮಂಗಳೂರು:ಬಿಜೆಪಿ ಪ್ರಮುಖರ ಸಭೆಗೆ ಬಂದಿದ್ದ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಜತೆ ಪಾಲ್ಗೊಳ್ಳಲು ಸ್ವತಃ ಪ್ರಧಾನಿ ಮೋದಿಯವರೇ ವೇದಿಕೆಗೆ ಆಹ್ವಾನಿಸಿದರು. ಅಲ್ಲದೇ, ವೇದಿಕೆಯಲ್ಲಿ ರಾಜ್ಯಪಾಲರ ಪಕ್ಕದಲ್ಲಿಯೇ ಅವರಿಗೆ ಆಸನ ಕಲ್ಪಿಸಲಾಯಿತು.

ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿಶುಕ್ರವಾರ ನಡೆದ ಸಮಾವೇಶದದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಇದೇ ವೇಳೆ ಅವರು ₹ 3,800 ಕೋಟಿ ಮೊತ್ತದ 8 ಯೋಜನೆಗಳಿಗೆ ಚಾಲನೆ ನೀಡಿದರು.

ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಯಡಿಯೂರಪ್ಪ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಚುನಾವಣೆಗೆ ಅವರ ಬಲವನ್ನು ಬಳಸಿಕೊಳ್ಳಲು ಮುಂದಾಗಿರುವ ಮೋದಿ, ಅವರಿಗೆ ಆದ್ಯತೆ ಕೊಟ್ಟರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆಯದೇ ಇದ್ದುದಕ್ಕೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು ಎಂದೂ ಹೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರನ್ನು ಸಮಾಧಾನಪಡಿಸುವ ಕೆಲಸವನ್ನು ಪ್ರಧಾನಿ ಮಾಡಿದರು.

ಬಳಿಕಬಿಜೆಪಿ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡ ಮೋದಿ,'ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ, ಪ್ರತಿ ತಿಂಗಳೂ ಕರ್ನಾಟಕಕ್ಕೆ ಬರುತ್ತೇನೆ' ಎಂದು ಹೇಳಿ ವಿಶ್ವಾಸ ತುಂಬಿದರು.

‘ನಿಮ್ಮ ಅರಿವಿಗೆ ಬಂದಿದೆಯೊ ಇಲ್ಲವೋ, ಇವತ್ತಿಗೂ ಕರ್ನಾಟಕದ ಜನತೆಯ ನಾಡಿಮಿಡಿತ ಬಿಜೆಪಿ ಪರವಾಗಿಯೇ ಇದೆ. ರಾಜಕೀಯ ಸಮಾವೇಶಗಳಿಗೆ ಅಪಾರ ಪ್ರಮಾಣದ ಜನ ಬರುವುದು ಸಹಜ. ಆದರೆ ಸರ್ಕಾರಿ ಕಾರ್ಯಕ್ರಮಕ್ಕೆ ಭಾರಿ ಜನ ಸೇರಿರುವುದು ವಿಶೇಷ. ನೀವು ಕೆಲವು ಕಡೆಗಳಲ್ಲಿ ಅಲ್ಲಿನ ಪರಿಸ್ಥಿತಿ ಅರಿತುಕೊಂಡು ಕೆಲಸ ಮಾಡಿ. ತಿಂಗಳಿಗೊಮ್ಮೆ ಜಿಲ್ಲಾವಾರು ಅಥವಾ ವಿಭಾಗವಾರು ಸಮಾವೇಶವನ್ನು ಹಮ್ಮಿಕೊಳ್ಳಿ, ನಾನು ಭಾಗವಹಿಸಲು ಸಿದ್ಧನಿದ್ದೇನೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಮನೆ– ಮನೆಗೂ ತಲುಪುವಂತೆ ನೋಡಿಕೊಳ್ಳಿ’ ಎಂದು ಸೂಚನೆ ನೀಡಿದರು.

ಸುಮಾರು 20 ನಿಮಿಷಗಳ ಕಾಲ ಪ್ರಮುಖ ನಾಯಕರೊಂದಿಗೆ ಚಹಾ ಸೇವಿಸುತ್ತಾ ಮಾತುಕತೆ ನಡೆಸಿದರು. ಈ ವೇಳೆ, ರಾಜ್ಯಕ್ಕೆ ನಿರಂತರವಾಗಿ ಭೇಟಿ ನೀಡುವಂತೆ ಪಕ್ಷದ ನಾಯಕರು ಪ್ರಧಾನಿಗೆ ಮನವಿ ಮಾಡಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ಚುನಾವಣೆಗಾಗಿ ರೂಪಿಸಿದ ನೀಲನಕ್ಷೆಯನ್ನು ವಿವರಿಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಆಡಳಿತ ಮತ್ತು ಹಲವು ಕಾರ್ಯಕ್ರಮಗಳ ಬಗ್ಗೆ ಮೋದಿ ಅವರಿಗೆ ವಿವರ ನೀಡಿದರು.

‘ಚುನಾವಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಯಡಿಯೂರಪ್ಪ ಅವರ ಮಾರ್ಗದರ್ಶನ ಪಡೆಯಿರಿ. ಈ ಹಿಂದೆ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿ ಜನರ ವಿಶ್ವಾಸ ಮತ್ತು ಮನಸ್ಸು ಗೆದ್ದ ಕಾರಣವೇ ಬಿಜೆಪಿ ಆ ರಾಜ್ಯಗಳಲ್ಲಿ ಗೆಲ್ಲಲು ಸಾಧ್ಯವಾಯಿತು’ ಎಂದೂ ಮೋದಿ ಕಿವಿ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT